Site icon Vistara News

ಧರ್ಮ ಒಡೆಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ: ಜತೆಗಿದ್ದವರು ದಾರಿ ತಪ್ಪಿಸಿದರು ಎಂದ ಮಾಜಿ ಸಿಎಂ?

siddaramaiah visits rambhapuri math

ಚಿಕ್ಕಮಗಳೂರು: ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಮ್ಮ ಜತೆಗಿದ್ದವರು ದಾರಿ ತಪ್ಪಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಮಾತುಗಳನ್ನು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

ಅತಿ ವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಪೀಠದಲ್ಲಿರುವ ಭದ್ರಕಾಳಿ ಅಮ್ಮನ ದೇವಾಲಯಕ್ಕೆ ಪ್ರದಕ್ಷಿಣೆ ನಮಸ್ಕಾರ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿದ ಸ್ವಾಮೀಜಿ, ರುದ್ರಾಕ್ಷಿ ಸರವನ್ನು ತೊಡಿಸಿದರು. ಚುನಾವಣೆವರೆಗೆ ನಿಮ್ಮ ಕುತ್ತಿಗೆಯಲ್ಲೇ ಇದು ಇದ್ದರೆ ಉತ್ತಮ ಎಂಬ ಸಲಹೆಯನ್ನು ನೀಡಿದರು.

ಇದನ್ನೂ ಓದಿ | Obc reservation | ವೀರಶೈವ ಲಿಂಗಾಯತ ಒಳಪಂಗಡಗಳ ಸೇರ್ಪಡೆ

ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಸ್ವಾಮೀಜಿಯವರು, ರಾಯಚೂರು ದೇವದುರ್ಗದ ಸಾಮೂಹಿಕ ವಿವಾಹಕ್ಕೆ ಸಿದ್ದರಾಮಯ್ಯ ಬಂದಿದ್ದರು. ನೀವು ಪಕ್ಕದ ಶೃಂಗೇರಿಗೆ ಬಂದು ಹೋದಿರಿ, ರಂಭಾಪುರಿ ಪೀಠಕ್ಕೆ ಬಂದಿಲ್ಲ, ಮುಂದೆ ಯಾವತ್ತಾದರೂ ಬಂದು ಆಶೀರ್ವಾದ ಪಡೆದುಕೊಂಡುಹೋಗಿ ಎಂದು ಹೇಳಿದ್ದೆವು. ಇಂದು ಅದನ್ನು ನೆನಪಿನಲ್ಲಿಟ್ಟುಕೊಂಡು ಬಂದಿದ್ದಾರೆ. ಬಂದ ಎಲ್ಲರಿಗೂ ಆಶೀರ್ವಾದ ಮಾಡಿ ಕಳಿಸುವುದು ಪೀಠದ ಸಂಪ್ರದಾಯ. ಅದರಂತೆ ಪೀಠದ ರಕ್ಷಾ ಕವಚ ಹೊದಿಸಿ ಶುಭ ಹಾರೈಸಿದ್ದೇವೆ ಎಂದರು.

ಕಳೆದ ಚುನಾವಣೆ ವೇಳೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಕುರಿತು ಮಾತನಾಡಿದ ಸ್ವಾಮೀಜಿ, ಈ ಹಿಂದೆ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವೀರಶೈವದಿಂದ ಲಿಂಗಾಯತವನ್ನು ಒಡೆಯಲು ಕುಮ್ಮಕ್ಕು ಕೊಟ್ಟಿದ್ದಾರೆ ಎಂಬ ಆರೋಪ ಸಿದ್ದರಾಮಯ್ಯ ಅವರ ಮೇಲಿತ್ತು. ಅವರ ಮನಸ್ಸಿನ ಒಳಗಿನ ದುಗುಡವನ್ನು ಪ್ರಾಂಜಲ ಮನಸ್ಸಿನಿಂದ ಇಂದು ಮಾತನಾಡಿದರು. ನಾನು ಅಂತಹ ಪ್ರಯತ್ನ ಮಾಡಲಿಲ್ಲ, ಕೆಲವರು ನನ್ನ ದಾರಿ ತಪ್ಪಿಸಿದರು. ಖಂಡಿತವಾಗಿ ಇದಕ್ಕಾಗಿ ಪಶ್ಚಾತ್ತಾಪ ಆಗಿದೆ. ಧರ್ಮದ ವಿಚಾರದಲ್ಲಿ ಇನ್ನುಮುಂದೆ ಪ್ರವೇಶ ಮಾಡುವುದಿಲ್ಲ. ಜನರ ಕಲ್ಯಾಣ, ರಾಜ್ಯದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುವುದು ನನ್ನ ಗುರಿ ಎಂದು ಹೇಳಿದರು ಎಂದು ಸ್ವಾಮೀಜಿ ತಿಳಿಸಿದರು.

ಮಠಕ್ಕೆ ಬರಬೇಕು ಎಂಬ ಹಂಬಲ ಇತ್ತು. ಇಂದು ಆ ಸಮಯ ಕೂಡಿಬಂದಿದ್ದು ಪುಣ್ಯ ಎಂದರು. ಈ ಸಂದರ್ಭದಲ್ಲಿ, ಯಾವುದೇ ರಾಜಕೀಯ ವಿಚಾರವನ್ನು ಪ್ರಸ್ತಾಪ ಮಾಡಲಿಲ್ಲ. ಕರ್ನಾಟಕ ಸಮೃದ್ಧವಾಗಿ, ಸಬಲವಾಗಿ ಹೊರಬರಲು ಸರ್ಕಾರದ ಜತೆಗೆ ವಿರೋಧಪಕ್ಷಗಳೂ ಸಹಕರಿಸಿ ಕೆಲಸ ಮಾಡಬೇಕಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ | ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಸಿದ್ದರಾಮಯ್ಯ ಭೇಟಿ

Exit mobile version