ಮೈಸೂರು: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ (Karnataka Election) ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕ ಎಸ್.ಎ. ರಾಮದಾಸ್ ಅವರು, ಮನೆಗೆ ಬಂದ ಸಂಸದ ಪ್ರತಾಪ್ ಸಿಂಹ ಹಾಗೂ ಅಭ್ಯರ್ಥಿ ಶ್ರೀವತ್ಸ ಅವರನ್ನು ಭೇಟಿಯಾಗಲು ನಿರಾಕರಿಸಿರುವ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ.
ಬಿಜೆಪಿ ಟಿಕೆಟ್ ಘೋಷಣೆಯಾದ ಬಳಿಕ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ, ಸಂಸದ ಪ್ರತಾಪ್ ಸಿಂಹ, ಕ್ಷೇತ್ರ ಉಸ್ತುವಾರಿ ರಾಜೀವ್ ಬಬ್ಬರ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಅವರ ಜತೆ ಶಾಸಕ ರಾಮದಾಸ್ ಅವರ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಬೆಂಬಲಿಗರ ಸಭೆ ನಡೆಸುತ್ತಿದ್ದ ಶಾಸಕ ರಾಮದಾಸ್, ಬಿಜೆಪಿ ನಾಯಕರನ್ನು ಭೇಟಿಯಾಗದೆ ಕಳುಹಿಸಿದ್ದಾರೆ. ಹೀಗಾಗಿ ಫೋನ್ ಮೂಲಕ ಸಂಪರ್ಕ ಮಾಡಲು ಯತ್ನಿಸಿದರೂ ಅವರು ಹೊರಬಂದಿಲ್ಲ. ಬಿಜೆಪಿ ನಾಯಕರನ್ನು ಭೇಟಿಯಾಗಲು ಶಾಸಕರು, ಮಂಗಳವಾರ ಸಮಯ ನಿಗದಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Karnataka Elections : ಜನಾರ್ದನ ರೆಡ್ಡಿಗಿಂತಲೂ ಪತ್ನಿ ಅರುಣಲಕ್ಷ್ಮಿಯೇ ಶ್ರೀಮಂತೆ; ಸಂಪತ್ತು ಎಷ್ಟಿದ್ದರೇನೂ ಅವರ ಬಳಿ ವಾಹನಗಳೇ ಇಲ್ಲ!
30 ವರ್ಷದಿಂದ ತಾಯಿ ಮನೆಯಲ್ಲಿದ್ದೆ, ಈಗ ಹೊರಹಾಕಿದ್ದಾರೆ
ಸಭೆಯ ಬಳಿಕ ಮಾತನಾಡಿರುವ ಶಾಸಕ ರಾಮದಾಸ್, 30 ವರ್ಷಗಳಿಂದ ತಾಯಿ ಮನೆಯಲ್ಲಿದ್ದೆ. ಈಗ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ತಾಯಿ ಮನೆಯಲ್ಲಿ ಇರಬೇಕೇ, ಬೇಡವೇ ಎಂದು ಮಂಗಳವಾರ ಸಂಜೆ ತಿಳಿಸುತ್ತೇನೆ. ನಾನು ಯಾರನ್ನೂ ಭೇಟಿ ಮಾಡಲ್ಲ. ಯಾರ ಜತೆಯೂ ಮಾತುಕತೆ ನಡೆಸಲ್ಲ. ನನ್ನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಭೇಟಿ ಮಾಡಲು ರಾಮದಾಸ್ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಹೆಣಗಾಡಿದ ಸಂಸದ ಪ್ರತಾಪ್ ಸಿಂಹ ಅವರು, ಶಾಸಕ ರಾಮದಾಸ್ ನಮ್ಮಣ್ಣ. ಶ್ರೀವತ್ಸ ಅವರ ಸಹೋದರ. ಅವರೇ ಮುಂದೆ ನಿಂತು ಶ್ರೀವತ್ಸರನ್ನು ಗೆಲ್ಲಿಸುತ್ತಾರೆ. ಈಗ ಕಾರ್ಯಕರ್ತರ ಜತೆ ಮಾತನಾಡುತ್ತಿದ್ದಾರೆ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಸಮಾಧಾನ ಮಾಡುತ್ತಿದ್ದಾರೆ. ನಾಳೆ ಭೇಟಿಯಾಗುತ್ತೇನೆ ಅಂತ ಹೇಳಿದ್ದಾರೆ. ರಾಮದಾಸ್ ಪಕ್ಷವನ್ನೇ ತಾಯಿ ಅಂದುಕೊಂಡಿದ್ದಾರೆ. ಅವರು ಎಂದಿಗೂ ತಾಯಿಯನ್ನು ತೊರೆಯುವುದಿಲ್ಲ ಎಂದು ಹೇಳಿದರು.
ರಾಮದಾಸ್ ನನ್ನನ್ನು ವಿರೋಧ ಮಾಡುವುದಿಲ್ಲ
ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಮಾತನಾಡಿ, ರಾಮದಾಸ್ ನನ್ನನ್ನು ಎಂದಿಗೂ ವಿರೋಧ ಮಾಡುವುದಿಲ್ಲ. ರಾಮದಾಸ್ ಅವರೇ ಎರಡನೇ ಹೆಸರಾಗಿ ನನ್ನನ್ನು ಶಿಫಾರಸು ಮಾಡಿದ್ದಾರೆ. ನನ್ನ ಹೆಸರು ಶಿಫಾರಸು ಮಾಡಿರುವುದು ನನಗೂ ಗೊತ್ತಾಗಿದೆ. ಯಾವುದೇ ಕಾರಣಕ್ಕೂ ನನ್ನ ವಿರುದ್ಧ ರಾಮದಾಸ್ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Karnataka Election 2023: ರಾಮದಾಸ್ ಕ್ಷೇತ್ರದಲ್ಲಿ ಶ್ರೀವತ್ಸಗೆ ಬಿಜೆಪಿ ಟಿಕೆಟ್; ತಬ್ಬಿ ಅಭಿನಂದಿಸಿದ ಪ್ರತಾಪ್ ಸಿಂಹ
ಶಾಸಕ ಎಸ್.ಎ. ರಾಮದಾಸ್‌ಗೆ ಟಿಕೆಟ್ ಕೈತಪ್ಪಲು ಕಾರಣ ಬಿ.ಎಲ್. ಸಂತೋಷ್?
ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್‌ಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ಬಗ್ಗೆ ಹಲವು ದಿನಗಳಿಂದ ಅವರು ನಡೆಸುತ್ತಿದ್ದ ಪ್ರಯತ್ನ ವಿಫಲಗೊಂಡಿದೆ. ಕೊನೆಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಿಗಿಪಟ್ಟಿಗೆ ಜಯ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಆಪ್ತ ಟಿ.ಎಸ್. ಶ್ರೀವತ್ಸ ಅವರಿಗೆ ಬಿಜೆಪಿ ಟಿಕೆಟ್ ಒಲಿದಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿ ಪರಿಚಯವಿದ್ದರೂ ಟಿಕೆಟ್ ಪಡೆಯುವಲ್ಲಿ ರಾಮದಾಸ್ ವಿಫಲವಾಗಿದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ 4 ಬಾರಿ ಗೆಲುವು, 2 ಬಾರಿ ಸೋಲು ಕಂಡಿರುವ ರಾಮದಾಸ್ ಅವರು ಈ ಬಾರಿ ಶಾಸಕರಾಗಿದ್ದರೂ ಟಿಕೆಟ್ ಕೈತಪ್ಪಿರುವುದು ಭಾರಿ ಹತಾಶೆಯನ್ನುಂಟು ಮಾಡಿದೆ. 1994, 1999, 2008, 2018ರ ಚುನಾವಣೆಯಲ್ಲಿ ಗೆಲುವು ರಾಮದಾಸ್ ಗೆಲುವು ದಾಖಲಿಸಿದ್ದರೆ, 2004, 2013ರಲ್ಲಿ ಸೋಲು ಕಂಡಿದ್ದರು. ರಾಮದಾಸ್ ಅವರಿಗೆ ಟಿಕೆಟ್ ಮಿಸ್ ಆಗಲು ಹಾಗೂ ಶ್ರೀವತ್ಸ ಟಿಕೆಟ್ ಪಡೆಯಲು ಪ್ರಮುಖ ಅಂಶಗಳೇನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ರಾಮದಾಸ್‌ಗೆ ಟಿಕೆಟ್ ಮಿಸ್ ಆಗಲು ಕಾರಣ
- ಬರೋಬ್ಬರಿ ಆರು ಚುನಾವಣೆಯಲ್ಲಿ ಅವಕಾಶ ನೀಡಿರುವುದು
- ಹಳೇ ಮೈಸೂರು ಭಾಗದ ಹಿರಿಯ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವರಾದರೂ ಕೆ.ಆರ್.ಕ್ಷೇತ್ರ ಬಿಟ್ಟು ಜಿಲ್ಲೆ, ಪ್ರಾದೇಶಿಕ ನಾಯಕತ್ವ ವಹಿಸಿಕೊಳ್ಳದೆ ಇರುವುದು
- ವೈಯುಕ್ತಿಕ ಕಾರಣಕ್ಕಾಗಿ ಕಾರ್ಯಕರ್ತರೊಂದಿಗೆ ನಿಷ್ಠುರ ಆಗಿರುವುದು, ಖಾಸಗಿ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೈಕಮಾಂಡ್ ಹಂತಕ್ಕೆ ಯಶಸ್ವಿಯಾಗಿ ತಲುಪಿಸಿದ ವಿರೋಧಿ ಪಡೆ
- ಪ್ರಧಾನಿ ನರೇಂದ್ರ ಮೋದಿ ಕುಟುಂಬದ ಆತ್ಮೀಯತೆ ಕಾರಣಕ್ಕೆ ಇತರೆ ರಾಜ್ಯ, ರಾಷ್ಟ್ರದ ಹೈಕಮಾಂಡ್ ನಾಯಕರ ಕಡೆಗಣನೆ
ಟಿ.ಎಸ್.ಶ್ರೀವತ್ಸಗೆ ಟಿಕೆಟ್ ಸಿಗಲು ಕಾರಣ
- 1988ರಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ
- ಇದುವರೆಗೂ ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದಾರೆ, ಯಾವುದೇ ಚುನಾವಣೆಯನ್ನು ಎದುರಿಸಿಲ್ಲ
- ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಪ್ತ
- ಕೃಷ್ಣರಾಜ ಕ್ಷೇತ್ರದಲ್ಲಿ ಇರೋದು ಪಕ್ಷದ ಮತ, ವ್ಯಕ್ತಿ ಗೌಣ ಎನ್ನುವ ಟ್ರೆಂಡ್