Site icon Vistara News

ಎರಡನೇ ʼಆಪರೇಷನ್‌ʼಗೆ ರಮೇಶ್‌ ಜಾರಕಿಹೊಳಿ ಸಜ್ಜು: ಮುಂಬೈಯಲ್ಲಿ ವಾಸ

ramesh jharkiholi meets devendra fadnavis

ಅನಿಲ್ ಕಾಜಗಾರ ಬೆಳಗಾವಿ
ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಇದೀಗ ಎರಡನೇ ʼಆಪರೇಷನ್‌ʼಗೆ ಸಿದ್ಧವಾಗಿದ್ದಾರೆ. ಪತನದ ಅಂಚಿನಲ್ಲಿರುವ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ವಿಕಾಸ್‌ ಅಘಾಡಿ(ಎಂವಿಎ) ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪಾತ್ರ ವಹಿಸಲು ಮುಂದಾಗಿದ್ದಾರೆ.

ಮೂರು ಪಕ್ಷಗಳನ್ನು ಒಳಗೊಂಡ ಮಹಾರಾಷ್ಟ್ರ ಮೈತ್ರಿ ಸರ್ಕಾರವೀಗ ಪತನದ ಅಂಚಿನಲ್ಲಿದೆ. 40ಕ್ಕೂ ಅಧಿಕ ಶಾಸಕರು ಎಂವಿಎ ವಿರುದ್ಧ ಬಂಡೆದಿದ್ದಾರೆ. ಇಂಥ ಸಮಯದಲ್ಲೇ ರಮೇಶ್ ಜಾರಕಿಹೊಳಿ ಮುಂಬೈನಲ್ಲಿ ಠಿಕಾಣಿ ಹೂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಜಾರಕಿಹೊಳಿ ಸಹೋದರರ ಭೇಟಿಯಾದ ಕಟೀಲ್‌; ರಮೇಶ್‌ಗೆ ಮತ್ತೆ ಸಿಗುತ್ತಾ ಮಂತ್ರಿ ಸ್ಥಾನ?

ಅಂದು ಕರ್ನಾಟಕ, ಇಂದು ಮಹಾರಾಷ್ಟ್ರ

ಕರ್ನಾಟಕದಲ್ಲಿ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ನಂತರ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಆಗ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು‌. ಆದರೆ ಬಹುಮತ ಸಾಬೀತುಪಡಿಸಲು ಯಡಿಯೂರಪ್ಪ ಅವರಿಂದ ಸಾಧ್ಯವಾಗಲಿಲ್ಲ. ಇದರ ಪರಿಣಾಮ ಜೆಡಿಎಸ್-ಕಾಂಗ್ರೆಸ್ ಮೈತ್ರಿ ‌ಸರ್ಕಾರ ಅಧಿಕಾರಕ್ಕೆ ಬಂದಿತ್ತು.

ಎಚ್‌ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದರು. 14 ತಿಂಗಳು ಆಗುತ್ತಿದ್ದಂತೆ ಮೈತ್ರಿ ಸರ್ಕಾರದ ವಿರುದ್ಧ 17 ಶಾಸಕರು ಬಂಡಾಯ ಎದ್ದಿದ್ದರು. ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಮುನ್ನುಡಿ ಬರೆದವರಲ್ಲಿ ರಮೇಶ್ ಜಾರಕಿಹೊಳಿ ಕೂಡ ಒಬ್ಬರು. ಕರ್ನಾಟಕದ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೀಗ ರಾಜಕೀಯ ಬೆಳವಣಿಗೆ ನಡೆಯುತ್ತಿವೆ. ಕಳೆದ ನಾಲ್ಕು ದಿನಗಳಿಂದ ರಮೇಶ್ ಜಾರಕಿಹೊಳಿ ಮುಂಬೈನಲ್ಲಿ ಠಿಕಾಣಿ ಹೂಡಿರುವುದು ಕುತೂಹಲ ಮೂಡಿಸಿದೆ.

ರಾಜಕೀಯ ಗುರುವಿನ ಋಣ ತೀರಿಸಲು ಮುಂದಾದರ?

ಎಚ್‌ಡಿಕೆ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರಿಗೆ ಆಶ್ರಯ ನೀಡಿದ್ದೇ ಅಂದಿನ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ‌ಸರ್ಕಾರ. ಮಹಾರಾಷ್ಟ್ರ ಸಿಎಂ ಆಗಿದ್ದ ದೇವೇಂದ್ರ ಫಡ್ನವೀಸ್ ತಿಂಗಳ‌ ಕಾಲ 17 ಶಾಸಕರಿಗೆ ವೈಭವದ ಆಶ್ರಯ ನೀಡಿದ್ದರು. ರಮೇಶ್ ಜಾರಕಿಹೊಳಿ ಹಾಗೂ ದೇವೇಂದ್ರ ಫಡ್ನವಿಸ್ ನಡುವಿನ ಸ್ನೇಹ ದಿನಕಳೆದಂತೆ ವೃದ್ಧಿಯಾಗಿದೆ. ಆಗಾಗ ರಮೇಶ್ ಮುಂಬೈ ಪ್ರವಾಸ ಕೈಗೊಂಡು ಫಡ್ನವಿಸ್ ಭೇಟಿ ಆಗುತ್ತಲೇ ಇರುತ್ತಾರೆ.

ಫಡ್ನವಿಸ್ ನನ್ನ ರಾಜಕೀಯ ಗುರು ಎಂದು ರಮೇಶ್ ಹಲವು ಬಾರಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಸಿ.ಡಿ. ಪ್ರಕರಣದಲ್ಲಿ ರಮೇಶ್ ರಾಜೀನಾಮೆ ನೀಡಿದ್ದಾಗ ಬಿಜೆಪಿ ಬಹುತೇಕ ನಾಯಕರು ರಮೇಶ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಫಡ್ನವಿಸ್ ಮಾತ್ರ ರಮೇಶ್ ಬೆನ್ನಿಗೆ ನಿಂತಿದ್ದರು. ಇದು ಇಬ್ಬರ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಈಗ ಮಹಾವಿಕಾಸ ಅಘಾಡಿ ವಿರುದ್ಧ 40 ಶಾಸಕರು ಬಂಡೆದ್ದು ರೆಸಾರ್ಟ್ ಸೇರಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ತಾಲೀಮು ಚುರುಕುಗೊಂಡಿದ್ದು, ಫಡ್ನವಿಸ್‌ಗೆ ರಮೇಶ್ ಸಹಕಾರ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಎರಡನೇ ದಿನವೂ ಹೈಡ್ರಾಮಾ ಮುಂದುವರೆದಿದೆ. ಇತ್ತ ಬಿಜೆಪಿ ಕೂಡ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ಈ ನಡುವೆ ರಮೇಶ್‌ ಜಾರಕಿಹೊಳಿ ಮುಂಬೈಯಲ್ಲಿದ್ದಾರೆ. ಆದರೆ ಬಿಜೆಪಿ ಸರ್ಕಾರ ರಚನೆಯಲ್ಲಿ ನಿರ್ದಿಷ್ಟವಾಗಿ ಯಾವ ಪಾತ್ರ ವಹಿಸುತ್ತಿದ್ದಾರೆ ಎನ್ನುವುದು ಮಾತ್ರ ಕುತೂಹಲಕಾರಿಯಾಗಿಯೇ ಉಳಿದಿದೆ. ಕೆಲವೇ ದಿನಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಲಭಿಸಲಿದೆ.

ಇದನ್ನೂ ಓದಿ | ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವತ್‌ !

Exit mobile version