Site icon Vistara News

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

Rameshwaram Cafe blast

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣದ (Rameshwaram Cafe Blast) ಇಬ್ಬರು ಆರೋಪಿಗಳಿಗೆ ಎನ್.ಐ.ಎ ವಿಶೇಷ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಎನ್‌ಐಎ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಶಂಕಿತ ಉಗ್ರರನ್ನು ಎನ್.ಐ.ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ ಹಿನ್ನೆಲೆ ಆರೋಪಿಗಳಾದ ಅಬ್ದುಲ್ ಮತೀ‌ನ್ ತಾಹ ಮತ್ತು ಮುಸಾವೀರ್ ಹುಸೇನ್‌ಗೆ ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಏಪ್ರಿಲ್ 12ರಂದು ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾದ ಬಳಿಕ ಪುನಃ 7 ದಿನ ಕಸ್ಟಡಿಗೆ ಪಡೆಯಲಾಗಿತ್ತು. ಇದೀಗ ಸೋಮವಾರ ಎನ್‌ಐಎ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ | Hassan Pen Drive Case: ಪ್ರಜ್ವಲ್‌ ಪ್ರಕರಣಕ್ಕೆ ಅಚ್ಚರಿಯ ತಿರುವು; ಅವರು ಹಾಗೆ ಮಾಡಿಯೇ ಇಲ್ಲ ಎಂದ ದೂರುದಾರೆಯ ಅತ್ತೆ!

ಮಾರ್ಚ್ 1ರಂದು ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರಸಹಿತ 9 ಜನರು ಗಾಯಗೊಂಡಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಲಾಗಿತ್ತು. ಪ್ರಕರಣ ಸಂಬಂಧ ಹಲವೆಡೆ ಶೋಧ ನಡೆಸಿದ್ದ ಎನ್​ಐಎ ಅಧಿಕಾರಿಗಳು ಸುಮಾರು 40 ದಿನಗಳ ಬಳಿಕ ಕೋಲ್ಕೊತಾದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು.

ಸುಪ್ರೀಂ ಆದೇಶದಂತೆ ಕೋರ್ಟ್‌ಗೆ ಶರಣಾದ ಮುರುಘಾ ಶ್ರೀ; ಮತ್ತೆ 1 ತಿಂಗಳು ಜೈಲು

Murugha Seer

ಚಿತ್ರದುರ್ಗ: ಸುಪ್ರೀಂ ಕೋರ್ಟ್‌ ಆದೇಶದಂತೆ ಮುರುಘಾ ಶರಣರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಪೋಕ್ಸೊ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಶ್ರೀಗಳಿಗೆ (Murugha Seer) ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ಏ.23ರಂದು ರದ್ದು ಮಾಡಿ, ಶರಣಾಗತಿಯಾಗುವಂತೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಚಿತ್ರದುರ್ಗ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಸೋಮವಾರ ಶರಣಾಗಿದ್ದಾರೆ. ಅವರಿಗೆ ಮೇ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ಎಸ್.ಎನ್.ಕಲ್ಕಣಿ ಆದೇಶ ನೀಡಿದ್ದಾರೆ.

ಪೋಕ್ಸೋ ಕೇಸ್ ವಿಚಾರಣೆ ಮುಗಿದು ತೀರ್ಪು ಬರುವವರೆಗೂ ಮುರುಘಾ ಶ್ರೀಗಳನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿ, ಒಂದು ವಾರದೊಳಗೆ ಶರಣಾಗತಿ ಆಗುವಂತೆ ಶ್ರೀಗಳಿಗೆ ಸೂಚಿಸಿತ್ತು. ಹೀಗಾಗಿ ಶ್ರೀಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಅವರನ್ನು ಪೊಲೀಸರು ಜೈಲಿಗೆ ಕರೆದೊಯ್ಯಲಿದ್ದಾರೆ.

2022 ಆಗಸ್ಟ್‌ 31 ರಂದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್‌ 1ರಂದು ಶ್ರೀಗಳ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ, ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿದ್ದರಿಂದ ಇದೀಗ ಶ್ರೀಗಳು ಮತ್ತೆ ಜೈಲು ಸೇರುವಂತಾಗಿದೆ.

ಇದನ್ನೂ ಓದಿ | Car Accident: ಮಾದಾವರ ಟೋಲ್‌ಗೇಟ್ ಬಳಿ ಕಾರು ಅಪಘಾತ ಪ್ರಕರಣ; ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಸಾವು

ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಚಿತ್ರದುರ್ಗದ ಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಈಗಾಗಲೇ ಸೂಚನೆ ನೀಡಿದ್ದು, ಸಾಕ್ಷ್ಯಗಳ ವಿಚಾರಣೆ ಮುಗಿಯುವ ತನಕ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ತಿಳಿಸಿತ್ತು.

Exit mobile version