ಬೆಳಗಾವಿ: ಸಿದ್ದರಾಮಯ್ಯ ಅವರು ಕ್ಷೇತ್ರವಿಲ್ಲದೆ ಪರದೇಶಿಯಂತೆ ಓಡಾಡುತ್ತಿರುವ ಗಿರಾಕಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾಕತ್ತಿದ್ದರೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯ ಅವರು ಎಸೆದಿರುವ ಸವಾಲಿಗೆ ಪ್ರತ್ಯುತ್ತರ ನೀಡುವ ವೇಳೆ ರಾಮುಲು ಈ ಹೇಳಿಕೆ ನೀಡಿದ್ದಾರೆ.
ʻʻಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆಯ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅವರು ಸಿಎಂ ಆಗಿದ್ದವರು. ಮೊದಲು ಅವರು ತಮ್ಮ ಕ್ಷೇತ್ರ ಯಾವುದು ಎಂದು ಘೋಷಣೆ ಮಾಡಲಿʼʼ ಎಂದು ಶ್ರೀರಾಮುಲು ಸವಾಲು ಹಾಕಿದರು.
ʻʻಸಿದ್ದರಾಮಯ್ಯ ಕ್ಷೇತ್ರ ಇಲ್ಲದೆ ಪರದೇಶಿಯಂತೆ ಓಡಾಡುತ್ತಿದ್ದಾರೆ. ಇಂತಹ ಪರದೇಶಿ ಗಿರಾಕಿಗಳಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ. ಮೊಳಕಾಲ್ಮುರು ಕ್ಷೇತ್ರದಲ್ಲಿ ತಾಕತ್ ಇದ್ರೆ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯ ನನಗೆ ಸವಾಲ್ ಹಾಕಿದ್ದಾರೆ. ನನ್ನ ಸೋಲು, ಗೆಲುವಿನ ಬಗ್ಗೆ ಜನ ತೀರ್ಮಾನ ಮಾಡುತ್ತಾರೆʼʼ ಎಂದಿದ್ದಾರೆ ರಾಮುಲು.
ʻʻಸಿದ್ದರಾಮಯ್ಯನವರೇ ನಾನು ಎಂದೂ ನಿಮ್ಮ ರೀತಿ ನಾನು ರಾಜಕೀಯ ಮಾಡಿಲ್ಲ. ಸುದೀರ್ಘ ಸಮಯ ಜೆಡಿಎಸ್ ಪಕ್ಷದ ಊಟ ಮಾಡಿ ಬಳಿಕ ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ರಿ. ಕಾಂಗ್ರೆಸ್ ಪಕ್ಷದಲ್ಲಿದ್ದು ಡಿಕೆಶಿ, ಪರಮೇಶ್ವರಿಗೆ ಚೂರಿ ಹಾಕುವ ಕೆಲಸ ಮಾಡಿದ್ರಿ. ಜೊತೆಗೆ ಇದ್ದವರನ್ನು ಮುಗಿಸುತ್ತಲೇ ಬಂದ್ರಿ. ಇಂಥವರು ಇವತ್ತು ನನ್ನ ಬದ್ಧತೆ ಬಗ್ಗೆ ಮಾತನಾಡೋದು ಹಾಸ್ಯಾಸ್ಪದʼʼ ಎಂದು ರಾಮುಲು ಹೇಳಿದರು.
ʻʻನೀವು ಸಿಎಂ ಆಗಿ ಕೆಲಸ ನಂತರವೇ ಚಾಮುಂಡೇಶ್ವರಿ ಕ್ಷೇತ್ರದ ಜನ ಸೋಲಿಸಿದರು. ನಿಮ್ಮ ಅಹಂಕಾರದಿಂದಲೇ ನಿಮಗೆ ಸೋಲಾಗಿದೆ. ನಾನು 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. 7 ಸಲ ಸ್ಪರ್ಧೆ ಮಾಡಿ ಐದು ಸಲ ಎಂಎಲ್ಎ, ಒಮ್ಮೆ ಎಂಪಿ ಆಗಿದ್ದೇನೆʼʼ ಎಂದು ಹೇಳಿದರು.
ʻʻನೀವು ಒಂದೇ ಒಂದು ಸಾರಿ ಬಾದಾಮಿಯಿಂದಲೇ ಸ್ಪರ್ಧೆ ಮಾಡ್ತಿನಿ ಅಂಥ ಹೇಳಿಕೆ ಕೊಡಿ ಸಾಕು. ಬಾದಾಮಿ ಜನರು ನಿಮ್ಮ ಮುಖಕ್ಕೆ ಮಂಗಳಾರತಿ ಮಾಡುತ್ತಾರೆ. ಸಿದ್ದರಾಮಯ್ಯ ನವರೇ ಅಹಂಕಾರ ಮಾತು ಬರಬಾರದುʼʼ ಎಂದಿದ್ದಾರೆ ರಾಮುಲು.
ʻʻಸಿದ್ದರಾಮಯ್ಯನವರೇ ನನ್ನ ಕ್ಷೇತ್ರಕ್ಕೆ ಬಂದು ನನಗೆ ಬೈದು ಹೋಗಿದ್ದಿರಿ, ಗೆಲ್ಲುವ ಬಗ್ಗೆ ನನ್ನ ಕ್ಷೇತ್ರದಲ್ಲಿ ಸವಾಲ್ ಹಾಕಿದ್ದೀರಿ. ಮುಂದಿನ ಚುನಾವಣೆ ನಿಮಗೆ ತಕ್ಕ ಪಾಠ ಆಗಲಿದೆ. ನಾನು ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆʼʼ ಎಂದು ಹೇಳಿದರು ಸಚಿವ ರಾಮುಲು.
ಜನಾರ್ದನ ರೆಡ್ಡಿ ರಾಜಕೀಯ
ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯಕ್ಕೆ ಬರುವ ಬಗ್ಗೆ ಕೇಳಿದಾಗ, ʻʻಈ ಬಗ್ಗೆ ಬಿಜೆಪಿ ಪಕ್ಷ ತೀರ್ಮಾನ ಮಾಡುತ್ತದೆ. ಜನಾರ್ದನ ರೆಡ್ಡಿ ಅವರಿಗೆ ಕೆಲವು ವಿಷಯದಲ್ಲಿ ನೋವಾಗಿದೆ. ನಮ್ಮ ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಕೆಲ ವಿಷಯಗಳನ್ನು ನಾವೂ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇವೆʼʼ ಎಂದರು ರಾಮುಲು.
ಇದನ್ನೂ ಓದಿ | ಪೆದ್ದ ನಾನಲ್ಲ, ಸಿದ್ದರಾಮಯ್ಯನೇ ಪೆದ್ದ: ದುಷ್ಟ ರಾಜಕಾರಣಿ, ಶಕುನಿ, ಸ್ವಾರ್ಥಿ ಎಂದೆಲ್ಲ ಬೈದ ಶ್ರೀರಾಮುಲು