ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರದಲ್ಲಿರುವಂತೆಯೇ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕಾಂಗ್ರೆಸ್‌ಗೆ ಹೊಸ ಸಂಕಷ್ಟವನ್ನು ತಂದೊಡ್ಡಿದೆ.
ತನ್ನ ಕಾರ್ಯಾಧ್ಯಕ್ಷರ ಹೇಳಿಕೆಯಿಂದ ಪಕ್ಷದ ಕುರಿತು ಅಸಮಾಧಾನ ಭುಗಿಲೇಳುತ್ತಿರುವುದನ್ನು ನೋಡಿದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಹೇಳಿಕೆಯನ್ನು ಖಂಡಿಸಿದ್ದಾರೆ. ಇದೇ ವೇಳೆ ಸ್ವತಃ ಜಾರಕಿಹೊಳಿ ಯೂಟರ್ನ್ ಮಾಡಿದ್ದಾರೆ.
ಹಿಂದುಕಾರ್ಯಕ್ರಮವೊಂದರಲ್ಲಿ ಹಿಂದಿಯಲ್ಲಿ ಈ ಕುರಿತು ಮಾತನಾಡಿರುವ ಜಾರಕಿಹೊಳಿ, ಹಿಂದು ಧರ್ಮ, ಆ ಧರ್ಮ ಈ ಧರ್ಮ ಎನ್ನುತ್ತಾರೆ. ಹಿಂದು ಶಬ್ದ ಎಲ್ಲಿಂದ ಬಂತು? ಪರ್ಷಿಯನ್‌ನಿಂದ ಬಂತು. ಅಂದರೆ ಇರಾನ್, ಇರಾಕ್, ಕಜಖ್‌ಸ್ತಾನದಿಂದ ಬಂದಿದ್ದು. ಭಾರತದ ಜತೆಗೆ ಇದಕ್ಕೆ ಏನು ಸಂಬಂಧ? ಇದರ ಬಗ್ಗೆ ಚರ್ಚೆ ಆಗಬೇಕು. ಈ ಶಬ್ದ ಎಲ್ಲಿಂದ ಬಂತು ಎಂಬುದರ ಕುರಿತು ವಾಟ್ಸ್‌ಆ್ಯಪ್, ಯೂಟ್ಯೂಬ್‌ನಲ್ಲಿ ನೋಡಿ. ಹಿಂದು ಶಬ್ದವನ್ನು ಇಷ್ಟು ಮೇಲೆ ಏಕೆ ಮೆರೆಸುತ್ತೀರಿ? ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತದೆ. ಅದರ ಅರ್ಥ ಬಹಳ ಕೀಳು ಅರ್ಥವಿದೆ. ಈ ಮಾಹಿತಿಯೂ ವೆಬ್‌ಸೈಟ್‌ನಲ್ಲಿದೆ, ಬೇಕಿದ್ದರೆ ನೋಡಬಹುದು ಎಂದಿದ್ದರು.
ಈ ಹೇಳಿಕೆಯನ್ನು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಹಿಂದು ಜನಜಾಗೃತಿ ಸಮಿತಿಯ ಮೋಹನ್ ಗೌಡ ಸೇರಿ ಅನೇಕರು ಖಂಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಭುಗಿಲೇಳತೊಡಗಿತು. ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ, “ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಹೇಳಿಕೆಯೇ? ಹಿಂದು ಧರ್ಮದ ವಿರುದ್ಧ ಮಾತನಾಡುವ ಮೂಲಕ ಮತಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರ ನಡೆಸುತ್ತಿದೆಯೇ? ಹಿಂದು ವಿರೋಧಿ ಕಾಂಗ್ರೆಸ್ʼ ಎಂದು ಟೀಕಿಸಿತ್ತು.
ಸುರ್ಜೆವಾಲ ಖಂಡನೆ
ವಿವಾದ ಭುಗಿಲೇಳುತ್ತಿರುವುದನ್ನು ಗಮನಿಸಿದ ಕಾಂಗ್ರೆಸ್ ಉಸ್ತುವಾತಿ ರಣದೀಪ್ ಸಿಂಗ್ ಸುರ್ಜೆವಾಲ, ಹಿಂದು ಎನ್ನುವುದು ಒಂದು ಜೀವನ ಮಾರ್ಗ ಹಾಗೂ ನಾಗರಿಕತೆ ಎನ್ನುವುದು ಸತ್ಯ. ೆಲ್ಲ ಮತ, ನಂಬಿಕೆ ಹಾಗೂ ಆಚರಣೆಗಳನ್ನು ರಕ್ಷಿಸುವುದೇ ಭಾರತ ಎಂಬುದರ ಆಧಾರದಲ್ಲಿ ದೇಶವನ್ನು ಕಾಂಗ್ರೆಸ್ ಕಟ್ಟಿದೆ. ಸತೀಶ್ ಜಾರಕಿಹೊಳಿ ಹೇಳಿಕೆ ಅತ್ಯಂತ ದೌರ್ಭಾಗ್ಯಕರ ಹಾಗೂ ಇದನ್ನು ತಿರಸ್ಕರಿಸಲು ಯೋಗ್ಯವಾಗಿದೆ. ಇದನ್ನು ನಾವು ಏಕಸ್ವರದಿಂದ ಖಂಡಿಸುತ್ತೇವೆ” ಎಂದಿದ್ದಾರೆ.
ಇದು ನನ್ನ ಅಭಿಪ್ರಾಯ ಅಲ್ಲ ಎಂದ ಜಾರಕಿಹೊಳಿ
ತಮ್ಮ ಹೇಳಿಕೆ ವಿವಾದ ಆಗುತ್ತಿರುವಂತೆಯೇ ಸತೀಶ್ ಜಾರಕಿಹೊಳಿ ಯೂಟರ್ನ್ ಮಾಡಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಜಾರಕಿಹೊಳಿ, ಸಿಂಧು ನದಿಯಿಂದ ಆಚೆಗೆ ವಾಸಿಸುವ ಜನರ ಕುರಿತು ಪರ್ಷಿಯನ್ ಭೌಗೋಳಿಕ ಪ್ರದೇಶದಲ್ಲಿ ಮೊದಲಿಗೆ ಹಿಂದು ಶಬ್ದ ಬಳಕೆಗೆ ಬಂದಿತು. ಕ್ರಿ.ಪೂ. 550-486ರ ಸಂದರ್ಭದಲ್ಲಿ ಅಂದರೆ ನಿರ್ದಿಷ್ಟವಾಗಿ ಆರನೇ ಶತಮಾನದಲ್ಲಿ ನಮೂದಿಸಲಾಗಿದೆ. ಇದರ ಮೂಲ ವಿಕಿಪೀಡಿಯಾ.
ಹಿಂದು ಪದದ ಕುರಿತು ವಿವಿಧ ಲೇಖಕರು ಬರೆದ ವಿಡಿಪೀಡಿಯಾ ಲೇಖನಗಳ ಆಧಾರದಲ್ಲಿ ನಾನು ಮಾತನಾಡಿದ್ದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ | ʼಹಿಂದು ಪದಕ್ಕೆ ಕೀಳು ಅರ್ಥವಿದೆʼ: ಬೇಕಿದ್ದರೆ ವಾಟ್ಸ್‌ಆ್ಯಪ್, ಯೂಟ್ಯೂಬ್ ನೋಡಿ ಎಂದ ಸತೀಶ್ ಜಾರಿಕೊಳಿ