Site icon Vistara News

ED ಎಂದರೆ ಜಾರಿ ನಿರ್ದೇಶನಾಲಯ ಅಲ್ಲ; ಹೊಸ ಹೆಸರು ನೀಡಿದ ಕಾಂಗ್ರೆಸ್‌ ನಾಯಕ ಸುರ್ಜೆವಾಲ

Randeep Singh Surjewala

ಬೆಂಗಳೂರು: ಅಕ್ರಮ ಹಣ ಸಂಗ್ರಹಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಜರಾಗಲು ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿರುವುದಕ್ಕೆ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಸಹ ಆಕ್ರೋಶ ಹೊರಹಾಕಿದ್ದಾರೆ.

ಸಮನ್ಸ್‌ ನೀಡಿರುವುದಕ್ಕೆ ಡಿ.ಕೆ. ಶಿವಕುಮಾರ್‌ ಈಗಾಗಲೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ್‌ ಜೋಡೊ ಯಾತ್ರೆ ಹಾಗೂ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್‌ ನೀಡಿದೆ. ನಾನು ಸಹಕರಿಸಲು ಸಿದ್ಧ. ಆದರೆ ಈ ಸಮನ್ಸ್‌ ನೀಡಿರುವ ಸಮಯ, ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದಿದ್ದಾರೆ.

ಈ ನಡುವೆ ರಣದೀಪ್‌ಸಿಂಗ್‌ ಸುರ್ಜೆವಾಲ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲಿಗೆ ಮೇಕೆದಾಟು ಯಾತ್ರೆ ನಡೆಯಿತು, ನಂತರ ಆಗಸ್ಟ್‌ 3ರಂದು ಸಿದ್ದರಾಮೋತ್ಸವ ನಡೆಯಿತು, ಆಗಸ್ಟ್‌ 15ರಂದು ಫ್ರೀಡಂ ಮಾರ್ಚ್‌ ಯಶಸ್ವಿಯಾಯಿತು, ನಂತರ 40% ಸರ್ಕಾರದ ಬಣ್ಣ ಬಯಲು ಮಾಡಿದೆವು, ಉದ್ಯೋಗ ಹಗರಣ ಹೊರಗೆಳೆದೆವು, ಬೆಂಗಳೂರಿನಲ್ಲಿ ಮಳೆ ಸನ್ನಿವೇಶ ನಿಭಾಯಿಸುವಲ್ಲಿ ವೈಫಲ್ಯವನ್ನು ಹೊರಗೆಳೆದದ್ದರಿಂದ ಮೋದಿ ಸರ್ಕಾರ ಚಿಂತೆಗೀಡಾಗಿದೆ.

ಸಿಎಂ ಬೊಮ್ಮಾಯಿ ನೇತೃತ್ವದ ಅನೈತಿಕ ಸರ್ಕಾರ ನಿರ್ದಯವಾಗಿ ಕರ್ನಾಟಕವನ್ನು ಲೂಟಿ ಮಾಡುತ್ತಿದ್ದು, ದಿನಕ್ಕೊಂದು ಹಗರಣಕ್ಕೆ ಪ್ರಸಿದ್ಧವಾಗಿದೆ.

ಕಾಂಗ್ರೆಸ್‌ಗೆ ಅಗಾಧವಾದ ಸಾರ್ವಜನಿಕ ಬೆಂಬಲ ಮತ್ತು ಭಾರತ್‌ ಜೋಡೊ ಯಾತ್ರೆ ಸಿದ್ಧತೆಗೆ ಅದ್ಭುತ ಪ್ರತಿಕ್ರಿಯೆಯನ್ನು ನೋಡಿದ ಮೋದಿ ಸರ್ಕಾರ, ಡಿ.ಕೆ. ಶಿವಕುಮಾರ್‌ ಅವರನ್ನು ಗುರಿಯಾಗಿಸಲು ED ಯನ್ನು(ಅಂದರೆ ಬಿಜೆಪಿಯ ಎಲೆಕ್ಷನ್‌ ಡಿಪಾರ್ಟ್‌ಮೆಂಟ್‌) ಬಳಕೆ ಮಾಡಿಕೊಳ್ಳುತ್ತಿದೆ. ಇಂತಹ ಹೇಡಿತನದ ಕೃತ್ಯಗಳು, ಭ್ರಷ್ಟ ಬೊಮ್ಮಾಯಿ ಸರ್ಕಾರವನ್ನು ನಿರ್ನಾಮ ಮಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಸುರ್ಜೆವಾಲ ಕಿಡಿಕಾರಿದ್ದಾರೆ.

ಇದನ್ನೂ ಓದಿ | ಡಿ.ಕೆ. ಶಿವಕುಮಾರ್‌ಗೆ ED ಸಂಕಷ್ಟ | ವಾರದಲ್ಲಿ ಹಾಜರಾಗಲು ಸಮನ್ಸ್‌: ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ

Exit mobile version