Site icon Vistara News

Rangayana row | ರಂಗಾಯಣಕ್ಕೆ ಡಬಲ್‌ ಟ್ರಬಲ್‌: ಒಂದೆಡೆ ಕಾಂಗ್ರೆಸ್‌ ಪ್ರತಿಭಟನೆ, ಇನ್ನೊಂದೆಡೆ ಸಿಡಿದೆದ್ದ ಕಂಬಾರ!

ರಂಗಾಯಣ ನಾಟಕ ವಿವಾದ

ಮೈಸೂರು: ಟಿಪ್ಪು ನಿಜ ಕನಸುಗಳ ಮೂಲಕ ಸಾಕಷ್ಟು ಸದ್ದು ಮಾಡಿದ್ದಲ್ಲದೆ, ಮೈಲೇಜ್‌ ಕೂಡಾ ಪಡೆದುಕೊಂಡಿರುವ ಮೈಸೂರಿನ ರಂಗಾಯಣ (Rangayana row) ಈಗ ಒಂದು ಎಡವಟ್ಟು ಮಾಡಿಕೊಂಡು ಡಬಲ್‌ ಟ್ರಬಲ್‌ನಲ್ಲಿ ಸಿಲುಕಿದೆ.

ರಂಗಾಯಣ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರು ತಾವೇ ಬರೆದಿರುವ ʻಟಿಪ್ಪು ನಿಜ ಕನಸುಗಳುʼ ನಾಟಕವನ್ನು ಅದ್ಧೂರಿಯಾಗಿ ಪ್ರದರ್ಶಿಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಇದರ ನಡುವೆ ಅವರ ಶಿಷ್ಯರಾಗಿರುವ ರಂಗ ನಿರ್ದೇಶಕ ಕಾರ್ತಿಕ್‌ ಉಪಮನ್ಯು ಕಳೆದ ಜನವರಿ ೧ರಂದು ಚಂದ್ರಶೇಖರ ಕಂಬಾರರ ʻಸಾಂಬಶಿವ ಪ್ರಹಸನʼ ನಾಟಕ ಪ್ರದರ್ಶಿಸಿ ಅವಳಿ ವಿರೋಧವನ್ನು ಎದುರಿಸುತ್ತಿದ್ದಾರೆ.

ಜನವರಿ ಒಂದರಂದು ನಾಟಕದ ಮಧ್ಯೆಯೇ ಕಾಂಗ್ರೆಸ್‌ ಕಾರ್ಯಕರ್ತರಿಂದ ನಾಟಕದಲ್ಲಿ ಸಿದ್ದರಾಮಯ್ಯ ಅಪಹಾಸ್ಯಕ್ಕೆ ಆಕ್ಷೇಪ

ನಾಟಕದಲ್ಲಿ ಕಾಂಗ್ರೆಸ್‌ ನಾಯಕರಿಗೆ ಅಪಮಾನ ಆರೋಪ
ಜ‌. 1ರಂದು ಮೈಸೂರಿನ‌ ರಂಗಾಯಣದಲ್ಲಿ ಪ್ರದರ್ಶಿಸಲಾದ ʻಸಾಂಬಶಿವ ಪ್ರಹಸನʼ ನಾಟಕದಲ್ಲಿ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಅವರ ಅನ್ನಭಾಗ್ಯ ಯೋಜನೆ ಹಾಗೂ ಡಿ.ಕೆ.ಶಿವಕುಮಾರ್ ಬಗ್ಗೆ ಅಪಹಾಸ್ಯ ಮಾಡಿದ ಬಗ್ಗೆ ಅಂದೇ ಆಕ್ಷೇಪ ವ್ಯಕ್ತವಾಗಿತ್ತು. ನಾಟಕವನ್ನು ಮಧ್ಯದಲ್ಲೇ ನಿಲ್ಲಿಸಿದ ಸಿದ್ದರಾಮಯ್ಯ ಅಭಿಮಾನಿಗಳು ಈ ಮಾತುಗಳೆಲ್ಲ ಸ್ಕ್ರಿಪ್ಟ್‌ನಲ್ಲಿವೆಯೇ? ಕಂಬಾರರೇ ನಿಜಕ್ಕೂ ಇದನ್ನೆಲ್ಲ ಬರೆದಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಜತೆಗೆ ಮೂಲ ಸ್ಕ್ರಿಪ್ಟ್‌ ನೀಡುವಂತೆ ಒತ್ತಾಯಿಸಿದ್ದರು. ಆಗ ಕಾರ್ತಿಕ್‌ ಉಪಮನ್ಯು ಅವರು ತಾವು ಯಾರನ್ನೂ ಅಪಮಾನಿಸುವ ಉದ್ದೇಶ ಹೊಂದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ಸ್ಕ್ರಿಪ್ಟ್‌ ನೀಡಿರಲಿಲ್ಲ.

ಕಾಂಗ್ರೆಸ್‌ ಮುಖಂಡರಿಂದ ಪೊಲೀಸರಿಗೆ ದೂರು

ಈ ನಡುವೆ ನಾಟಕದಲ್ಲಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ್ನು ಅನಗತ್ಯವಾಗಿ ಎಳೆದು ತಂದು ಅಪಮಾನಿಸಿದ್ದಕ್ಕೆ ಪ್ರತಿಯಾಗಿ ಕಾನೂನು ಸಮರ ಮತ್ತು ಪೊಲೀಸ್‌ ಕೇಸುಗಳ ಮೂಲಕ ಹೋರಾಟ ಮಾಡುವುದಾಗಿ ಕಾಂಗ್ರೆಸ್‌ ಕಾರ್ಯಕರ್ತರು ಹೇಳಿದ್ದರು. ಜತೆಗೆ ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ಆಯೋಜಿಸುವುದಾಗಿ ಹೇಳಿದ್ದರು.

ನಾಟಕದ ಮೂಲ ಕೃತಿಯ ಬಗ್ಗೆ ಮಾಹಿತಿ ಪಡೆಯುತ್ತಿರುವುದು.

ಜನವರಿ ಏಳರಂದು ಸಭೆ
ಕಾಂಗ್ರೆಸ್‌ ಕಾರ್ಯಕರ್ತರು ಈಗಾಗಲೇ ರಾಜ್ಯ ಸರ್ಕಾರ ಹಾಗೂ ರಂಗಾಯಣ ನಿರ್ದೇಶಕರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಸಜ್ಜಾಗಿದೆ. ನಾಟಕದ ನಿರ್ದೇಶಕ ಕಾರ್ತಿಕ್ ಉಪಮನ್ಯು ಸೇರಿದಂತೆ 18 ಮಂದಿಯ ವಿರುದ್ಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸ್ವಾಭಿಮಾನಿ ಹೋರಾಟ ಸಮಿತಿ ಹೆಸರಲ್ಲಿ ಕಾಂಗ್ರೆಸ್ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಜ. 7ರಂದು ಪ್ರತಿಭಟನೆಯ ರೂಪುರೇಷೆಯ ಕುರಿತು ಎಲ್ಲ ಸಮುದಾಯದ ಪ್ರಮುಖರ ಜತೆ ಸಭೆ ನಡೆಸಲಾಗುವುದು ಎಂದು ತಿಳಿಸಿದೆ. ನಗರದ ಟೌನ್‌ ಹಾಲ್‌ನಲ್ಲಿ‌ ಈ ಸಭೆ ನಿಗದಿಯಾಗಿದೆ.

ಕಂಬಾರರು ನೀಡಿದ ದೂರು

ನನ್ನ ನಾಟಕ ತಿರುಚಲಾಗಿದೆ ಎಂದ ಕಂಬಾರ
ಈ ನಡುವೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ಈಗಾಗಲೇ ನಾಟಕದ ವಿರುದ್ಧ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸಾಂಬಶಿವ ಪ್ರಹಸನ ಕೃತಿಯನ್ನು ತಿರುಚಿ ನಾಟಕ ಪ್ರದರ್ಶನ ಮಾಡಲಾಗಿದೆ ಎನ್ನುವುದು ಒಂದು ದೂರಾದರೆ, ನಾಟಕಕ್ಕೆ ನನ್ನ ಅನುಮತಿ ಪಡೆಯಬೇಕಿತ್ತು. ರಂಗಾಯಣದಲ್ಲಿ ನನ್ನ ಅನುಮತಿ ಇಲ್ಲದೆ ನಾಟಕ ಪ್ರದರ್ಶನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಿದೆ. ಅನುಮತಿ‌ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದವರ ಮೇಲೆ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Rangayana row | ರಂಗಾಯಣ ನಾಟಕ ʻಸಾಂಬಶಿವʼದಲ್ಲಿ ಸಿದ್ದರಾಮಯ್ಯ, ಕೈ ನಾಯಕರ ಅಪಹಾಸ್ಯ, ವೇದಿಕೆಗೆ ನುಗ್ಗಿದ ಫ್ಯಾನ್ಸ್‌

Exit mobile version