Site icon Vistara News

Rape and murder : ಬೆಂಗಳೂರಿನ ಐಟಿ ಉದ್ಯೋಗಿ ಪ್ರತಿಭಾ ಅತ್ಯಾಚಾರ, ಕೊಲೆ ಪ್ರಕರಣ; ಕ್ಯಾಬ್‌ ಡ್ರೈವರ್‌ಗೆ 30 ವರ್ಷ ಜೈಲು

prathibha rape and murder

#image_title

ಬೆಂಗಳೂರು: ಇಡೀ ರಾಜ್ಯವೇ ನಡುಗುವಂತೆ ಮಾಡಿದ, ಐಟಿ ಉದ್ಯೋಗಿಗಳ ವಲಯದಲ್ಲಿ ತಲ್ಲಣವನ್ನು ಸೃಷ್ಟಿಸಿದ್ದ 2005ರ ಐಟಿಯ ಉದ್ಯೋಗಿಯ ಅತ್ಯಾಚಾರ ಮತ್ತು ಕೊಲೆ (Rape and murder) ಪ್ರಕರಣದಲ್ಲಿ ಆರೋಪಿಗೆ 30 ವರ್ಷಗಳ ಜೈಲುವಾಸದ ಶಿಕ್ಷೆಯನ್ನು ನೀಡಲಾಗಿದೆ. ಆರೋಪಿ ಶಿವಕುಮಾರ್‌ ಎಂಬಾತನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ ಕೋರ್ಟ್‌ 30 ವರ್ಷಗಳ ಕಾಲ ಜೈಲಿನಿಂದ ಹೊರಗೆ ಬಿಡಬಾರದು ಎಂಬ ಷರತ್ತು ವಿಧಿಸಿದೆ.

2005ರ ಡಿಸೆಂಬರ್‌ 13ರಂದು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟೆಕ್ಕಿ ಪ್ರತಿಭಾ ಅವರ ಮೇಲೆ ಕ್ಯಾಬ್‌ ಚಾಲಕ ಶಿವಕುಮಾರ್‌ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಈ ಯುವತಿ ರಾತ್ರಿ ಪಾಳಿ ಮುಗಿಸಿ ಕಂಪನಿ ಸೂಚಿಸಿದ ಕ್ಯಾಬ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಚಾಲಕ ಶಿವಕುಮಾರ್‌ ಆಕೆಯ ಮೇಲೆ ಕ್ರೂರವಾಗಿ ಎರಗಿದ್ದ. ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಅತ್ಯಾಚಾರ ಮಾಡಿದ್ದ ಧೂರ್ತ ಆಕೆಯ ಕೊರಳನ್ನು ಸೀಳಿ ಕೊಲೆ ಮಾಡಿದ್ದ.

ಈ ಘಟನೆ ಆಗಷ್ಟೇ ಚಿಗುರಿಕೊಳ್ಳುತ್ತಿದ್ದ ಐಟಿ ಲೋಕದಲ್ಲಿ ಯುವತಿಯರ ರಕ್ಷಣೆಗೆ ಸಂಬಂಧಿಸಿ ದೊಡ್ಡ ಪ್ರಶ್ನೆಗಳನ್ನು ಎತ್ತಿತ್ತು. ಮತ್ತು ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಉದ್ಯೋಗಸ್ಥ ಮಹಿಳೆಯರ ರಕ್ಷಣೆ ಮತ್ತು ಅವರನ್ನು ಉದ್ಯೋಗ ಸ್ಥಳದಿಂದ ಬಿಟ್ಟು ಬರುವ, ಕರೆದುಕೊಂಡು ಬರುವ ಕ್ಯಾಬ್‌ ವ್ಯವಸ್ಥೆಗೆ ಕಠಿಣ ನಿಯಮಗಳನ್ನು ಮಾಡಿ ಹೊಸ ನೀತಿಯನ್ನೇ ಜಾರಿಗೊಳಿಸಿತ್ತು.

2010ರಲ್ಲಿ ತ್ವರಿಗತಗತಿ ನ್ಯಾಯಾಲಯ ಆರೋಪಿ ಶಿವಕುಮಾರ್‌ಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ರಾಜ್ಯ ಸರ್ಕಾರ ಆತನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಸಲ್ಲಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್‌ 2016ರಲ್ಲಿ ಮತ್ತೆ ತಾನು ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದ ಪ್ರಕರಣದಲ್ಲಿ ಈಗ ತೀರ್ಪು ಬಂದಿದೆ.

ಸುಪ್ರೀಂಕೋರ್ಟ್‌ ಹೇಳಿದ್ದೇನು?

ಮೇಲ್ಮನವಿಗಳ ವಿಚಾರಣೆ ನಡೆಸಿದ ಕೋರ್ಟ್‌ 30 ವರ್ಷದವರೆಗೂ ಆತನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಸೂಚಿಸಿದೆ.

“ಅಪರಾಧಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದೊಂದೇ ಪ್ರಕರಣವೊಂದು ಅಪರೂಪದಲ್ಲೇ ಅಪರೂಪ ಎಂಬುದನ್ನು ನಿರ್ಧರಿಸುವ ಮಾನದಂಡವಾಗದು. ಇದು ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಆರೋಪಿಯ ಸ್ವಭಾವದಲ್ಲಿ ಸುಧಾರಣೆಯಾಗಿದೆ ಎಂಬ ಕಾರಣಕ್ಕೆ ಇಂತಹ ಕ್ರೂರ ಪ್ರಕರಣದಲ್ಲಿ ಅನುಚಿತ ಮೃದುತ್ವ ತೋರುವುದು ಕಾನೂನು ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಂತ್ರಸ್ತೆಯ ಹಕ್ಕುಗಳನ್ನು ನ್ಯಾಯಾಲಯ ಪರಿಗಣಿಸಬೇಕು” ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌ ಓಕಾ ಮತ್ತು ರಾಜೇಶ್‌ ಬಿಂದಾಲ್‌ ಅವರನ್ನೊಳಗೊಂಡ ಪೀಠ ನುಡಿಯಿತು.

ಅಲ್ಲದೆ ಶಿಕ್ಷೆಯನ್ನು ತಗ್ಗಿಸುವ ಮತ್ತು ಹೆಚ್ಚಿಸುವ ಸಂದರ್ಭಗಳ ಹೊರತಾಗಿ ನ್ಯಾಯಾಲಯಗಳ ಇತರೆ ಸಂದರ್ಭಗಳನ್ನು ಕೂಡ ಪರಿಗಣಿಸಬೇಕು. ಹೇಯ ಪ್ರಕರಣದಲ್ಲಿ ಮರಣದಂಡನೆ ವಿಧಿಸುವಂತೆ ಮಾಡುವ ಯತ್ನದಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಆರೋಪಿಯು ಕನಿಷ್ಠ 30 ವರ್ಷಗಳ ಜೀವಾವಧಿ ಸೆರೆವಾಸ ಪೂರ್ಣಗೊಳಿಸುವವರೆಗೆ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ ಎಂಬ ವಿಶೇಷ ಮಾರ್ಪಾಡುಗೊಂಡ ಶಿಕ್ಷೆ ವಿಧಿಸಿತು.

ನಡವಳಿಕೆ ತೃಪ್ತಿಕರ ಎಂದು ವಾದಿಸಿದ್ದ ವಕೀಲರು

ಹೈಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಪರ ವಕೀಲರು, ಕೃತ್ಯ ನಡೆದ ಸಮಯದಲ್ಲಿ ಅಪರಾಧಿಗೆ ಕೇವಲ 22 ವರ್ಷ ವಯಸ್ಸಿನವನಾಗಿದ್ದ. ಈಗ ಅವನಿಗೆ ವಯಸ್ಸಾದ ಪೋಷಕರು ಹಾಗೂ ಚಿಕ್ಕ ವಯಸ್ಸಿನ ಪತ್ನಿ, ಮಗು ಇದೆ. ಆತ ಜೈಲಿನಲ್ಲೇ ಪದವಿ ಶಿಕ್ಷಣ ಪಡೆದಿದ್ದಾನೆ. ಜೈಲಿನಲ್ಲಿ ಅವನ ನಡವಳಿಕೆ ತೃಪ್ತಿಕರವಾಗಿದ, ಸಮಾಜಕ್ಕೆ ಆತ ಬೆದರಿಕೆಯೊಡ್ಡಿಲ್ಲ ಎಂದು ವಾದ ಮಂಡಿಸಿದ್ದರು. ಇತ್ತ ಸರ್ಕಾರ ವಾದ ಮಂಡಿಸಿ “ಮರಣ ದಂಡನೆ ವಿಧಿಸದ ಪ್ರಕರಣಗಳಲ್ಲಿ ಕೂಡ ಪ್ರಕರಣದ ಗುರುತ್ವವನ್ನು ಪರಿಗಣಿಸಿ ಶಿಕ್ಷೆ ಮಾರ್ಪಡಿಸಲು ಸಾಂವಿಧಾನಿಕ ನ್ಯಾಯಾಲಯಗಳಿಗೆ ಅಧಿಕಾರ ಇಲ್ಲ ಎಂದಲ್ಲ” ಎಂಬುದಾಗಿ ತಿಳಿಸಿತ್ತು.

ಈ ಹಂತದಲ್ಲಿ ಸುಪ್ರೀಂ ಕೋರ್ಟ್‌ “ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸದ ಪ್ರಕರಣಗಳಲ್ಲಿ ಕೂಡ ಸಾಂವಿಧಾನಿಕ ನ್ಯಾಯಾಲಯಗಳು ಜೀವಾವಧಿ ಶಿಕ್ಷೆಯನ್ನು ಕನಿಷ್ಠ 20 ಅಥವಾ 30 ವರ್ಷಗಳಂತೆ ಕಡ್ಡಾಯಗೊಳಿಸಿ ಮಾರ್ಪಡಿಸಬಹುದು” ಎಂದು ಅಭಿಪ್ರಾಯಪಟ್ಟಿತು.

“ಮರಣದಂಡನೆ ವಿಧಿಸದ ಪ್ರಕರಣಗಳಲ್ಲಿಯೂ ಸಾಂವಿಧಾನಿಕ ನ್ಯಾಯಾಲಯಗಳು ಶಿಕ್ಷೆ ಮಾರ್ಪಡಿಸುವ ಅಧಿಕಾರವನ್ನು ನಿರ್ಬಂಧಿಸಲಾಗದು” ಎಂದು ಹಿಂದಿನ ತೀರ್ಪುಗಳನ್ನು ಅವಲಂಬಿಸಿ ನ್ಯಾಯಾಲಯ ಹೇಳಿತು.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಐಟಿ ಮಹಿಳಾ ಉದ್ಯೋಗಿಗಳ ಸುರಕ್ಷತೆಯ ಕುರಿತಾದ ವಿಚಾರ ಇದಾಗಿದೆ ಎಂದು ತಿಳಿಸಿದ ಪೀಠ ಮನವಿಯನ್ನು ಭಾಗಶಃ ಪುರಸ್ಕರಿಸಿ ಶಿಕ್ಷೆಯನ್ನು ಅಂತಿಮಗೊಳಿಸಿತು.

ಇದನ್ನೂ ಓದಿ : Karnataka High court : ಫ್ಲೆಕ್ಸ್‌ ಹಾಕಿದವರನ್ನು ಬಿಟ್ಟು ತಯಾರಿಸಿದವರ ಮೇಲೆ ಕ್ರಮ; ಬಿಬಿಎಂಪಿ ನಿಲುವಿಗೆ ಹೈಕೋರ್ಟ್‌ ಆಕ್ಷೇಪ

Exit mobile version