ನವ ದೆಹಲಿ: ಕರ್ನಾಟಕದ ಶಿಂಷಾ ಸಹಕಾರ ಬ್ಯಾಂಕ್ ನಿಯಮಿತದ ಗ್ರಾಹಕರು ನೀವಾಗಿದ್ದರೆ, ಇಲ್ಲಿಂದ ಹಣ ಪಡೆಯಲು ನಿಮಗೆ ಸದ್ಯಕ್ಕೆ ನಿರ್ಬಂಧವಿದೆ. ಶಿಂಷಾ ಸೇರಿದಂತೆ ಐದು ಸಹಕಾರಿ ಬ್ಯಾಂಕ್‌ಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ನಿರ್ಬಂಧ ಹೇರಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಶಿಂಷಾ ಸಹಕಾರ ಬ್ಯಾಂಕ್, ಲಖನೌದ ಎಸ್‌ಚಿಬಿಎಲ್ ಸಹಕಾರ ಬ್ಯಾಂಕ್, ಮಹಾರಾಷ್ಟ್ರದ ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್- ಈ ಮೂರು ಸಹಕಾರ ಬ್ಯಾಂಕ್‌ಗಳ ಪ್ರಸ್ತುತ ನಗದು ಅಲಭ್ಯತೆಯ ಸ್ಥಿತಿಯ ಕಾರಣದಿಂದ ಗ್ರಾಹಕರು ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಹಣ ಹಿಂಪಡೆಯುವಿಕೆ ನಿರ್ಬಂದ ಸೇರಿದಂತೆ ಹಲವು ನಿರ್ಬಂಧಗಳನ್ನು ಈ ಬ್ಯಾಂಕ್‌ಗಳ ಮೇಲೆ ವಿಧಿಸಲಾಗಿದ್ದು, ಈ ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಇದಲ್ಲದೆ ಆಂಧ್ರದ ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್‌ಗಳಿಗೂ ಹಲವು ನಿರ್ಬಂಧ ವಿಧಿಸಲಾಗಿದ್ದು, ಇವುಗಳ ಗ್ರಾಹಕರು 5,000 ರೂ.ವರೆಗೆ ಮಾತ್ರ ಹಣವನ್ನು ಹಿಂಪಡೆಯಬಹುದಾಗಿದೆ.
ಈ ಎಲ್ಲಾ ಐದು ಸಹಕಾರಿ ಬ್ಯಾಂಕ್‌ಗಳ ಅರ್ಹ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ನಿರ್ಬಂಧಗಳು 6 ತಿಂಗಳವರೆಗೆ ಜಾರಿಯಲ್ಲಿರುತ್ತವೆ. ನಿರ್ಬಂಧ ಜಾರಿಯಲ್ಲಿರುವ ವೇಳೆ ಬ್ಯಾಂಕ್‌ಗಳು ಆರ್‌ಬಿಐನ ಪೂರ್ವಾನುಮತಿ ಇಲ್ಲದೆ ಸಾಲಗಳನ್ನು ನೀಡಲು, ಯಾವುದೇ ಹೂಡಿಕೆ ಮಾಡಲು, ಯಾವುದೇ ಆಸ್ತಿ ವಿಲೇವಾರಿ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ಇದನ್ನೂ ಓದಿ: UPI LITE ಸೇವೆ ಆರಂಭಿಸಿದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಇದರಿಂದ ಏನು ಲಾಭ?