Site icon Vistara News

DK Shivakumar : ನವೆಂಬರ್‌ 1ರ ಬಳಿಕ ಯಾವ ಚಾನೆಲ್‌ಗೆ ಬಂದರೂ ಚರ್ಚೆಗೆ ಸಿದ್ಧ: ಎಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ

DK Shivakumar HD Kumaraswamy

ಬೆಂಗಳೂರು: ರೈತರ ಭೂಮಿಗೆ ಸರಿಯಾದ ಹಣ ನಿಗದಿ ಮಾಡದ ವಿಚಾರವಾಗಿ ಚರ್ಚೆ ಮಾಡಲು ನಾನೂ ಸಿದ್ಧನಿದ್ದೇನೆ. ಯಾವುದೇ ಚಾನೆಲ್‌ನಲ್ಲಿ ಬೇಕಿದ್ದರೂ ಫಿಕ್ಸ್ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ. ಅವನು ಕೊಟ್ಟ ಬಹಿರಂಗ ಆಹ್ವಾನವನ್ನು ಸ್ವೀಕಾರ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಏಕವಚನದಲ್ಲಿಯೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ, ಸವಾಲನ್ನು ಸ್ವೀಕರಿಸಿ, ನವೆಂಬರ್‌ 1ರ ನಂತರ ಯಾವಾಗ ಬೇಕಿದ್ದರೂ ದಿನಾಂಕ ನಿಗದಿ ಮಾಡಲಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾನೇನು ಮಾಡಿದ್ದೇನೆ? ಅವನು ಏನು ಮಾಡಿದ್ದಾನೆ? ಎಲ್ಲವನ್ನೂ ಬಿಚ್ಚಿ ಇಡ್ತೇನೆ. ಟೈಮ್ ಫಿಕ್ಸ್ ಮಾಡಿ. ನವೆಂಬರ್‌ 1ರ ನಂತರ ಚರ್ಚೆ ನಡೆಸಲು ದಿನಾಂಕವನ್ನು ನಿಗದಿ ಮಾಡಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಡಿ.ಕೆ. ಶಿವಕುಮಾರ್ ಪಟಾಲಮ್‌ನಿಂದ ರೈತರ ಪರಿಹಾರದಲ್ಲಿ ಲೂಟಿ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನೋಡ್ರಿ ನಾನು ಏನು ಮಾಡಿದ್ದೇನೆ, ಅವರು ಏನು ಮಾಡಿದ್ದಾರೆ ಅನ್ನೋದನ್ನು ಬಿಚ್ಚಿ ಮಾತಾಡೋಣ. ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಸಮಯ ಫಿಕ್ಸ್ ಮಾಡಿ ಅಲ್ಲಿ ಬಂದು ಎಲ್ಲವನ್ನೂ ಮಾತಾಡೋಣ ಎಂದು ಹೇಳಿ ಹೊರಟರು.

ಬಿಜೆಪಿಗೆ ಸಾಮಾನ್ಯ ಜ್ಞಾನ ಇಲ್ಲ

ವಿಧಾನಸೌಧ ಕಚೇರಿ ನವೀಕರಣ ಅಗತ್ಯತೆ ಬಗ್ಗೆ ಬಿಜೆಪಿ ಮಾಡಿರುವ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ಬಿಜೆಪಿಗೆ ಸಾಮಾನ್ಯ ಜ್ಞಾನ ಇಲ್ಲ. ಅದು ನನ್ನ ಕಚೇರಿ. ನಾನು ಅಲ್ಲಿ ಅನೇಕ ಜನರು, ಗಣ್ಯರನ್ನು ಭೇಟಿ ಮಾಡಬೇಕಾಗುತ್ತದೆ. ನೆದರ್ ಲ್ಯಾಂಡ್ ಪ್ರಧಾನಮಂತ್ರಿಗಳು ವಿಧಾನಸೌಧಕ್ಕೆ ಬಂದಾಗ ನಾನು ಎಂ.ಬಿ. ಪಾಟೀಲ್ ಅವರ ಕೊಠಡಿಗೆ ಹೋಗಿ ಅವರನ್ನು ಭೇಟಿ ಮಾಡಬೇಕಾಯಿತು. ಗಣ್ಯರು ಭೇಟಿಗೆ ಬಂದಾಗ ಅವರಿಗೆ ಗೌರವ ನೀಡಲು ಅಚ್ಚುಕಟ್ಟಾದ ಕೊಠಡಿ, ಸೂಕ್ತ ಸ್ಥಳಾವಕಾಶ ಇರಬೇಕು. ನಾವು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಪಾಲಿಸಬೇಕು. ನಾವು ಬೆಂಗಳೂರು ಹಾಗೂ ಇಂಡಿಯಾವನ್ನು ಉತ್ತಮವಾಗಿ ಬಿಂಬಿಸಬೇಕು. ಅದಕ್ಕಾಗಿ ಮಾಡುತ್ತಿದ್ದೇವೆ. ಬಿಜೆಪಿ ಅವರಿಗೆ ಈ ಬಗ್ಗೆ ಕಾಮನ್ ಸೆನ್ಸ್ ಇಲ್ಲ ಎಂದು ತಿರುಗೇಟು ನೀಡಿದರು.

ಎಚ್‌ಡಿಕೆ ಸವಾಲು ಏನು?

ನಾನಾಗಲೀ ನನ್ನ ಕುಟುಂಬದವರಾಗಲೀ ಅಧಿಕಾರದಲ್ಲಿದ್ದಾಗ ಪೊಲೀಸ್‌ ವರ್ಗಾವಣೆ ಸೇರಿದಂತೆ ಇನ್ನು ಯಾವುದೇ ವರ್ಗಾವಣೆಗೆ ದುಡ್ಡು (Transfer racket) ತೆಗೆದುಕೊಂಡಿಲ್ಲ. ಈ ಬಗ್ಗೆ ಮಾಗಡಿ ಬಾಲಕೃಷ್ಣ (Magadi Balakrishna) ಹಾಕಿರುವ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ನಾನೂ ಧರ್ಮಸ್ಥಳಕ್ಕೆ ಬರುತ್ತೇನೆ. ಅವರೂ ಧರ್ಮಸ್ಥಳಕ್ಕೆ ಬರಲಿ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಸೇರಿದಂತೆ 30 ಸಚಿವರೂ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಸವಾಲು ಹಾಕಿದ್ದರು.

ಇದನ್ನೂ ಓದಿ: HD Kumaraswamy : ವರ್ಗಾವಣೆಗೆ ಹಣ ಪಡೆದಿಲ್ಲವೆಂದು ಸಿಎಂ, ಡಿಸಿಎಂ, 30 ಸಚಿವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಎಚ್‌ಡಿಕೆ ಸವಾಲು

ಸಿಎಂ, ಡಿಸಿಎಂ ಹಾಗೂ 30 ಸಚಿವರು ವರ್ಗಾವಣೆಯಲ್ಲಿ ದುಡ್ಡು ಮುಟ್ಟೇ ಇಲ್ಲ ಎಂದು ಪ್ರಮಾಣವನ್ನು ಮಾಡಲಿ. ಈ ಹಿಂದಿನ ಕಥೆಯಲ್ಲ ಬೇಡ. ಈಗ ಸರ್ಕಾರ ಬಂದು ಆರು ತಿಂಗಳ ಅವಧಿಯಲ್ಲಿ ನಡೆದ ವರ್ಗಾವಣೆಗೆ ಸಂಬಂಧಪಟ್ಟಂತೆ ಮಾತ್ರವೇ ಪ್ರಮಾಣ ಮಾಡಿದರೂ ಸಾಕು ಎಂದು ಸವಾಲು ಹಾಕಿದ್ದರು. ಅಲ್ಲದೆ, ರಾಮನಗರದಲ್ಲಿ ರೈತರ ಭೂಮಿಗೆ ಸರಿಯಾದ ಹಣ ನಿಗದಿ ಮಾಡದ ವಿಚಾರವನ್ನೂ ಪ್ರಸ್ತಾಪಿಸಿದ್ದರು.

Exit mobile version