ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅನೇಕ ವರ್ಷಗಳಿಂದ ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ಎರಡನೇ ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಘೋಷಿಸಿದ್ದಾರೆ. ಶಿಕಾರಿಪುರದಲ್ಲಿ ಅಂಜನಾ ಜಲಾಶಯಕ್ಕೆ ಬಾಗಿನ ಸಲ್ಲಿಕೆ ಕಾರ್ಯಕ್ರಮದ ನಂತರ ವೇದಿಕೆಯಿಂದಲೇ ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ.
ನನಗೆ ಇಲ್ಲಿಯವರೆಗೆ ನೀಡಿರುವಂತೆಯೇ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೂ ಸಹಕಾರ ನೀಡಿ. ನನ್ನನ್ನು ಗೆಲ್ಲಿಸಿದಂತೆಯೇ ಹೆಚ್ಚಿನ ಅಂತರದಲ್ಲಿ ಅವನನ್ನೂ ಗೆಲ್ಲಿಸಿ ಎಂದು ವೇದಿಕೆಯಿಂದಲೇ ಮನವಿ ಮಾಡಿದರು. ಈ ಸಮಯದಲ್ಲಿ ವೇದಿಕೆಯಲ್ಲೇ ಇದ್ದ ವಿಜಯೇಂದ್ರ ಎದ್ದುನಿಂತು ಜನರಿಗೆ ನಮಸ್ಕರಿಸಿದರು. ನೆರೆದ ಜನರೆಲ್ಲರೂ ಶಿಳ್ಳೆ, ಚಪ್ಪಾಳೆ ಮೂಲಕ ಈ ಘೋಷಣೆಯನ್ನು ಸ್ವಾಗತಿಸಿದರು.
ಏನು ಕಾರಣ?
1. 2018ರ ವಿಧಾನಸಭೆ ಚುನಾವಣೆಗೂ ಮುನ್ನ ವಿಜಯೇಂದ್ರ ಯಾವುದೇ ಸಂಘಟನಾತ್ಮಕ ಹೊಣೆ ಹೊತ್ತಿರಲಿಲ್ಲ. ಹಳೆ ಮೈಸೂರಿನಲ್ಲಿ ಬಿಜೆಪಿ ಬಲವಾಗಿಲ್ಲ, ಅಲ್ಲಿ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸಿದರೆ ಒಳ್ಳೆಯದು ಎಂದು ಯಡಿಯೂರಪ್ಪ ಯೋಚಿಸಿದ್ದರು. ಚುನಾವಣೆ ಟಿಕೆಟ್ ಘೋಷಣೆ ಆಗುವುದಕ್ಕೂ ಮುನ್ನವೇ ವಿಜಯೇಂದ್ರ ಕಣಕ್ಕಿಳಿದು ವರುಣಾದಲ್ಲಿ ಹವಾ ಸೃಷ್ಟಿಸಿದ್ದರು. ಇಲ್ಲಿ ವಿಜಯೇಂದ್ರ ಗೆದ್ದರೆ ತಮ್ಮ ಉತ್ತರಾಧಿಕಾರಿಯಾಗಲು ದಾರಿ ಸುಗಮ ಎಂಬ ಲೆಕ್ಕಾಚಾರವನ್ನೂ ಬಿಎಸ್‌ವೈ ಹೊಂದಿದ್ದರು.
ಆದರೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಂತೆ ಬಿಜೆಪಿ ವರಿಷ್ಠರು ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದರು. ಸ್ವತಃ ಯಡಿಯೂರಪ್ಪ ಅವರೇ ವರುಣಾಕ್ಕೆ ತೆರಳಿ ಬಹಿರಂಗವಾಗಿ ಈ ವಿಚಾರವನ್ನು ಘೋಷಣೆ ಮಾಡುವಂತೆ ಮಾಡಲಾಯಿತು.
ಇದನ್ನೂ ಓದಿ | ಆಡುಮುಟ್ಟದ ಸೊಪ್ಪಿಲ್ಲ, ಬಿಎಸ್‌ವೈ ಮುಟ್ಟದ ಕ್ಷೇತ್ರವೇ ಇಲ್ಲ: ತಂದೆಯನ್ನು ವಿಜಯೇಂದ್ರ ಹಾಡಿ ಹೊಗಳಿದ್ದೇಕೆ?
2. ಜೂನ್‌ನಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡುವ ಸಮಯದಲ್ಲಿ ವಿಜಯೇಂದ್ರ ಅವರನ್ನು ಹೇಗಾದರೂ ಮಾಡಿ ಎಂಎಲ್‌ಸಿ ಮಾಡಿಸುವ ಪ್ರಯತ್ನ ನಡೆಯಿತು. ಆದರೆ ಬಿಜೆಪಿ ದೆಹಲಿ ಮಟ್ಟದಲ್ಲಿ ಮತ್ತೆ ತಿರಸ್ಕೃತವಾಯಿತು.
3. 2018ರಲ್ಲಿ ಕೈತಪ್ಪಿದ್ದ ವರುಣಾ ಕ್ಷೇತ್ರದಲ್ಲಿ ಹೆಚ್ಚಿನ ಲಿಂಗಾಯತರಿದ್ದು, ಅಲ್ಲಿಯೇ ಸ್ಪರ್ಧೆ ಮಾಡಿ ಎಂದು ಕಾರ್ಯಕರ್ತರು ದುಂಬಾಲು ಬಿದ್ದಿದ್ದರು. ಆದರೆ ಈ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯರ ನಿದ್ದೆಗೆಡಿಸಿತ್ತು. ತಮ್ಮ ಪುತ್ರನ ಭವಿಷ್ಯ ಎಲ್ಲಿ ಡೋಲಾಯಮಾನವಾಗುತ್ತದೋ ಎಂದು ಚಿಂತೆಗೀಡಾಗಿದ್ದರು. ಜೂನ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಅವರನ್ನು ʼಆಕಸ್ಮಿಕʼ ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಚಾರ ಚರ್ಚೆಯಾಗಿತ್ತು. ತಮ್ಮ ಪುತ್ರನ ಕ್ಷೇತ್ರದಲ್ಲಿ ಸ್ಪರ್ಧೆ ಬೇಡ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದರು ಎನ್ನಲಾಗಿತ್ತು.
4. ವಿಜಯೇಂದ್ರ ಅವರು ತುಮಕೂರಿನ ಗುಬ್ಬಿ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಚರ್ಚೆಗಳು ಕೆಲ ದಿನದಿಂದ ನಡೆಯುತ್ತಿತ್ತು. ಆದರೆ ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು, ಅಲ್ಲಿ ಈಗಾಗಲೆ ಇರುವ ಸ್ಥಳೀಯ ಕಾರ್ಯಕರ್ತರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಈಗಾಗಲೆ ಎರಡು ಬಾರಿ ಆಫರ್ ರಿಜೆಕ್ಟ್ ಮಾಡಿರುವ ಬಿಜೆಪಿ ವರಿಷ್ಠರು ಈ ಬಾರಿಯೂ ಅದೇ ನಡೆ ಅನುಸರಿಸುವುದಿಲ್ಲ ಎನ್ನಲು ಯಾವುದೇ ಗ್ಯಾರಂಟಿ ಇಲ್ಲ.
5. ವಿಜಯೇಂದ್ರ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡರೆ, ಯಡಿಯೂರಪ್ಪ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ ನಂತರ ಶಿಕಾರಿಪುರದಲ್ಲಿ ಕುಟುಂಬದ ಮತ್ತೊಬ್ಬ ಸದಸ್ಯರಿಗೆ ಟಿಕೆಟ್ ಕೇಳಬೇಕಾಗುತ್ತದೆ. ಒಂದೇ ಕುಟುಂಬದ ಇಬ್ಬರಿಗೆ ಶಾಸಕ ಸ್ಥಾನ, ಮತ್ತೊಬ್ಬರಿಗೆ ಸಂಸದ ಸ್ಥಾನ (ಬಿ.ವೈ. ರಾಘವೇಂದ್ರ) ನೀಡಬೇಕು ಎಂದು ಕೇಳಿದಾಗ ತಿರಸ್ಕೃತವಾಗುವ ಅಪಾಯವೂ ಇರುತ್ತದೆ.
ಇದನ್ನೂ ಓದಿ | ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ: ವಿಜಯೇಂದ್ರ ಉತ್ತರಾಧಿಕಾರಿ
6. ಬಿ.ಎಸ್. ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಶಿಕಾರಿಪುರ ಕ್ಷೇತ್ರದಿಂದಲೇ ಶಾಸಕರಾಗುವ ಪಯಣ ಆರಂಭಿಸುವುದು ಇನ್ನೊಂದು ದೃಷ್ಟಿಕೋನದಿಂದಲೂ ಪ್ರಮುಖ. ಶಿಕಾರಿಪುರದಿಂದ ತಾವು ಸ್ಪರ್ಧೆ ಮಾಡುವುದಿಲ್ಲ, ಅದರ ಬದಲಿಗೆ ವಿಜಯೇಂದ್ರಗೆ ಟಿಕೆಟ್ ನೀಡಿ ಎಂದು ಯಡಿಯೂರಪ್ಪ ಹೇಳಿದರೆ ವರಿಷ್ಠರು ತಿರಸ್ಕಾರ ಮಾಡುವುದು ಬಹುತೇಕ ಅಸಾಧ್ಯ.
7. ಯಡಿಯೂರಪ್ಪ ಅವರ ಕ್ಷೇತ್ರದಲ್ಲೇ ಗೆದ್ದರೆ, ಯಡಿಯೂರಪ್ಪ ಉತ್ತರಾಧಿಕಾರಿ ವಿಜಯೇಂದ್ರ ಎಂಬ ಸಂದೇಶವನ್ನು ನೀಡಲು ಸಹಕಾರವಾಗುತ್ತದೆ. ವೀರಶೈವ ಲಿಂಗಾಯತ ಸಮುದಾಯದಲ್ಲೂ ಈ ಸಂದೇಶವನ್ನು ಸುಲಭವಾಗಿ ರವಾನಿಸಬಹುದು.
ಇದನ್ನೂ ಓದಿ | ವಿಜಯೇಂದ್ರನಿಗೆ ಸಾಮರ್ಥ್ಯ ಇದೆ, ಭವಿಷ್ಯದಲ್ಲಿ ಅವಕಾಶ ಸಿಗಲಿದೆ: BSY