Site icon Vistara News

ವಿಸ್ತಾರ ಸಂಪಾದಕೀಯ: ಈ ಬಾರಿ ದಾಖಲೆಯ ಮತದಾನ, ಜನರ ಮತ ಸಂಭ್ರಮ ಆಶಾದಾಯಕ

Karnataka Election

#image_title

ಕರ್ನಾಟಕ ವಿಧಾನಸಭೆ ಚುನಾವಣೆ ಬಹುತೇಕ ಶಾಂತವಾಗಿ ನಡೆದಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಚುನಾವಣೆ ಉಳಿದವರಿಗೆ ಮಾದರಿ ಆಗುವಂತೆ ನಡೆಯುತ್ತದೆ. ನಾಡಿನ ಜನ ಇದೊಂದು ಹಬ್ಬ ಎನ್ನುವಂತೆ ಅತ್ಯಂತ ಸಂಭ್ರಮದಿಂದ ಮತ ಚಲಾಯಿಸಿದ್ದಾರೆ. ಯುವ ಜನತೆಯ ಮತ ಸಂಭ್ರಮವಂತೂ ಚೇತೋಹಾರಿಯಾಗಿತ್ತು. ಇನ್ನೊಂದೆಡೆ ನೂರು ವರ್ಷ ದಾಟಿದವರೂ ಅತ್ಯಂತ ಉತ್ಸುಕತೆಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಕೆಲವರು ಮತ ಚಲಾಯಿಸುವುದಕ್ಕಾಗಿಯೇ ವಿದೇಶಗಳಿಂದ ಸಾವಿರಾರು ರೂ. ಖರ್ಚು ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಮತದಾರರು ತಾವು ಮತ ಚಲಾಯಿಸಿರುವ ಕುರಿತ ಫೋಟೊಗಳನ್ನು ವಿಸ್ತಾರ ನ್ಯೂಸ್‌ಗೆ ಕಳುಹಿಸಿ ಖುಷಿಪಟ್ಟಿದ್ದಾರೆ. ಜನತೆ ಚುನಾವಣೆಯನ್ನು ಗಣತಂತ್ರದ ನೈಜ ಚೈತನ್ಯವೆಂದೇ ಗ್ರಹಿಸಿ ಸ್ವೀಕರಿಸಿದ್ದಾರೆ. ಚುನಾವಣೆಯೊಂದು ಯಾವುದೇ ದೊಡ್ಡ ಮಟ್ಟದ ಪ್ರಕ್ಷುಬ್ಧತೆ- ಗಲಭೆಗಳಿಲ್ಲದೆ ಶಾಂತವಾಗಿ, ದೊಡ್ಡ ಪ್ರಮಾಣದ ಮತದಾನದೊಂದಿಗೆ ನಡೆಯುವುದೆಂದರೆ ಅಲ್ಲಿನ ಪ್ರಜಾಪ್ರಭುತ್ವ ಆರೋಗ್ಯಕರ ಸ್ಥಿತಿಯಲ್ಲಿದೆ ಎಂದೇ ಅರ್ಥ.

ಚುನಾವಣೆ ಆಯೋಗ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಬಾರಿ ಶೇ.73ರಷ್ಟು ಮತದಾನ ಆಗಿದೆ. ಅಂತಿಮ ವರದಿಯಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು. ಅಂದರೆ ಇತ್ತೀಚಿನ ದಶಕಗಳಲ್ಲೇ ಇದು ದಾಖಲೆಯ ಮತದಾನ. ಇದು ಜನರಲ್ಲಿ ಮತಜಾಗೃತಿ ಮೂಡುತ್ತಿರುವುದರ ಸೂಚಕ ಎನ್ನಬಹುದು. ವಾರದ ಮಧ್ಯದಲ್ಲಿ ಮತದಾನ ನಿಗದಿಪಡಿಸಿದ್ದು, ಮತ ಹಕ್ಕು ಚಲಾಯಿಸುವಂತೆ ವ್ಯಾಪಕ ಪ್ರಚಾರ ಮಾಡಿದ್ದು ಫಲ ನೀಡಿದೆ ಎನ್ನಬಹುದು.

ಗಮನಿಸಬೇಕಾದ ಇನ್ನೊಂದು ಬೆಳವಣಿಗೆ ಎಂದರೆ ಈ ಬಾರಿ ಮತಪಟ್ಟಿಯಲ್ಲಿ ಹೆಸರು ಬಿಟ್ಟು ಹೋದ ಬಗ್ಗೆ ವ್ಯಾಪಕ ದೂರುಗಳಿಲ್ಲ. ಪ್ರತಿ ಚುನಾವಣೆಯಲ್ಲೂ, ಸಾವಿರಾರು ಮಂದಿಯ ಹೆಸರು ಮತಪಟ್ಟಿಯಿಂದ ನಾಪತ್ತೆ ಆಗಿರುವ ಬಗ್ಗೆ ಭಾರಿ ರಂಪಾಟವೇ ನಡೆಯುತ್ತಿತ್ತು. ಈ ಸಲ ಒಂದೆರಡು ಕಡೆ ಮಾತ್ರ ಬೆರಳೆಣಿಕೆಯಷ್ಟು ಮಂದಿಯ ದೂರುಗಳು ಕೇಳಿಬಂದಿವೆ. ಅಂದರೆ ಅಷ್ಟರ ಮಟ್ಟಿಗೆ ಚುನಾವಣಾ ಆಯೋಗದ ಕಣ್ಗಾವಲು ಪರಿಣಾಮಕಾರಿಯಾಗಿರುವುದು ಸ್ಪಷ್ಟವಾಗಿದೆ. ಪ್ರಚಾರ ಹಾಗೂ ನೀತಿ ಸಂಹಿತೆಯ ಸಂದರ್ಭದಲ್ಲಿ ಪಕ್ಷಗಳ ಮೇಲೆ, ಅಭ್ಯರ್ಥಿಗಳ ಮೇಲೆ ಇಡಲಾಗಿದ್ದ ಬಿಗಿಯಾದ ಕಣ್ಗಾವಲು ಕೂಡ ಇದನ್ನೇ ಹೇಳುತ್ತದೆ. ಈ ಹಿಂದೆ ವಶಪಡಿಸಿಕೊಳ್ಳಲಾದ ಅಕ್ರಮ ಹಣ, ಗಿಫ್ಟ್‌ಗಳ ಬಗ್ಗೆ ಸರಿಯಾದ ತನಿಖೆ ಮುಂದೆ ನಡೆಯಬೇಕಾದ ಅಗತ್ಯವಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಇಮ್ರಾನ್ ಖಾನ್ ಬಂಧನ; ಪಾಕಿಸ್ತಾನದಲ್ಲಿ ಮತ್ತೊಂದು ಪ್ರಹಸನ

ಮತದಾನ ಮುಗಿದು ಈಗಾಗಲೇ ಮತಗಟ್ಟೆ ಸಮೀಕ್ಷೆಗಳೂ ಬಂದಿವೆ. ಯಾರಿಗೆ ಸೋಲು, ಯಾರಿಗೆ ಗೆಲುವು ಎಂಬ ಬಗ್ಗೆ ಗುಣಾಕಾರ, ಭಾಗಾಕಾರಗಳು ನಡೆಯುತ್ತಿವೆ. ಒಂದು ಪಕ್ಷಕ್ಕೆ ಅತಿಯಾದ ಬಹುಮತ ಹೇಗೆ ಹಾನಿಕರವೋ, ಅತಂತ್ರವೂ ಅದೇ ರೀತಿ ಹಾನಿಕರ ಎಂಬುದನ್ನು ನಾವು ನೋಡಿದ್ದೇವೆ. ಅಂಥ ಅತಂತ್ರ ಸರ್ಕಾರ ಬರದೇ ಇರಲಿ ಎಂದು ಹಾರೈಸುವುದು ಬಿಟ್ಟರೆ ಈಗ ಬೇರೆ ಹಾದಿ ಉಳಿದಿಲ್ಲ. ನಮ್ಮ ಕರ್ತವ್ಯವನ್ನು ಹೊಣೆಯರಿತ ಪ್ರಜೆಗಳಾಗಿ ನಾವು ಮಾಡಿದ್ದೇವೆ ಎಂಬುದು ಒಂದು ಸಂತೋಷ. ಏನೇ ಫಲಿತಾಂಶ ಬಂದರೂ ಅದು ಹಲವು ಸಂದೇಶಗಳನ್ನು ರವಾನಿಸುತ್ತಿರುತ್ತದೆ. ಸರಿಯಾದ, ನ್ಯಾಯಸಮ್ಮತವಾದ ರೀತಿಯಲ್ಲಿ, ಪ್ರಜಾಪ್ರಭುತ್ವದ ಚೈತನ್ಯಕ್ಕೆ ಒಪ್ಪುವಂತೆ ಸರ್ಕಾರ ರಚನೆಯಾಗಿ ಈ ನಾಡಿನ ಜನತೆ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ನಾವು ಹಾರೈಸಬಹುದು. ಯಾರೇ ಗೆಲ್ಲಲಿ, ಯಾರೇ ಸೋಲಲಿ. ಆದರೆ ಪ್ರಜಾಪ್ರಭುತ್ವ ಮಾತ್ರ ಸದಾ ಗೆಲ್ಲುತ್ತಲೇ ಇರಲಿ.

Exit mobile version