Site icon Vistara News

Rain News | ಮಹಾಮಳೆಯಿಂದ ಕೊಲ್ಲಾಪುರದಲ್ಲಿ ರೆಡ್‌ ಅಲರ್ಟ್‌, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ

ರೆಡ್‌ ಅಲರ್ಟ್

ಚಿಕ್ಕೋಡಿ: ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಶುಕ್ರವಾರದವರೆಗೆ ರೆಡ್ ಅಲರ್ಟ್‌, ಜುಲೈ 9ರಂದು ಆರೆಂಜ್‌ ಅಲರ್ಟ್‌ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಭಾರಿ ಮಳೆಯಿಂದ ಅಪಾರ ಪ್ರಮಾಣದ ನೀರು ಉಪನದಿಗಳಿಂದ ಕೃಷ್ಣಾನದಿಗೆ ಹರಿದುಬರುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಸತತ ಮಳೆ ಬೀಳುತ್ತಿದ್ದು, ಪಂಚಗಂಗಾ, ದೂಧ್‌ಗಂಗಾ, ವಾರಣಾ, ಹಿರಣ್ಯಕೇಶಿ,‌ ಘಟಪ್ರಭಾ, ವೇದಗಂಗಾ ನದಿಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಮಳೆ ಹೀಗೇ ಮುಂದುವರಿದರೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿದು ನದಿ ಪಾತ್ರದ ಗ್ರಾಮಗಳು ಪ್ರವಾಹಕ್ಕೆ ಸಿಲುಕುವ ಸಾಧ್ಯತೆಗಳಿವೆ. ಈಗಾಗಲೇ ಬೆಳಗಾವಿ, ಬಾಗಲಕೋಟೆ ಜನರು ಪ್ರವಾಹ ಭೀತಿಯಿಂದ ಚಡಪಡಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ನಾರಾಯಣಪುರ, ಆಲಮಟ್ಟಿ ಜಲಾಶಯ ಮೇಲ್ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೃಷ್ಣಾ ನದಿಯಲ್ಲಿ ಭಾರಿ ನೀರಿನ ಹರಿವು ಹೆಚ್ಚಾಗಿ ನಾರಾಯಣಪುರ ಜಲಾಶಯ 491 ಮೀಟರ್‌ ಭರ್ತಿಯಾಗಿದೆ (ಒಟ್ಟು 492 ಮೀ ಎತ್ತರ). ಇದರಿಂದಾಗಿ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ಪಾತ್ರದ ಜನರು ಸಹ ಭಯಭೀತರಾಗಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಸೇತುವೆಗಳು ಮುಳುಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜಲಾಶಯಗಳಿಂದ ನೀರು ಬಿಡುವ ಸಂದರ್ಭದಲ್ಲಿ ಜನ ಎಚ್ಚರದಿಂದ ಇರುಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ | Rain News | ಮಹಾರಾಷ್ಟ್ರ ಮಳೆಗೆ ಬೆಳಗಾವಿ ತತ್ತರ; ಅಪಾಯಮಟ್ಟದತ್ತ ನದಿಗಳು, ಸೇತುವೆಗಳು ಜಲಾವೃತ

Exit mobile version