Site icon Vistara News

ಕಾದಂಬರಿಕಾರ, ಲಲಿತ ಪ್ರಬಂಧಕಾರ ಶ್ರೀನಿವಾಸ ವೈದ್ಯ ಇನ್ನಿಲ್ಲ

srinivasa vaidya

ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರ, ಲಲಿತ ಪ್ರಬಂಧಕಾರ ಶ್ರೀನಿವಾಸ ವೈದ್ಯ ಅವರು ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ʼಹಳ್ಳ ಬಂತು ಹಳ್ಳʼ ಕಾದಂಬರಿಯ ಮೂಲಕ ಕನ್ನಡದ ಮನೆಮಾತಾಗಿದ್ದ ಅವರು ಕೇಂದ್ರ ಹಾಗೂ ರಾಜ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಮುಂಬಯಿ ಮುಂತಾದೆಡೆ ಬ್ಯಾಂಕಿಂಗ್‌ ವೃತ್ತಿಯ ಬಳಿಕ ನಿವೃತ್ತಿ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದರು.

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಏಪ್ರಿಲ್ 4, 1936ರಲ್ಲಿ ಜನಿಸಿದ ಇವರು ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದು, ಬ್ಯಾಂಕಿಂಗ್ ಪರೀಕ್ಷೆ ಉತ್ತೀರ್ಣರಾಗಿದ್ದರು. ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿ ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತರಾಗಿದ್ದರು.

ಮೊದಲು ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಬರೆಯುತ್ತಿದ್ದ ವೈದ್ಯರು ನಂತರ ಕಾದಂಬರಿಯತ್ತ ಜಿಗಿದರು. ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (2004) ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (2008) ಪಡೆದಿದ್ದಾರೆ. ‘ತಲೆಗೊಂದು ತರತರ’ ‘ಮನಸುಖರಾಯನ ಮನಸು’ ‘ರುಚಿಗೆ ಹುಳಿಯೊಗರು’ ಇವರ ಲಲಿತ ಪ್ರಬಂಧಗಳ ಸಂಕಲನಗಳು. ‘ಅಗ್ನಿಕಾರ್ಯ’ ʼಕಪ್ಪೆ ನುಂಗಿದ ಹುಡುಗʼ ಸಣ್ಣ ಕತೆಗಳ ಸಂಕಲನಗಳು. ʼಕರ್ನಲ್‍ನಿಗೆ ಯಾರೂ ಬರೆಯುವುದೇ ಇಲ್ಲʼ ಮಾರ್ಕ್ವೇಝ್‍ನ ಕಾದಂಬರಿಯ ಅನುವಾದ. ಪರಮಾನಂದ ಪ್ರಶಸ್ತಿ (2003), ರಾಜ್ಯೋತ್ಸವ ಪ್ರಶಸ್ತಿ (2010)ಗಳು ಇವರಿಗೆ ಲಭಿಸಿವೆ.

Exit mobile version