ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಸಾವು ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಈ ಶಂಕೆಗಳನ್ನು ದಾಖಲಿಸಿ ಚಂದ್ರಶೇಖರ್ ತಂದೆ ರಮೇಶ್ ಅವರು ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂದ್ರು ಮೃತದೇಹ ಕಾರಿನ ಹಿಂಬದಿಯ ಸೀಟಿನಲ್ಲಿ ಇತ್ತು. ಆತನ ಕೈ ಹಾಗೂ ಕಾಲುಗಳಲ್ಲಿ ಕಟ್ಟಿಹಾಕಿದ ಗುರುತು ಇತ್ತು. ಕಿವಿಗಳಲ್ಲಿ ಕೂಡ ಹಲ್ಲೆ ಮಾಡಿದ ಗುರುತು ಇತ್ತು. ತಲೆಗೂ ಆಯುಧದಿಂದ ಹಲ್ಲೆ ಮಾಡಿದ ಗುರುತುಗಳಿವೆ. ಹೀಗಾಗಿ ಮಗನನ್ನು ಯಾರೋ ದುಷ್ಕರ್ಮಿಗಳು ಹೊಡೆದು ಕೊಲೆ ಮಾಡಿ ನಂತರ ಕಾರಿನಲ್ಲಿ ಶವವನ್ನು ಇರಿಸಿ ಅಪಘಾತ ನಡೆದ ರೀತಿಯಲ್ಲಿ ಬಿಂಬಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.
ತಂದೆ ರಮೇಶ್ ನೀಡಿದ ದೂರಿನನ್ವಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಈ ಮೊದಲು ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗ ಕೊಲೆ (ಐಪಿಸಿ ಸೆಕ್ಷನ್ 302), ಸಾಕ್ಷ್ಯನಾಶ ಪಡಿಸುವಿಕೆ (201) ಮತ್ತು ವಾಹನ ಜಖಂ (427) ಸಂಬಂಧಿಸಿದಂತೆ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇಂದು ಅಂತಿಮ ದರ್ಶನ, ಅಂತ್ಯಕ್ರಿಯೆ
ರೇಣುಕಾಚಾರ್ಯ ಅವರ ಸ್ವಗ್ರಾಮ ಕುಂದೂರಿನಲ್ಲಿ ಚಂದ್ರು ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಇಂದು ನಡೆಯಲಿದೆ. ಹೊನ್ನಾಳಿ ಪಟ್ಟಣ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಮಧ್ಯಾಹ್ನ 12 ಘಂಟೆಗೆ ಮಠದ ವೃತ್ತದಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಯಲಿದ್ದು, ಗೊಲ್ಲರಹಳ್ಳಿ ಮಾರ್ಗವಾಗಿ ಮಾಸಡಿ, ತರಗನಹಳ್ಳಿ ಸಿಂಟಗೆರೆ, ಹನುಮನಹಳ್ಳಿ ಮಾರ್ಗವಾಗಿ ಹುಟ್ಟೂರು ಕುಂದೂರಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ. ಕುಂದೂರಿನಲ್ಲಿರುವ ತೆಂಗಿನ ತೋಟದಲ್ಲಿ ರೇಣುಕಾಚಾರ್ಯ ತಂದೆ ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ | ಚಂದ್ರು ಸಾವು ಸಹಜವಲ್ಲ, ಕೊಲೆ ಎಂದ ರೇಣುಕಾಚಾರ್ಯ