Site icon Vistara News

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್;‌ ಮೊಬೈಲ್‌ ಪಾಸ್‌ವರ್ಡ್‌ ನೀಡಲು ದರ್ಶನ್‌ & ಗ್ಯಾಂಗ್‌ ತಕರಾರು!

Actor Darshan

Renukaswamy Murder Case: Actor Darshan And Gang Refused To Give Mobile Password To Police

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಹಾಗೂ ಆತನ ಗ್ಯಾಂಗ್‌ನ ಹಲವು ಆರೋಪಿಗಳನ್ನು ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.

ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಷ್ಟಾದರೂ ಪಟ್ಟು ಬಿಡದ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಶ್ನೆಗಳ ಸುರಿಮಳೆ

ಶರಣಾಗಿರುವ ಆರೋಪಿಗಳನ್ನು ಡ್ರಿಲ್‌ ಮಾಡುತ್ತಿರುವ ಪೊಲೀಸರು, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಕರಣದ ಸಂಬಂಧ ನೀವೇನಾದರೂ ಹಣ ಪಡೆದಿದ್ರಾ? ನಿಮ್ಮನ್ನು ಸಂಪರ್ಕಿಸಿದವರು ಯಾರು? ಯಾರ ಮಾತನ್ನು ನೀವು ಕೇಳಿ ನೀವು ಪ್ರಕರಣದಲ್ಲಿ ಭಾಗಿಯಾದಿರಿ? ದರ್ಶನ ಜತೆ ನೀವೇನಾದರೂ ನೇರವಾಗಿ ಸಂಪರ್ಕದಲ್ಲಿ ಇದ್ರಾ? ಆರೋಪಿ ರಘು ನಿಮ್ಮನ್ನು ಭೇಟಿಯಾಗಿ ಹೇಳಿದ್ದೇನು? ಶೆಡ್‌ ಒಳಗೆ ಯಾರೆಲ್ಲ ಹೋದರು? ನೀವೂ ಹೋಗಿದ್ರಾ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ಟೀಮ್‌ಗೆ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಸೇರ್ಪಡೆ

ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿದೆ. ಎಸಿಪಿ ಚಂದನ್‌ ಹಾಗೂ ಗಿರೀಶ್‌ ನಾಯ್ಕ್‌ ಅವರು ದರ್ಶನ್‌ನನ್ನು ಮೈಸೂರಿನಿಂದ ಕರೆತಂದಿದ್ದರು. ಆರಂಭದಲ್ಲಿ ಗಿರೀಶ್‌ ನಾಯ್ಕ್‌ ಅವರೇ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು.

ಗಿರೀಶ್‌ ನಾಯ್ಕ್‌ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಎಸಿಪಿ ಚಂದನ್‌ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ಈಗ ಗಿರೀಶ್‌ ನಾಯ್ಕ್‌ ಅವರನ್ನು ಮತ್ತೆ ಸಹಾಯಕ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಗ್ಯಾಂಗ್‌ಗೆ ಮತ್ತೆ 5 ದಿನ ಪೊಲೀಸ್‌ ಕಸ್ಟಡಿ; ಜಡ್ಜ್‌ ಮುಂದೆ ಪವಿತ್ರಾ ಗೌಡ ಕಣ್ಣೀರು!

Exit mobile version