Site icon Vistara News

Actor Darshan: ಕೊಲೆ ಕೇಸ್‌ಗೆ ಕ್ಷಣಕ್ಕೊಂದು ಟ್ವಿಸ್ಟ್;‌ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನೂ ಅರೆಸ್ಟ್!

Actor Darshan

Renukaswamy Murder Case: Actor Darshan's Fans association President Also Arrested

ಬೆಂಗಳೂರು: ನಟ ದರ್ಶನ್‌ ಗೆಳತಿ, ನಟಿಯೂ ಆದ ಪವಿತ್ರಾ ಗೌಡ (Pavithra Gowda) ಅವರ ಕುರಿತು ಅಶ್ಲೀಲ ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ನಡೆದ ರೇಣುಕಾಸ್ವಾಮಿ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವುಗಳು ಸಿಗುತ್ತಿವೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಹಾಗೂ ಅವರ ಗೆಳತಿ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ, ಇದೇ ಕೇಸ್‌ಗೆ ಸಂಬಂಧಿಸಿದಂತೆ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ (Raghavendra) ಅಲಿಯಾಸ್‌ ರಘು ದರ್ಶನ್‌ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂಗೆ ಅಖಿಲ ಕರ್ನಾಟಕ ತೂಗುದೀಪ ಸೇನಾ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಘು ದರ್ಶನ್‌ ಎಂಬಾತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಳುಹಿಸಲು ದರ್ಶನ್‌ ಅವರು ರಘು ದರ್ಶನ್‌ ಅವರ ನೆರವು ಪಡೆದಿದ್ದರು ಎನ್ನಲಾಗಿದೆ. ಕೊಲೆ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದ ಸಂಚಿನ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಪತ್ನಿ ಗರ್ಭಿಣಿ

ರೇಣುಕಾಸ್ವಾಮಿ ಹಾಗೂ ಸಹನಾ 2023ರ ಜೂನ್‌ 28ರಂದು ಮದುವೆಯಾಗಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಇಬ್ಬರೂ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸುವವರಿದ್ದರು. ಇದರ ಮಧ್ಯೆಯೇ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಸಹನಾ ಈಗ ಐದು ತಿಂಗಳ ಗರ್ಭಿಣಿಯಾಗಿದ್ದು, ಅವರಿಗೆ ರೇಣುಕಾಸ್ವಾಮಿ ಸಾವಿಗೀಡಾಗಿರುವ ವಿಚಾರವನ್ನು ಕುಟುಂಬಸ್ಥರು ಇನ್ನೂ ತಿಳಿಸಿಲ್ಲ. ಆಸ್ಪತ್ರೆಯಲ್ಲಿದ್ದಾನೆ, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದಷ್ಟೇ ಹೇಳಿದ್ದಾರೆ. ಪತಿಯ ಸಾವಿನ ವಿಚಾರ ತಿಳಿದರೆ, ಗರ್ಭವತಿಯಾಗಿರುವ ಸಹನಾಗೆ ಏನಾಗುತ್ತದೆಯೋ ಎಂಬ ಭಯದಿಂದ ಕುಟುಂಬಸ್ಥರು ಸಾವಿನ ವಿಚಾರ ತಿಳಿಸಿಲ್ಲ ಎಂದು ಹೇಳಲಾಗುತ್ತಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಜೂನ್‌ 8ರಂದು ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಜೂನ್‌ 9ರ ಭಾನುವಾರ ರಾಜಕಾಲುವೆ ಬಳಿ ಶವ ಪತ್ತೆಯಾಗಿತ್ತು. ಬೀದಿ ನಾಯಿಗಳು ಕಸ ಎಳೆದಾಡುವಾಗ ಶವ ಪತ್ತೆಯಾಗಿತ್ತು. ಇದಾದ ಬಳಿಕ ಅದೇ ದಿನ ರಾಮ್‌ ದೋರ್‌ ಎಂಬ ಸೆಕ್ಯುರಿಟಿ ಗಾರ್ಡ್‌ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್‌; ಪೊಲೀಸರು ಹೇಳಿದ್ದೇನು?

Exit mobile version