ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಎರಡು ದಿನ ಪೊಲೀಸ್ ಕಸ್ಟಡಿಗೆ ವಹಿಸಿದೆ. ಇನ್ನು ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾ ಗೌಡ ಸೇರಿ ಒಟ್ಟು 11 ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನು ನ್ಯಾಯಾಲಯಕ್ಕೆ ಪೊಲೀಸರು ಎರಡು ರಿಮ್ಯಾಂಡ್ ಅರ್ಜಿಗಳನ್ನು ಸಲ್ಲಿಸಿತ್ತು. ದರ್ಶನ್ ಸೇರಿ ಆರು ಆರೋಪಿಗಳನ್ನು ಮಾತ್ರ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂಬುದಾಗಿ ಕೋರಿತ್ತು. ಈಗ ಇಷ್ಟೇ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂಬುದಾಗಿ ಮನವಿ ಮಾಡಿದ್ದು ಏಕೆ ಎಂಬುದೇ ರೋಚಕವಾಗಿದೆ.
ಹೌದು, ನಟ ದರ್ಶನ್, ವಿನಯ್, ಪ್ರದೋಷ್ ಹಾಗೂ ಧನರಾಜ್‌ನನ್ನು ನ್ಯಾಯಾಲಯವು 2 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಹಣ ಪಡೆದಿದ್ದೇ ಎ 14 ಪ್ರದೋಷ್. ದರ್ಶನ್ ಪರಮಾಪ್ತನಾಗಿರುವ ಈತನು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾನೆ. ಇನ್ನು, ಎ 10 ವಿನಯ್ ಸ್ಟೋನಿ ಬ್ರೂಕ್ ರೆಸ್ಟೋರೆಸ್ಟ್‌ನ ಮಾಲೀಕನಾಗಿದ್ದಾನೆ. ವಿನಯ್ ಮಾವ ಪಟ್ಟಣಗೆರೆ ಜಯಣ್ಣ ಅವರ ಮಾಲೀಕತ್ವದ ಶೆಡ್‌ನಲ್ಲೇ ಕೊಲೆ ನಡೆದಿದೆ. ಮತ್ತೊಂದೆಡೆ, ರೇಣುಕಾಸ್ವಾಮಿಯ ಮೊಬೈಲ್‌ಅನ್ನು ಧನರಾಜ್ ಬಿಸಾಡಿದ್ದಾನೆ. ಹಾಗಾಗಿ, ಪೊಲೀಸರು ನಾಲ್ವರನ್ನು ಕಸ್ಟಡಿಗೆ ಪಡೆದಿದ್ದಾರೆ.
ಪೊಲೀಸರ ಪರವಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನಕುಮಾರ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ರೇಣುಕಾಸ್ವಾಮಿಯ ಮೊಬೈಲ್ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬರಬೇಕು. ಮೃತ ವ್ಯಕ್ತಿಯ ಒಳಾಂಗಗಳ ಎಫ್‌ಎಸ್‌ಎಲ್ ವರದಿ, ಆರೋಪಿಗಳ ಎಫ್‌ಎಸ್‌ಎಲ್ ವರದಿ ಬರಬೇಕು. ಹಾಗಾಗಿ, ದರ್ಶನ್ ಸೇರಿ ಕೆಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು” ಎಂಬುದಾಗಿ ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಅವರು ನಾಲ್ವರನ್ನು ಪೊಲೀಸ್ ಕಸ್ಟಡಿಗೆ ವಹಿಸಿದರು. ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಕೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲ್‌ಗಳು, ಸ್ಥಳ ಮಹಜರು ವೇಳೆ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.
ಪವಿತ್ರಾ ಗೌಡ ಸೇರಿ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇವರನ್ನು ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತದೆ. ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ , ರವಿ ಕಾರ್ತಿಕ್ ಜೈಲುಪಾಲಾಗಲಿದ್ದಾರೆ. ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ಹತ್ಯೆ ಸಂಬಂಧ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿತ್ತು. ಅದೇ ದಿನ ಪವಿತ್ರಾ ಗೌಡರನ್ನೂ ಬಂಧಿಸಲಾಗಿತ್ತು.
ಇದನ್ನೂ ಓದಿ: Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!