Site icon Vistara News

Reservation | ರಾಜ್ಯದಲ್ಲಿ ಮೀಸಲಾತಿ ಕಿಚ್ಚು: ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ

ಎಸ್‌ಸಿ ಎಸ್‌ಟಿ ಪ್ರತಿಭಟನೆ

ಬೆಂಗಳೂರು: ಎಸ್‌ಸಿ,ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದವರು ಬೀದಿಗಿಳಿದು ಪ್ರತಿಭಟಿಸಿದರು. ಮೀಸಲಾತಿ ಹೆಚ್ಚಳದ ಕುರಿತು ಮಾತು ಕೊಟ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಕಿಡಿಕಾರಿದರು.

ಕಳೆದ 150 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದ ಪುರಿ ಸ್ವಾಮೀಜಿ ಧರಣಿ ಕುಳಿತಿದ್ದು, ಇವರ ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕ್ರಿಯಾ ಸಮಿತಿಯಿಂದ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿತ್ತು. ಅದರಂತೆ ಮೀಸಲಾತಿ ಕಿಚ್ಚು ಹಲವು ಜಿಲ್ಲೆಗಳಲ್ಲಿ ಜೋರಾಗಿತ್ತು.

ಇದನ್ನೂ ಓದಿ | ಬೇಡ ಜಂಗಮರಿಗೆ ಎಸ್ಸಿ ಮೀಸಲಾತಿ ಬೇಡವೇ ಬೇಡವೆಂದ ಆದಿಜಾಂಬವ ಸಂಘಟನೆ; ವಿಧಾನಸೌಧದಲ್ಲಿ ಹೈಡ್ರಾಮ

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಗೆ ಯತ್ನ

ರಾಯಚೂರಿನಲ್ಲಿ ಸಾವಿರಾರು ಹೋರಾಟಗಾರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಬ್ಯಾರಿಕೇಡ್ ತಳ್ಳಿ ಮುಂದೆ ನುಗ್ಗಲು ಯತ್ನಿಸಿದ‌ ಪ್ರಸಂಗವೂ ನಡಯಿತು. ಧಾರವಾಡ ಹಾಗೂ ಹಾವೇರಿಯ ಹುಕ್ಕೇರಿ ಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಮೀಸಲಾತಿ ಕಾವು ಜೋರಾಗಿತ್ತು. ರಾಮನಗರದಲ್ಲಿ ವಾಲ್ಮೀಕಿ ನಾಯಕ ಸಮುದಾಯದೊಂದಿಗೆ ಭೋವಿ, ಲಂಬಾಣಿ ಇನ್ನಿತರೆ ಸಮುದಾಯದವರು ನಮಗೂ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರಾದ ಬಿ.ನಾಗೇಂದ್ರ ಮತ್ತು ಗಣೇಶ್‌ರನ್ನು ಪೊಲೀಸರು ವಶಕ್ಕೆ ಪಡೆದರು. ಮೀಸಲಾತಿ ವಿಷಯದಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಮೀಸಲಾತಿ‌ ಹೆಚ್ಚಳ ಮಾಡದಿದ್ದರೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ವಿಳಂಬ ಧೋರಣೆ ವಿರುದ್ಧ ವಿಜಯನಗರದಲ್ಲೂ ವಾಲ್ಮೀಕಿ ಸಮುದಾಯವು ಧರಣಿ ಕೈಗೊಂಡಿತ್ತು. ಕಾಂಗ್ರೆಸ್‌ ಶಾಸಕ ಭೀಮಾನಾಯ್ಕ್ ಜಿಲ್ಲಾಧಿಕಾರಿ ಕಚೇರಿಗೆ ಮುಖ್ಯದ್ವಾರಕ್ಕೆ ಬೀಗ ಜಡಿದರು. ಬಳಿಕ ಗೇಟ್ ಮೇಲೇರಿ ಡಿಸಿ ಕಚೇರಿಗೆ ಒಳಗೆ ಹೋಗಲು ಯತ್ನಿಸಿದಾಗ ಶಾಸಕರು ಸೇರಿದಂತೆ ನೂರಾರು ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

ಅಂಗಡಿ ಮುಂಗಟ್ಟುಗಳು ಬಂದ್‌

ಬಾಗಲಕೋಟೆ ನವನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು. ಎಸ್‌ಟಿ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ಶೇ.3 ರಿಂದ ಶೇ. 7.5ಕ್ಕೆ ಹಾಗೂ ಎಸ್‌ಸಿ ಸಮುದಾಯಕ್ಕೆ ಶೇ.15ರಿಂದ ಶೇ. 17ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ದಲಿತ ಸಂಘಟನೆಗಳು ಸೇರಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ  ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ | 100ನೇ ದಿನಕ್ಕೆ ಕಾಲಿಟ್ಟ ಮೀಸಲಾತಿ ಹೋರಾಟ: ರಾಜ್ಯಾದ್ಯಂತ ಬೆಂಬಲ

Exit mobile version