Site icon Vistara News

ರಾಜ್ಯ ರಾಜಕೀಯದಲ್ಲಿ `ನಿವೃತ್ತಿʼ ಚರ್ಚೆ: ಬಿಜೆಪಿಯಲ್ಲಿ ನಡುಕ, 92ರಲ್ಲೂ ನಿವೃತ್ತಿ ಇಲ್ಲವೆಂದ ಶ್ಯಾಮನೂರು

Karnataka politics

ಬೆಂಗಳೂರು: ರಾಜ್ಯ ರಾಜಕೀಯದಲ್ಲೀಗ ನಿವೃತ್ತಿ ಮಾತುಗಳದ್ದೇ ಚರ್ಚೆ. ನಾನು ನಿವೃತ್ತಿ ಆಗುತ್ತೇನೆ ಎಂದು ಒಬ್ಬ ನಾಯಕ ಹೇಳಿದರೆ, ಅದೇ ವಯಸ್ಸಿನ ಇನ್ನಿತರೆ ನಾಯಕರಲ್ಲಿ ನಡುಕ ಉಂಟಾಗುತ್ತದೆ. ಮತ್ತೊಬ್ಬರು, ಬದುಕಿರುವವರೆಗೂ ನಾನೇ ಶಾಸಕ ಎನ್ನುತ್ತಾರೆ.

ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸೇರಿ ಅನೇಕರು ʻಕೊನೆಯ ಚುನಾವಣೆʼ ಎಂದುಕೊಂಡೇ ಅನೇಕ ಬಾರಿ ಸ್ಪರ್ಧಿಸಿದ ಉದಾಹರಣೆಗಳಿವೆ. ಆದರೆ ಈ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಮೊದಲಿಗೆ ಈ ಚರ್ಚೆ ಆರಂಭವಾಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ. ಕೋಲಾರ, ಬಾದಾಮಿ, ಚಾಮುಂಡೇಶ್ವರಿ ಸೇರಿ ವಿವಿಧೆಡೆ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆಗಳು ನಡೆದಿವೆ. ಈ ಸಂದರ್ಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನನಗೆ ಈಗ 75 ವರ್ಷವಾಗಿದೆ, ಈ ಬಾರಿ ಸ್ಪರ್ಧಿಸಿ ಅವಧಿ ಮುಗಿಯುವ ವೇಳೆಗೆ 79 ವರ್ಷವಾಗಿರುತ್ತದೆ. ಹಾಗಾಗಿ ಇದೇ ಕೊನೆಯ ಚುನಾವಣೆ ಎಂದಿದ್ದರು.

ಇದನ್ನೂ ಓದಿ | ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಯಾರ‍್ಯಾರು ಏನೇನು ಹೇಳಿದರು?

ವಿಜಯೇಂದ್ರಗೆ ಕ್ಷೇತ್ರ ಎಂದ ಯಡಿಯೂರಪ್ಪ

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಎರಡು ದಿನದ ಹಿಂದೆ ಶಿವಮೊಗ್ಗದಲ್ಲಿ ತಮ್ಮ ನಿವೃತ್ತಿ ಇಂಗಿತವನ್ನು ವ್ಯಕ್ತಪಡಿಸಿದ್ದರು. ಶಿಕಾರಿಪುರದಲ್ಲಿ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಣೆ ನಂತರ ಮಾತನಾಡಿದ್ದ ಯಡಿಯೂರಪ್ಪ, ತಮ್ಮ ಕ್ಷೇತ್ರದಲ್ಲಿ ಮುಂದಿನ ಬಾರಿಯಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಿಸಿದರು. ತಂದೆಯವರ ಮಾತಿಗೆ ತಮ್ಮ ಸಹಮತಿ ಇರುವುದಾಗಿ ವಿಜಯೇಂದ್ರ ಸಹ ಪ್ರತಿಕ್ರಿಯಿಸಿದ್ದರು.

ಮಾರನೆಯ ದಿನ ಈ ಕುರಿತು ಮತ್ತೆ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ, ನಾನು ಸ್ಪರ್ಧೆ ಮಾಡುವುದಿಲ್ಲ ಎಂದಷ್ಟೆ ಹೇಳಿದ್ದೇನೆ. ಈ ಸ್ಥಾನಕ್ಕೆ ವಿಜಯೇಂದ್ರ ಸ್ಪರ್ಧಿಸಲು ಅವಕಾಶ ನೀಡಿ ಎನ್ನುವುದು ನನ್ನ ಕೋರಿಕೆ ಅಷ್ಟೆ. ಅಂತಿಮ ನಿರ್ಧಾರವನ್ನು ವರಿಷ್ಠರು ಕೈಗೊಳ್ಳುತ್ತಾರೆ ಎಂದಿದ್ದರು.

ಬಜೆಪಿಯಲ್ಲಿ ನಡುಕ

ಯಡಿಯೂರಪ್ಪ ನಿವೃತ್ತಿ ಮಾತನ್ನು ಆಡುತ್ತಿರುವಂತೆಯೇ ಬಿಜೆಪಿಯಲ್ಲಿರುವ ಇನ್ನಿತರೆ ಹಿರಿಯ ಶಾಸಕರಿಗೆ ನಡುಕ ಆರಂಭವಾಗಿದೆ.

2023 ಚುನಾವಣೆಯಲ್ಲಿ ಟಿಕೆಟ್​ ಆಸೆ ಇಟ್ಟಿಕೊಂಡಿರುವವರಿಗೆ ಈ ಬೆಳವಣಿಗೆ ಆತಂಕ ಮೂಡಿಸಿದೆ. ತಮ್ಮ ಆಪ್ತರ ಬಳಿ ಇಂತಹ ಚರ್ಚೆ ನಡೆಸುತ್ತಿದ್ದಾರೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಯುವ ನಾಯಕತ್ವವನ್ನು ಬೆಳೆಸುವ ಚಿಂತನೆಯಲ್ಲಿ ಬಿಜೆಪಿ ವರಿಷ್ಠರಿದ್ದು, ಹಿರಿ ತಲೆಗಳನ್ನು ಪಕ್ಷ ಸಂಘಟನೆಯ ಮಾರ್ಗದರ್ಶನಕ್ಕೆ ಬಳಸಿಕೊಳ್ಳಬಹುದು ಎನ್ನಲಾಗಿದೆ. ಪಕ್ಷವನ್ನು ಇನ್ನೂ 20ರಿಂದ 30 ವರ್ಷ ಸಂಘಟನಾತ್ಮಕವಾಗಿ ಬಲಪಡಿಸಬೇಕು ಎನ್ನುವ ಚಿಂತನೆ ವರಿಷ್ಠರದ್ದು.

ಸಚಿವರಾದ ಗೋವಿಂದ ಕಾರಜೋಳ 71 ವರ್ಷ, ಎಂಟಿಬಿ ನಾಗರಾಜ್ ಗೆ 71 ವರ್ಷ, ವಿ. ಸೋಮಣ್ಣಗೆ 72 ವರ್ಷ​, ಕೆ.ಎಸ್​ ಈಶ್ವರಪ್ಪ 74 ವರ್ಷ, ಹಾಲಪ್ಪ ಆಚಾರ್​ 72 ವರ್ಷ, ಮಾಧುಸ್ವಾಮಿ 69 ವರ್ಷಗಳನ್ನು ಪೂರೈಸಿದ್ದಾರೆ. ಸಂಸದರಾದ ಬಿ.ಎನ್​​ ಬಚ್ಚೇಗೌಡ 79​ ವರ್ಷ​, ಶ್ರೀನಿವಾಸ ಪ್ರಸಾದ್ 74 ವರ್ಷ, ರಮೇಶ್​​ ಜಿಗಜಿಣಗಿ 70 ವರ್ಷ, ಜಿ.ಎಮ್​​ ಸಿದ್ದೇಶ್ವರ್ 70 ವರ್ಷ​​ ,ಜಿ.ಎಸ್​ ಬಸವರಾಜ್ 81 ವರ್ಷ, ದೇವೇಂದ್ರಪ್ಪ 71, ಪಿ.ಸಿ. ಗದ್ದಿಗೌಡರ್​​ 71 ವರ್ಷದವರು.

ಇವರಲ್ಲಿ ಅನೇಕರು ಈಗಾಗಲೆ ಪುತ್ರ ಅಥವಾ ಪುತ್ರಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ತಾವು ಬೇಡ ಎಂದಾಕ್ಷಣ ಪುತ್ರನಿಗೇ ಟಿಕೆಟ್‌ ನೀಡಬೇಕೆಂದರೆ ಕ್ಷೇತ್ರದಲ್ಲಿ ಪಕ್ಗಷಕ್ಕಿಂತಲೂ ತಮ್ಮ ಹಿಡಿತ ಬಲವಾಗಿರಬೇಕು. ಇಲ್ಲದಿದ್ದರೆ ಯಾರೋ ಕಾರ್ಯಕರ್ತನಿಗೆ ಟಿಕೆಟ್‌ ನೀಡಿ ತಮ್ಮ ಅಧಿಕಾರವನ್ನು ಮೊಟಕುಗೊಳಿಸುತ್ತಾರೆ ಎಂಬ ಆತಂಕವೂ ಇದೆ.

92 ಆದರೂ ನಾನೇ ಶಾಸಕ ಎಂದ ಶ್ಯಾಮನೂರು

ಬಿಜೆಪಿಯಲ್ಲಿ ಅನೇಕರು ನಿವೃತ್ತಿ ಮಾತನ್ನಾಡುತ್ತಿದ್ದರೆ ಇತ್ತ ದಾವಣಗೆರೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಮಾತ್ರ ತಮಗೇ ಟಿಕೆಟ್‌ ನೀಡುವಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದ ಶ್ಯಾಮನೂರು, ಈ ಬಗ್ಗೆ ಚರ್ಚಿಸಿದ್ದಾರೆ. ನಾನು ಇರುವವರೆಗೂ ಸಕ್ರಿಯ ರಾಜಕಾರಣ ಮಾಡುತ್ತೇನೆ. 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ರಿವರ್ಸ್‌ ಗೇರ್‌ನಲ್ಲಿ ಕೋಳಿವಾಡ

ರಾಣೆಬೆನ್ನೂರಿನಲ್ಲಿ ತಮ್ಮ ಪುತ್ರ ಪ್ರಕಾಶ್‌ ಕೋಳಿವಾಡಗೆ ಟಿಕೆಟ್‌ ನೀಡಲಿ ಎಂದು ಹೇಳಿದ್ದ ಮಾಜಿ ಸಚಿವ ಕೆ. ಬಿ. ಕೋಳಿವಾಡ ಯುಟರ್ನ್‌ ಮಾಡಿದ್ದಾರೆ. ರಾಜಕೀಯ ನಿವೃತ್ತಿ ಸುಳಿವು ನೀಡಿದ ಕೂಡಲೆ, ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದು, ಕೊನೆ ಕ್ಷಣದವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತೇನೆ. ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದೆ, ಆದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿರಲಿಲ್ಲ. ನನ್ನ ಮಗ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು, ಚುನಾವಣೆ ಸಿದ್ಧತೆ ನಡೆಸಿದ್ದಾನೆ. ಒಂದು ವೇಳೆ ಮಗನಿಗೆ ಟಿಕೆಟ್ ಸಿಗದೆ ಇದ್ದಲ್ಲಿ, ನನಗೆ ಹೈಕಮಾಂಡ್ ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ | ಯಡಿಯೂರಪ್ಪ ನಂತರ ಪುತ್ರನಿಗಾಗಿ `ರಾಜಕೀಯ ನಿವೃತ್ತಿʼ ಘೋಷಿಸಿದ ಮತ್ತೊಬ್ಬ ರಾಜಕಾರಣಿ

Exit mobile version