ಹಾಸನ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಎದ್ದಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಬಗೆಹರಿದಿದ್ದು, ಪಕ್ಷದ ಅಭ್ಯರ್ಥಿ ಎಚ್.ಪಿ. ಸ್ವರೂಪ್ (HP Swarup) ಪರ ಎಚ್.ಡಿ. ರೇವಣ್ಣ (HD Revanna) ಕುಟುಂಬ ಬ್ಯಾಟಿಂಗ್ ಮಾಡಿ ಬೆಂಬಲ ಸೂಚಿಸಿದೆ. ಸ್ವರೂಪ್ ಗೆಲುವಿಗೆ ಇಡೀ ಕುಟುಂಬ ಸಹಿತ ಜೆಡಿಎಸ್ ಕಾರ್ಯಕರ್ತರು ದುಡಿಯಬೇಕು ಎಂದು ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ (Bhavani Revanna) ಹಾಗೂ ಪ್ರಜ್ವಲ್ ರೇವಣ್ಣ ಕರೆ ನೀಡಿದ್ದಾರೆ.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ. ರೇವಣ್ಣ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲವಾಗಿದೆ. ಸ್ವರೂಪ್ ಆಗಲಿ, ಭವಾನಿ ಆಗಲಿ ನನಗೆ ದೇವೇಗೌಡರ ಆರೋಗ್ಯ ಮುಖ್ಯ. ಭವಾನಿಯವರು ನಮಗೆ ನಮ್ಮ ಮಾವನವರ ಆರೋಗ್ಯ ಮುಖ್ಯ ಎಂದು ಹೇಳಿ, ಕ್ಷೇತ್ರದ ಟಿಕೆಟ್ ಅನ್ನು ತ್ಯಾಗ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಬೇಕು. ಎಲ್ಲರೂ ಒಟ್ಟಾಗಿ ಸ್ವರೂಪ್ ಅವರಿಗೆ ಮತ ಕೊಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ. ಅಲ್ಪಸಂಖ್ಯಾತರಿಗೆ ರಿಸರ್ವೇಶನ್ ಕೊಟ್ಟಿದ್ದು ದೇವೇಗೌಡರು. ನಾವು ಅಲ್ಪಸಂಖ್ಯಾತರಿಗೆ ಅನ್ಯಾಯ ಆಗೋದಕ್ಕೆ ಬಿಡುವುದಿಲ್ಲ ಎಂದು ರೇವಣ್ಣ ಹೇಳಿದರು.
ಸ್ವರೂಪ್ ಬೇರೆ ಅಲ್ಲ ನನ್ನ ಮಕ್ಕಳು ಬೇರೆ ಅಲ್ಲ: ಭವಾನಿ
ಸ್ವರೂಪ್ ಬೇರೆ ಅಲ್ಲ, ನನ್ನ ಮಕ್ಕಳು ಬೇರೆ ಅಲ್ಲ. ಹಿಂದೆ ಇದ್ದ ಎಲ್ಲ ವಿಚಾರಗಳನ್ನು ಮರೆಯಬೇಕು. ನಾವು ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಇನ್ನು ಇಪ್ಪತ್ತು ದಿನ ಮಾತ್ರ ಚುನಾವಣೆಗೆ ಬಾಕಿ ಇದೆ. ಸ್ವರೂಪ್ ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತಾನೆ. ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ. ಈ ಬಾರಿ ಸ್ವರೂಪ್ ಅವರನ್ನು ಗೆಲ್ಲಿಸಲು ನಾವು ರೆಡಿ ಎಂದು ಸ್ವರೂಪ್ ಕೈ ಹಿಡಿದು ಮೇಲಕ್ಕೆತ್ತುವ ಮೂಲಕ ಭವಾನಿ ರೇವಣ್ಣ ಬೆಂಬಲ ವ್ಯಕ್ತಪಡಿಸಿದರು.
ಜೆಪಿ ಭವನದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅನೌನ್ಸ್ ಮಾಡಿದ್ದಾರೆ. ನಾನು ಕೂಡಾ ಸ್ವರೂಪ್ ಅವರಿಗೆ ಅನೌನ್ಸ್ ಮಾಡಿ ಎಂದು ಹೇಳಿದ್ದೆ. ದೇವೇಗೌಡರು ಜೆಡಿಎಸ್‌ಗಿಂದ ನಾನು ದೊಡ್ಡವಳಾ? ಸ್ವರೂಪ್ ಅವರನ್ನು ಅಭ್ಯರ್ಥಿ ಮಾಡಿ ಎಂದು ನಾನೇ ಕುಮಾರಣ್ಣಂಗೆ ಫೋನ್ ಮಾಡಿ ಹೇಳಿದೆ. ನಮ್ಮ ಗುರಿ ಒಂದೇ ಆಗಿದ್ದು, ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನವನ್ನೂ ಗೆಲ್ಲಿಸಬೇಕು. ಹಾಸನ ವಿಧಾನಸಭಾ ಕ್ಷೇತ್ರದ ಜನರನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂದು ಹೇಳಿದರು.
ನಾನು ಕೂಡ ಸದಾ ಈ ಕ್ಷೇತ್ರದ ಜನರೊಂದಿಗೆ ಇರುತ್ತೇವೆ. ನಮ್ಮ ಇಡಿ ಕುಟುಂಬ ಯಾವತ್ತಿಗೂ ಹಾಸನ ಕ್ಷೇತ್ರವನ್ನು ಕಡೆಗಣಿಸುದಿಲ್ಲ. ಎಲ್ಲರೂ ವಿಷಯವನ್ನು ಮರೆತು, ಕೆಲಸ ಮಾಡಬೇಕು. ನಾವು ಏನು ಪಣ ತೊಟ್ಟಿದ್ದೇವೆಯೋ ಅದಕ್ಕೆ ಬದ್ಧರಾಗಿರಬೇಕು. ಬಿಜೆಪಿ ಪಕ್ಷ ತೆಗೆಯುತ್ತೇವೆ ಎಂದು ಪಣ ತೊಟ್ಟಿದ್ದೇವೆ. ಕ್ಷೇತ್ರದ ಶಾಸಕ ನಮ್ಮ ಫ್ಯಾಮಿಲಿಗೆ ಆಹ್ವಾನ ಮಾಡಿದ್ದರು. ಹಾಗಾಗಿ ನಾವು ಅವರು ಸವಾಲನ್ನು ಸ್ವೀಕಾರ ಮಾಡಿದ್ದೆವು. ಸ್ವರೂಪ್ ಅವರನ್ನು ಗೆಲ್ಲಿಸುವುದಕ್ಕೆ ಎಲ್ಲರೂ ಸಹಕಾರ ನೀಡಿ. ನಾವು ಕೂಡಾ ಹಗಲು ರಾತ್ರಿ ಕೆಲಸ ಮಾಡೋಣ. ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಗೆಲ್ಲಿಸಿಕೊಂಡು ಬರೋಣ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಶಕ್ತಿ ಪ್ರದರ್ಶನ, ರೋಡ್ ಶೋ ಬಳಿಕ ನಾಮಪತ್ರ ಸಲ್ಲಿಕೆ
ಕಾಲಿಗೆ ಬಿದ್ದ ಸ್ವರೂಪ್
ಭವಾನಿ ರೇವಣ್ಣ ಭಾಷಣ ವೇಳೆ ಸ್ವರೂಪ್ ಅವರನ್ನ ಪಕ್ಕದಲ್ಲೇ ನಿಲ್ಲಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶನವನ್ನು ಮಾಡಿದರು. ಈ ವೇಳೆ ಭವಾನಿ ರೇವಣ್ಣ ಕಾಲಿಗೆ ಬಿದ್ದು ಸ್ವರೂಪ್ ಆಶೀರ್ವಾದ ಪಡೆದುಕೊಂಡರು.
ಇಷ್ಟು ದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ: ಪ್ರಜ್ವಲ್ ರೇವಣ್ಣ
ರೇವಣ್ಣ ಫ್ಯಾಮಿಲಿ ಪ್ರಚಾರಕ್ಕೆ ಬರ್ತಾರೋ ಇಲ್ಲವೋ ಎಂಬ ಅನುಮಾನ ಎಲ್ಲರಲ್ಲಿ ಇತ್ತು. ಟಿಕೆಟ್‌ಗಾಗಿ ಪ್ರಯತ್ನ ಮಾಡಿದ್ದು ನಿಜ. ಟಿಕೆಟ್ ಘೋಷಣೆಯಾಗಿದೆ, ಇನ್ನು ಭಿನ್ನಾಭಿಪ್ರಾಯವಿಲ್ಲ. ರೇವಣ್ಣ ಫ್ಯಾಮಿಲಿ ಜೆಡಿಎಸ್ ಪಕ್ಷಕ್ಕೆ ನಿಷ್ಠೆಯಾಗಿರುತ್ತೇವೆ. ನಾವು ಬಹಳ ಸಮಯವನ್ನು ಹಾಳುಮಾಡಿಕೊಂಡಿದ್ದೇವೆ. ಈ ಕೆಲಸನ್ನು ಮೊದಲೇ ಮಾಡಬೇಕಿತ್ತು. ಹೊಳೆನರಸೀಪುರ ಹಾಗೂ ಹೇಮಾವತಿ ನಗರಕ್ಕೆ ಎಂದು ಚಾಲೆಂಜ್ ಹಾಕ್ತಾರೆ. ಹೊಳೆನರಸೀಪುರ ಹಾಗೂ ಹೇಮಾವತಿ ನಗರ ಒಂದಾರೆ ನಿಮ್ಮ ಗತಿ ಏನಾಗುತ್ತೆ ನೋಡಿ. ಇಷ್ಟು ದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ ಎಂದು ಹಾಸನ ಶಾಸಕ ಪ್ರೀತಂಗೌಡ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು.
ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ನಮ್ಮ ಪಕ್ಷದಲ್ಲಿ ಸ್ವಾಭಿಮಾನಕ್ಕೆ ಕೊರತೆಯಿಲ್ಲ. ಮೇ 13ಕ್ಕೆ ಫಲಿತಾಂಶ ಬರುತ್ತದೆ. ಆ ಫಲಿತಾಂಶದಲ್ಲಿ ಹಾಸನ ಕ್ಷೇತ್ರದ್ದೇ ಮೊದಲ ಫಲಿತಾಂಶ ಪ್ರಕಟವಾಗಲಿದೆ. ಅದರಲ್ಲಿ ಸ್ವರೂಪ್ ಅವರೇ ಗೆಲ್ಲುತ್ತಾರೆ. ಭವಾನಿ ಅಕ್ಕ ಹಾಗೂ ಸ್ವರೂಪ್ ಅವರ ಇಬ್ಬರ ಬೆಂಬಲಿಗರಿಗೂ ಹೇಳೋದಕ್ಕೆ ಬಯಸುವುದೇನೆಂದರೆ, ನಾವು ಮೇಲು, ನಾವು ಮೇಲು ಅಂತೆಲ್ಲ ಬರೋದು ಬೇಡ. ಇಬ್ಬರೂ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: Karnataka Elections 2023 : ರೇವಣ್ಣ, ಭವಾನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸ್ವರೂಪ್; ಮರೆತುಹೋಯಿತು ಮುನಿಸು
ಕಾರ್ಯಕ್ರಮಕ್ಕೆ ಎಲ್ಲಿಂದಲೋ ಜನರನ್ನು ಕರ್ಕೊಂಡು ಬಂದು ಜನರನ್ನು ತೋರಿಸುವುದಲ್ಲ. ನಾಳೆ ನಾವು ಜನರನ್ನು ತೋರಿಸ್ತೇವೆ. ಪಕ್ಕದ ಜಿಲ್ಲೆಯಿಂದ ಅಲ್ಲ, ಪಕ್ಕದ ತಾಲೂಕಿನಿಂದ ಅಲ್ಲ. ಇದೇ ಕ್ಷೇತ್ರದ ಜನರು ಬರ್ತಾರೆ ನೋಡಿ. ನಾವು ದಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರೋದಿಲ್ಲ. ಜನರೇ ಪ್ರೀತಿಯಿಂದ ಬರುತ್ತಾರೆ ಎಂದು ಪ್ರಜ್ವಲ್ ಗುಡುಗಿದರು.