Site icon Vistara News

Revenge politics : ಕಾಂಗ್ರೆಸ್‌ಗೆ ಮತ ಹಾಕದ ಬೂತ್‌ ಅಭಿವೃದ್ಧಿ ಮಾಡಲ್ಲ; ಕೈ ಶಾಸಕನ ದ್ವೇಷ ರಾಜಕಾರಣ

HC Balakrishna Congress MLA

ರಾಮನಗರ: ರಾಜ್ಯದಲ್ಲಿ ಬಿಜೆಪಿ ಶಾಸಕರ ಅನುದಾನ ಕಿತ್ತುಕೊಂಡು ಬಿಜೆಪಿ ಶಾಸಕರಿಗೆ ನೀಡಲಾಗುತ್ತಿರುವ ವಿಷಯ ವಿವಾದ ಸೃಷ್ಟಿಸಿದೆ. ಇದರ ನಡುವೆಯೇ ಕಾಂಗ್ರೆಸ್‌ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚು ಮತ ಬಿದ್ದ ಬೂತ್‌ಗಳಲ್ಲಿ ಮಾತ್ರ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಮಾಗಡಿಯ ಕಾಂಗ್ರೆಸ್‌ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಇಂಥ ಸೇಡಿನ ರಾಜಕಾರಣದ (Revenge politics) ಬಗ್ಗೆ ಮಾತನಾಡಿದವರು. ಸರ್ಕಾರ ಕಾಂಗ್ರೆಸ್‌ -ಬಿಜೆಪಿ ಶಾಸಕರ ನಡುವೆ ತಾರತಮ್ಯ ಮಾಡಿದರೆ ಶಾಸಕ ಬಾಲಕೃಷ್ಣ ಅವರು ಮತದಾರರ ನಡುವೆಯೇ ತಾರತಮ್ಯ ಮಾಡಲಾಗುತ್ತದೆ ಎಂದು ನೇರವಾಗಿ ಹೇಳಿದ್ದಾರೆ.

ʻʻಕಾಂಗ್ರೆಸ್‌ಗೆ ಓಟ್ ಹಾಕೋ ಊರುಗಳಿಗೆ ಮಾತ್ರ ಕೆಲಸ ಮಾಡ್ತೀವಿ.! ಓಟ್ ಹಾಕದೇ ಇರೋರ ಬಗ್ಗೆ ಆಲೋಚನೆ ಮಾಡ್ತೀವಿʼʼ ಎಂದು ಹೇಳುವ ಮೂಲಕ ದ್ವೇಷದ ರಾಜಕಾರಣದ ಮಾತು ಆಡಿದ್ದಾರೆ ಮಾಗಡಿ ಶಾಸಕರು.

ʻʻರಾಜ್ಯದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತದೆ. ಬೂತ್‌ ಲೆಕ್ಕಾಚಾರದ ಮೇಲೆ ಎಲೆಕ್ಷನ್ ನಡೆಯಲಿದೆ. ಯಾವ್ ಬೂತ್‌ನಲ್ಲಿ ನಮಗೆ ಹೆಚ್ಚು ಮತ ಬರುತ್ತೋ ಅಲ್ಲಿ ಕೆಲಸ ಮಾಡ್ತೀವಿ. ಓಟ್ ಹಾಕದೆ ಇದ್ದರೆ ಅಂತಹ ಬೂತ್‌ಗಳ ಬಗ್ಗೆ ಆಲೋಚನೆ ಮಾಡ್ತೀವಿ. ಹಾಗಾಗಿ ಇದನ್ನು ಜನ ಯೋಚನೆ ಮಾಡಬೇಕುʼʼ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ಪರೋಕ್ಷವಾಗಿ ಕಾಂಗ್ರೆಸ್‌ಗೆ ಮತ ಹಾಕದಿರುವ ಬೂತ್‌ಗಳನ್ನು ಅಭಿವೃದ್ಧಿ ಮಾಡಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕೃಷ್ಣ ಹೇಳಿಕೆ ಖಂಡಿಸಿದ ಬಸವರಾಜ ಬೊಮ್ಮಾಯಿ

ಅನುದಾನ ಹಂಚಿಕೆ ವಿಷಯದಲ್ಲಿ ನಾವು ಯಾರಿಗೂ ತಾರತಮ್ಯ ಮಾಡಿರಲಿಲ್ಲ. ವಿರೋಧ ಪಕ್ಷದ ಶಾಸಕರಿಗೂ ಅನುದಾನ ನೀಡಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಗಡಿ ಶಾಸಕ ಎಚ್.‌ಸಿ ಬಾಲಕೃಷ್ಣ ಅವರು ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ನೀಡುವುದಾಗಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಲಕೃಷ್ಣ ಅವರು ಸರ್ಕಾರ ಅಲ್ಲ. ಅವರು ಮೊದಲು ತಮ್ಮ ಅನುದಾನ ಪಡೆಯಲಿ. ಮಾಗಡಿಯಲ್ಲಿ ಹಿಂದೆ ನಮ್ಮ ಶಾಸಕರು ಇರಲಿಲ್ಲ ಆದರೂ ‌ಅವು ಅನುದಾನ ನೀಡಿದ್ದೆವು. ಬಾಲಕೃಷ್ಣ ಅವರು ಮೊದಲು ತಮಗೆ ಅನುದಾನ ಪಡೆಯಲಿ. ನಾವು ನಮ್ಮ ಅನುದಾನ ಪಡೆದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: Karnataka Politics : ಡಿಕೆಶಿ ಕಾಲಿಗೆ ಬಿದ್ದಿದ್ದೇನೆ; ಅನುದಾನ ಕೊಡದಿದ್ದರೆ ಉಗ್ರ ಪ್ರತಿಭಟನೆ ಎಂದ ಮುನಿರತ್ನ

ಇದು ದುರಾಡಳಿತದ ಪರಮಾವಧಿ ಎಂದ ಆರ್‌. ಅಶೋಕ್‌

ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಗೆ ಮಾಜಿ ಸಚಿವ ಆರ್‌. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಇದು ದುರಾಡಳಿತದ ಪರಮಾವಧಿ ಎಂದಿದ್ದಾರೆ.

ಒಂದು ವೇಳೆ ನರೇಂದ್ರ ಮೋದಿ ಅವರು ಹೀಗೆ ಹೇಳಿದರೆ ಹೇಗಾದೀತು. ಮುಂದೆ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತದೆ. ಆಗಲೂ ಹೀಗೆ ಹೇಳ್ತಾರಾ.? ಎಂದು ಕೇಳಿದ ಆರ್‌. ಅಶೋಕ್‌, ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ಜನ ಇವರಿಗೆ ಬುದ್ಧಿ ಕಲಿಸ್ತಾರೆ ಎಂದರು. ಜತೆಗೆ ಕಾಂಗ್ರೆಸ್‌ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Exit mobile version