ಬೆಂಗಳೂರು: ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಸಾರ್ವಜನಿಕರಿಂದ ಹೆಚ್ಚು ದೂರುಗಳಿರುವ ಕಂದಾಯ ಅಧಿಕಾರಿಗಳ ಪಟ್ಟಿಯನ್ನು (Revenue Officers) ಶೀಘ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಸೂಚಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿಸಿ ಹಂಚಿಕೊಂಡಿರುವ ಸಚಿವರು, ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಕೆಲವು ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಅಂತಹ ಕಂದಾಯ ಅಧಿಕಾರಿಗಳ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Cauvery Dispute: ತಮಿಳುನಾಡಿಗೆ ನಿತ್ಯ 8000 ಕ್ಯುಸೆಕ್ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ
ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ
ಒಂದೇ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ದೂರುಗಳು ದಾಖಲಾಗಿರುವ ಕಂದಾಯ ಅಧಿಕಾರಿಗಳ ವಿವರ ನೀಡುವಂತೆ ಸಿಎಂ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸುತ್ತೋಲೆ ಹೊರಡಿಸಿದ್ದಾರೆ.
ಜುಲೈ 8ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಸಭೆ ನಡೆದಿತ್ತು. ಈ ವೇಳೆ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹಾಗೂ ಜಿಲ್ಲಾ ಮಟ್ಟದಲ್ಲಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಸಮನ್ವಯತೆ ಸಾಧಿಸಲು ಅಧೀನ ಅಧಿಕಾರಿ, ಸಿಬ್ಬಂದಿಗೆ ನಿರ್ದೇಶನ ನೀಡುವಂತೆ ಸಿಎಂ ಸೂಚಿಸಿದ್ದರು. ಅಲ್ಲದೆ ಕಚೇರಿಯಲ್ಲಿ ಉತ್ತಮ ಕಾರ್ಯಕ್ಷಮತೆ, ಶಿಸ್ತು ಪಾಲಿಸುವಂತೆ ಕ್ರಮ ವಹಿಸಲು ಮತ್ತು ಒಂದು ವೇಳೆ ಈ ದಿಸೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ, ಸಿಬ್ಬಂದಿ ಮೇಲೆ ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹ ಸೂಚಿಸಿದ್ದರು. ಯಾವುದೇ ಅಧಿಕಾರಿ, ನೌಕರರ ಬಗ್ಗೆ ಅಸಮರ್ಥತೆ ಅಥವಾ ದೂರುಗಳು ಇತ್ಯಾದಿಗಳ ಕಾರಣದಿಂದ ಅವರನ್ನು ವರ್ಗಾವಣೆ ಮಾಡಲು ಅಥವಾ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲು ಅಗತ್ಯವಿರುವ ಪ್ರಸ್ತಾವನೆಯನ್ನು ಕಳುಹಿಸುವಂತೆ ಸರ್ಕಾರ ಸೂಚಿಸಿದೆ.
ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಂದಾಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳಿರುವವರ ಪಟ್ಟಿಯನ್ನು ಶೀಘ್ರದಲ್ಲಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ.
— Krishna Byre Gowda (@krishnabgowda) July 14, 2024
ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಕೆಲವು ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿದೆ. https://t.co/1nhzOMwcxe
ಇದನ್ನೂ ಓದಿ | Assembly Session: ನಾಳೆಯಿಂದ ಮುಂಗಾರು ಅಧಿವೇಶನ: ಚರ್ಚೆಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಹಲವು ಅಧಿಕಾರಿಗಳು ಮತ್ತು ನೌಕರರು ಒಂದೇ ಕಚೇರಿ ಅಥವಾ ಒಂದೇ ಸ್ಥಳದಲ್ಲಿ ಅವಧಿ ಮೀರಿ ಕೆಲಸ ಮಾಡುತ್ತಿರುವುದು. ಅಲ್ಲದೆ ಇಂತಹ ಹಲವು ಅಧಿಕಾರಿಗಳು, ನೌಕರರುಗಳ ವಿರುದ್ಧ ದೂರುಗಳು ಸಹ ಸ್ವೀಕೃತವಾಗಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ಆದ್ದರಿಂದ ಒಂದೇ ಹುದ್ದೆ. ಸ್ಥಾನದಲ್ಲಿ ಅಥವಾ ಒಂದೇ ಸ್ಥಳದಲ್ಲಿ 5 ವರ್ಷ ಮೀರಿ ಮುಂದುವರಿದಿದ್ದಲ್ಲಿ ಮತ್ತು ಅಂತಹವರ ವಿರುದ್ಧ ದೂರುಗಳೇನಾದರೂ ಇದ್ದಲ್ಲಿ, ಅವರ ಅಧಿಕಾರಾವಧಿಯ ವಿವರಗಳೊಂದಿಗೆ ವಿವರವಾದ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ರಾಜೇಂದರ್ ಕುಮಾರ್ ಕಟಾರಿಯಾ ಸೂಚಿಸಿದ್ದಾರೆ.