ಬೆಂಗಳೂರು: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ(NDRF) ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಬಿಡುಗಡೆ ಮಾಡುತ್ತದೆ. ಪ್ರತಿ 5 ವರ್ಷಗಳಿಗೆ ಒಮ್ಮೆ ಎನ್‍ಡಿಆರ್‍ಎಫ್ ನಿಯಮಗಳನ್ನು ತಿದ್ದುಪಡಿ ಮಾಡಿ ರೈತರ ಬೆಳೆಗಳಿಗೆ ಇನ್‍ಫುಟ್ ಸಬ್ಸಿಡಿಯ ಮೊತ್ತ, ಮೀನುಗಾರರ ದೋಣಿಗಳಿಗೆ ಆದ ಹಾನಿ, ಜನ ಜಾನುವಾರಿಗಳಿಗೆ ಉಂಟಾದ ತೊಂದರೆ, ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಆದ ನಷ್ಟಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗುತ್ತದೆ. ಆದರೆ 2015-20ಕ್ಕೆ ಅನ್ವಯವಾಗುವಂತೆ ರೂಪಿಸಿದ ನಿಯಮಗಳನ್ನು 2015 ರಲ್ಲಿ ಪರಿಷ್ಕರಿಸಲಾಗಿತ್ತು. ಸಹಜವಾಗಿ ಇದು 2020 ರಲ್ಲಿ ಮತ್ತೆ ಪರಿಷ್ಕರಿಸಬೇಕಾಗಿತ್ತು. ಇದುವರೆಗೂ ಪರಿಷ್ಕರಣೆ ಮಾಡಿಲ್ಲವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇದನ್ನೂ ಓದಿ | Modi in Karnataka | ಸಂಕಷ್ಟದಲ್ಲಿದ್ದಾಗ ಬಾರದ ಪ್ರಧಾನಿ ಯೋಗ ಮಾಡಲು ಬಂದಿದ್ದಾರೆ: ಸಿದ್ದರಾಮಯ್ಯ ಗೇಲಿ
ಕಳೆದ ಎರಡು ವರ್ಷಗಳಿಂದ ಎಲ್ಲ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಿವೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಎನ್‍ಡಿಆರ್‌ಎಫ್ ನಿಯಮಗಳನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಒಂದು ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ 33% ಗಿಂತ ಹೆಚ್ಚು ಹಾನಿಯಾದರೆ ಸಿಗುವ ಪರಿಹಾರ ಕೇವಲ ₹2,720 ಮಾತ್ರ. ಅದರಲ್ಲೂ ಗರಿಷ್ಠ 2.5 ಹೆಕ್ಟೇರ್‌ಗೆ ₹6,800 ಮಾತ್ರ. ಪ್ರತಿ ಗುಂಟೆಗೆ ಕೇವಲ ₹68 ಸಿಗುತ್ತದೆ. ಆದರೆ ಒಂದು ಎಕರೆ ರಾಗಿ, ಜೋಳ ಬೆಳೆಯಲು ಕನಿಷ್ಠ ₹25,000 ಖರ್ಚು ತಗಲುತ್ತದೆ. ಈ ಮೊತ್ತ ಪರಿಷ್ಕರಣೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಈ ಮೊತ್ತವನ್ನು ಪರಿಷ್ಕರಣೆ ಮಾಡದ ಕಾರಣದಿಂದ ಕಳೆದ 2 ವರ್ಷಗಳಿಂದ ರೈತರಿಗೆ ವಿಪರೀತ ಹಾನಿಯಾಗಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ಒಂದು ಅಂದಾಜಿನ ಪ್ರಕಾರ ₹2 ಲಕ್ಷ ಕೋಟಿ ಇರಬಹುದು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಕೇವಲ ₹3,965 ಕೋಟಿ. ರಾಜ್ಯದಲ್ಲಿ ಮೇ ತಿಂಗಳಿಂದ ನವೆಂಬರ್‌ವರೆಗೆ ಸಂಭವಿಸಿದ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಚ್ 2022 ರಲ್ಲಿ ಕೇವಲ ₹492 ಕೋಟಿ ಬಿಡುಗಡೆ ಮಾಡಿದೆ ಎಂದು ಅಂಕಿ ಅಂಶ ನೀಡಿದ್ದಾರೆ.
ಭ್ರಷ್ಟಚಾರದ ಕೂಪದಲ್ಲಿ ಸರ್ಕಾರ
ಹವಾಮಾನ ವೈಪರೀತ್ಯವು ರೈತರನ್ನು ಹೆಚ್ಚು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡುವುದಾಗಿ ವಿಜ್ಞಾನಿಗಳು ರಾಜ್ಯ ಸರ್ಕಾರಕ್ಕೆ ಹಿಂದಿನ ವರ್ಷವೇ ವರದಿ ನೀಡಿದ್ದಾರೆ. ಆ ವರದಿಯನ್ನು ಆಧರಿಸಿ ಸರ್ಕಾರ ಸಮಗ್ರವಾದ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗಿತ್ತು. ಆದರೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಸರ್ಕಾರಕ್ಕೆ ಇದನ್ನೆಲ್ಲ ಮಾಡಲು ಪುರುಸೊತ್ತು ಇಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರವಾಹ, ಬರ ಬಂದು ಜನರು ಸಂಕಷ್ಟದಲ್ಲಿದ್ದಾಗಲೂ ಸರ್ಕಾರ ನಿದ್ರೆಯಲ್ಲಿದ್ದಂತೆ ನಟಿಸಿಕೊಂಡು ಕಾಲ ಕಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಲ್ಲಿ ಬಹುಪಾಲು ಮಂದಿ ಜಿಲ್ಲೆಗಳಿಗೆ ಭೇಟಿ ಮಾಡದೆ ನಿರ್ಲಕ್ಷ್ಯ ಮಾಡಿದರು ಎಂದು ಕಿಡಿಕಾರಿದರು. ಇತ್ತೀಚೆಗೆ ಅಸಾನಿ ಚಂಡಮಾರುತದಿಂದ ತೊಂದರೆಗೆ ಒಳಗಾದವರಿಗೆ ತುರ್ತಾಗಿ ಪರಿಹಾರ ನೀಡಬೇಕು. ಕಳೆದ ಮೂರು ವರ್ಷಗಳಿಂದ ಹಾನಿಯಾಗಿರುವ ಸಾವಿರಾರು ಮನೆಗಳಿಗೆ ಈಗಲೂ ಸಮರ್ಪಕ ಪರಿಹಾರ ನೀಡಿಲ್ಲ. ಶಾಶ್ವತ ನೆಲೆ ಕಲ್ಪಿಸಿಲ್ಲ, ಈ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕೆಂದು ಆಗ್ರಹಿಸಿದ್ದಾರೆ.