ಚಿಕ್ಕಮಗಳೂರು: ಕೇಂದ್ರದಿಂದ ಅಕ್ಕಿ ಕೊಡ್ತಿಲ್ಲ (Rice Politics) ಅಂತೆಲ್ಲ ದೂರುವುದನ್ನು ನಿಲ್ಲಿಸಿ, ಸರ್ಕಾರದ ಬಳಿ ಹೇಗೂ ಹಣವಿದೆಯಲ್ವಾ? ಅದನ್ನು ಬಿಪಿಎಲ್ ಕಾರ್ಡ್‌ದಾರರ (BPL Card Holders) ಅಕೌಂಟ್‌ಗೆ ಹಾಕಿಬಿಡಿ, ಅವರೇ ಖರೀದಿ ಮಾಡುತ್ತಾರೆ- ಹೀಗೊಂದು ಸಲಹೆ ನೀಡಿದ್ದಾರೆ ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi)
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಅಕ್ಕಿ ಸಿಗದಿದ್ದರೆ ಆಕಾಶವೇನೂ ಕಳಚಿಬೀಳುವುದಿಲ್ಲ. ನೀವು ಎಲ್ಲಾ ಬಿ.ಪಿ.ಎಲ್. ಕಾರ್ಡ್‌ದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಹಣ ಕೊಟ್ಟರೆ ಅಕ್ಕಿ ಸಿಗುತ್ತೆ, ಮೊದಲು ಹಣ ಹಾಕಿ ಎಂದಿದ್ದಾರೆ.
ಎಲ್ಲಿದೆ ಕಮಿಟ್ಮೆಂಟ್ ಲೆಟರ್?
ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎನ್ನುವುದು ಸುಳ್ಳು. ಭಾರತೀಯ ಆಹಾರ ನಿಗಮ (Food Corporation of India) ದವರು ಯಾವತ್ತಾದರೂ ನಿಮಗೆ ಅಗತ್ಯವಿರುವ ಅಕ್ಕಿ ಕಳುಹಿಸುತ್ತೇವೆ ಎಂದು ಹೇಳಿದ್ದಾರಾ? ಹಾಗೆ ಹೇಳಿದ್ದರೆ ಅದರ ಲೆಟರ್ ತೋರಿಸಿ. ನೀವು ʻಸುಳ್ಳುರಾಮಯ್ಯ” ಅಲ್ಲಾ ಅನ್ನೋದಾದರೆ ಕಮಿಟ್ಮೆಂಟ್ ಲೆಟರ್ ತೋರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಈಗ ಅವರಿಗೆ ಅಕ್ಕಿ ಕೊಡಲು ಕಷ್ಟವಾಗುತ್ತಿದೆ. ತಮ್ಮ ಕೈನಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. ನಾಲ್ಕೈದು ತಿಂಗಳ ಬಳಿಕ ಕೇಂದ್ರದ ಮೇಲೆ ಗೂಬೆ ಕೂರಿಸಬಹುದು ಎಂದು ಭಾವಿಸಿದ್ದೆ. ಆದರೆ ಆರೋಪ ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ ಎಂದು ಹೇಳಿದ ಸಿ.ಟಿ. ರವಿ, ಅಕ್ಕಿ ಕೊಟ್ಟರೆ ನಾನು ಕೊಟ್ಟೆ ಅನ್ನೋದು, ಕೊಡದಿದ್ದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಇದು ಸಿದ್ದರಾಮಯ್ಯ ಅವರ ಚಾಳಿ ಎಂದರು.
ಕೊಟ್ಟಿದ್ದು ಮಾತ್ರ ಭಯಂಕರ ಸೌಂಡ್!
ಸಿದ್ದರಾಮಯ್ಯ ಸರ್ಕಾರದಲ್ಲಿ ಕೊಟ್ಟಿದ್ದಕ್ಕೆಲ್ಲ ಭಯಂಕರ ಸೌಂಡ್. ಆದರೆ, ಕಿತ್ತು ಕೊಂಡಿದ್ದೆಲ್ಲ ಬರೀ ಸೌಂಡ್ ಲೆಸ್. ಗೊತ್ತೇ ಆಗದಂತೆ ಕಿತ್ತುಕೊಳ್ಳಲಾಗುತ್ತಿದೆ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದರು.
ವಿದ್ಯುತ್ ದರವನ್ನು ಏಕಾಏಕಿಯಾಗಿ ಹೆಚ್ಚಿಸಿದ್ದಾರೆ. ಅದು ಕೆ.ಇ.ಆರ್.ಸಿ. ತೀರ್ಮಾನ, ನಮ್ಮ ಸರ್ಕಾರ ಬರುದು ಮೊದಲೇ ಆಗಿತ್ತು ಎಂದು ಹೇಳುತ್ತಿದ್ದಾರೆ. ಆದರೆ, ಹಿಂದೆ-ಮುಂದೆ ನೋಡದೆ ಅಪ್ರುವಲ್ ಕೊಟ್ಟವರು ಇವರೇ ತಾನೇ ಎಂದು ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ. ʻʻಕೆ.ಇ.ಆರ್.ಸಿ. ಇಂತಹ ಪ್ರಸ್ತಾವನೆಯನ್ನು ಬಿಜೆಪಿ ಸರ್ಕಾರದ ಮುಂದಿಟ್ಟಿತ್ತು. ಬಿಜೆಪಿ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ. ಅದಕ್ಕೆ ಅನುಮತಿ ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರʼʼ ಎಂದು ಹೇಳಿದರು.
ಎಲ್ಲದಕ್ಕೂ ಕೇಂದ್ರವೇ ಕಾರಣನಾ?
ಯಾವ ಸೌಂಡೂ ಮಾಡದೆ ಎಲ್ಲಾ ಲಿಕ್ಕರ್ ಮೇಲೆ 20 ರೂಪಾಯಿ ಜಾಸ್ತಿ ಮಾಡಿದ್ದಾರೆ. ರಿಜಿಸ್ಟ್ರೇಷನ್ ಫೀಸ್, ಮೋಟಾರ್ ವೆಹಿಕಲ್ ಮೇಲಿನ ದರ ಹೆಚ್ಚಿಸಲು ಮುಂದಾಗಿದ್ದಾರಂತೆ. ಹಾಗಿದ್ದರೆ ಅದಕ್ಕೂ ಕೇಂದ್ರ ಸರ್ಕಾರವೇ ಕಾರಣನಾ ಎಂದು ಕೇಳಿದ್ದಾರೆ ಸಿ.ಟಿ. ರವಿ.
ಹಣ ಕಳುಹಿಸುವುದು ಹೇಗೆ ಅಂತ ಮೀಟಿಂಗ್!
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅಧಿಕಾರಿಗಳ ಸಭೆ ಕರೆದಿರುವುದರ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಇದು ಯಾವುದರಲ್ಲಿ ಎಷ್ಟು ಹಣವನ್ನ ಕೇಂದ್ರಕ್ಕೆ ಕಳುಹಿಸಬಹುದು ಎಂಬುದಕ್ಕೆ ನಡೆದ ಮೀಟಿಂಗ್ ಎಂದು ಗೇಲಿ ಮಾಡಿದರು.
ʻʻಕಾಂಗ್ರೆಸ್ ಇತಿಹಾಸ ಇರುವ ಪಕ್ಷ, ಅದು ಪಕ್ಷದ ಸಭೆಯಾದರೆ ಅಧಿಕಾರಿಗಳಿಗೆ ಏನು ಕೆಲಸ…? ಬಿಬಿಎಂಪಿ ಅಧಿಕಾರಿಗಳ ಸಭೆಯಾದರೆ ಸುರ್ಜೆವಾಲರಿಗೆ ಏನು ಕೆಲಸ…?ʼʼ ಎಂದು ಅವರು ಪ್ರಶ್ನೆ ಮಾಡಿದರು.
ʻʻನಮ್ಮ ಸರ್ಕಾರದ ಅವಧಿಯಲ್ಲಿ ಎಸಿ, ಡಿಸಿ, ತಹಶೀಲ್ದಾರ್ ಪೋಸ್ಟ್ ಗೆ ಇಷ್ಟು ಅಂತ ಜಾಹೀರಾತು ಕೂಡ ಕೊಟ್ಟಿದ್ರು. ಪೋಸ್ಟ್ ಗಳನ್ನ ಹರಾಜು ಮಾಡುತ್ತಿದ್ದಾರೆ, ಕೆಲವು ಓಪನ್ ಕೆಲವು ಸೀಲ್ಡ್ ಬಿಡ್ ಎಂದು ಹೇಳಿದ ಅವರು ನಮ್ಮ ಮೇಲೆ ಆರೋಪ ಮಾಡಿದ ಅವರೇ ಈಗ ಅದೇ ಕೆಲಸ ಮಾಡುತ್ತಿದ್ದಾರೆʼʼ ಎಂದರು.
ʻʻನಾನು ಈಗಲೂ ಮೂರು ರಾಜ್ಯದ ಪ್ರಭಾರಿ. ಎರಡು ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಆದರೆ, ನಾನು ಎಲ್ಲೂ ಕೂಡ ಮುಖ್ಯಮಂತ್ರಿಗಳ ಜೊತೆ ಅಧಿಕಾರಿಗಳ ಸಭೆ ಮಾಡಿಲ್ಲ. ಸಿಎಂ, ಮಂತ್ರಿ ಹಾಗೂ ಪಕ್ಷದ ಶಾಸಕರ ಜೊತೆ ಸಭೆ ಮಾಡಿದ್ದೇನೆʼʼ ಎಂದು ಸಿ.ಟಿ. ರವಿ ಹೇಳಿದರು.