Site icon Vistara News

Road Accident : ಪ್ರತ್ಯೇಕ ಕಡೆ ಅಪಘಾತ; ಇಬ್ಬರು ಸಾವು, ಮೂವರಿಗೆ ಗಂಭೀರ

mini Auto hit bike, rider dead two injury

ಮೈಸೂರು/ ತುಮಕೂರು/ ರಾಮನಗರ: ರಸ್ತೆ ಅಪಘಾತ ಪ್ರಕರಣದಲ್ಲಿ (Road Accident) ಫ್ರತ್ಯೇಕ ಕಡೆಗಳಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರಲ್ಲಿ ಬೈಕ್‌ಗೆ ಮಿನಿ ಟೆಂಪೋ ಡಿಕ್ಕಿ ಹೊಡೆದಿದ್ದು, ಸವಾರನೊಬ್ಬ ಮೃತಪಟ್ಟಿದ್ದರೆ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ತುಮಕೂರಲ್ಲಿ ಟಾಟಾ ಏಸ್‌ ಪಲ್ಟಿಯಾಗಿ ಒಬ್ಬ ಜೀವ ಬಿಟ್ಟರೆ, ರಾಮನಗರದಲ್ಲಿ ಟೈರ್‌ ಸ್ಫೋಟಗೊಂಡು ಕಂಟೈನರ್‌ ಉರುಳಿ ಬಿದ್ದಿದೆ.

ಮೈಸೂರಿನ ಲಿಂಗದೇವರು ಕೊಪ್ಪಲು ಬಳಿ ವೇಗವಾಗಿ ಬಂದ ಮಿನಿ ಟೆಂಪೋವೊಂದು ತಿರುವು ಪಡೆದು ಬರುತ್ತಿದ್ದ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಮೂವರು ಗಾಳಿ ತೂರಿ ಹೋಗಿ ಬಿದ್ದಿದ್ದಾರೆ. ಘಟನೆಯಲ್ಲಿ ಸ್ಥಳದಲ್ಲೇ ಓರ್ವ ಜೀವ ಕಳೆದುಕೊಂಡಿದ್ದರೆ, ಇಬ್ಬರಿಗೆ ಗಂಭೀರ ಗಾಯವಾಗಿವೆ. ಅಪಘಾತದ ವಿಡಿಯೋ ಶಾಲೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸ್ವಾಮಿ (30) ಮೃತ ದುರ್ದೈವಿ. ಮಂಜು, ಕುಮಾರ ಎಂಬುವರಿಗೆ ಗಾಯಗಳಾಗಿವೆ. ಇವರೆಲ್ಲರೂ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಚಾಲಕ ಪರಾರಿ ಆಗಲು ಯತ್ನಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಕೆಲ ಬೈಕ್‌ ಸವಾರರು ಟೆಂಪೋ ಚಾಲಕನನ್ನು ಹಿಂಬಾಲಿಸಿದ್ದಾರೆ. ಆದರೆ ನಂತರ ಆತ ಪರಾರಿ ಆಗಿದ್ದಾನೆ ಎಂದು ವರದಿ ಆಗಿದೆ.

ಅಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಬಸ್‌ಗಳ ಮಧ್ಯೆ ಸಿಲುಕಿ ಮಹಿಳೆಯರಿಬ್ಬರ ದಾರುಣ ಸಾವು!

ಟಾಟಾ ಏಸ್‌ ಪಲ್ಟಿ, ಸವಾರ ಸಾವು

ತುಮಕೂರು ತಾಲೂಕಿನ ನಾಗವಲ್ಲಿ‌ ಸಮೀಪದ ಹನುಮಂತನಗರದಲ್ಲಿ ಟಾಟಾ ಏಸ್ ಪಲ್ಟಿ ಆಗಿದೆ. ಎದುರಿಗೆ ಬರುತ್ತಿದ್ದ ಬೈಕ್ ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ. ಸ್ಥಳದಲ್ಲಿ ಬಾಣಾವರ ಮೂಲದ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ. ಆತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಂಟೇನರ್‌ ಪಲ್ಟಿ, ಚಾಲಕನ ನರಳಾಟ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಟೈರ್ ಸ್ಫೋಟಗೊಂಡು ಬೃಹತ್ ಕಂಟೇನರ್ ಪಲ್ಟಿ ಆಗಿದೆ. ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಬಳಿ ಘಟನೆ ನಡೆದಿದೆ. ಹೈವೆಯಿಂದ ಸರ್ವೀಸ್ ರಸ್ತೆಗೆ ವಾಹನವು ಉರುಳಿದ್ದು, ಇತ್ತ ಕಂಟೇನರ್ ಅಡಿಯಲ್ಲಿ ಸಿಲುಕಿ ಚಾಲಕ ನರಳಾಡಿದ್ದಾನೆ.

ಕೂಡಲೇ ಅಲ್ಲಿದ್ದ ಸ್ಥಳೀಯರು, ಪೊಲೀಸರು ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಸಿಮೆಂಟ್ ಲೋಡ್ ತುಂಬಿಕೊಂಡು ಹೋಗುತ್ತಿದ್ದಾಗ, ಟೈರ್ ಸ್ಫೋಟಗೊಂಡು ಸರ್ವೀಸ್ ರಸ್ತೆಗೆ ಉರುಳಿದೆ. ಅಪಘಾತದ ರಭಸಕ್ಕೆ ಲಾರಿ ಇಂಜಿನ್ ಮತ್ತು ಕಂಟೇನರ್ ಇಬ್ಬಾಗವಾಗಿದೆ. ಲಾರಿ ಅಡಿಯಲ್ಲಿ ಸಿಲುಕಿದ ಡ್ರೈವರ್ ಉಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version