Site icon Vistara News

Road Accident: ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟೆಂಪೋಗೆ ಕ್ಯಾಂಟರ್‌ ಡಿಕ್ಕಿ; ಮೂವರ ದುರ್ಮರಣ, ಐವರ ಸ್ಥಿತಿ ಗಂಭೀರ

Road Accident

ನೆಲಮಂಗಲ: ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗೇಟ್ ಬಳಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಟೆಂಪೋಗೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿಯಾಗಿ ಮೂವರು ಕಾರ್ಮಿಕರು ಮೃತಪಟ್ಟು, ಐವರಿಗೆ ಗಂಭೀರ ಗಾಯಗಳಾಗಿವೆ.

ಕಾರ್ಮಿಕರೆಲ್ಲಾ ಉತ್ತರ ಕರ್ನಾಟಕ ಮೂಲದವರು ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ 407 ಟೆಂಪೋದಲ್ಲಿದ್ದ ಕಾರ್ಮಿಕರು ಮತ್ತು ವಸ್ತಗಳು ಚೆಲ್ಲಾ ಪಿಲ್ಲಿಯಾಗಿ ರಸ್ತೆ ಬಿದ್ದಿವೆ. ಇದರಿಂದ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಧಾವಿಸಿ, ಕ್ರೇನ್ ಮುಖಾಂತರ ವಾಹನಗಳನ್ನು ತೆರವು ಮಾಡಿಸಿದರು.

ಇದನ್ನೂ ಓದಿ | Theft Case : ಲಡ್ಡು ಬಂದು ಬಾಯಿಗೆ ಬಿತ್ತು! ಕೀ ಸಮೇತ ಸ್ಕೂಟರ್‌ ಬಿಟ್ಟು ಹೋದ ಮಹಿಳೆ, ಕ್ಷಣಾರ್ಧದಲ್ಲೇ ಎಗರಿಸಿದ ಚಾಲಾಕಿ

ಮಧ್ಯರಾತ್ರಿಯಲಿ ವೃದ್ಧೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು; ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ

ತುಮಕೂರು/ಬೆಂಗಳೂರು ಗ್ರಾಮಾಂತರ: ತಲೆ ಮೇಲೆ ಕಲ್ಲು ಎತ್ತಿಹಾಕಿ ವೃದ್ಧೆಯೊಬ್ಬರ ಬರ್ಬರ (Murder Case) ಕೊಲೆಯಾಗಿದೆ. ಮದ್ದಮ್ಮ (68) ಮೃತ ದುರ್ದೈವಿ. ತುಮಕೂರಿನ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಜೋಗಯ್ಯನ ಪಾಳ್ಯದಲ್ಲಿ ಘಟನೆ ನಡೆದಿದೆ.

ಮದ್ದಮ್ಮ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದ ದೇವರ ಉತ್ಸವ ಮುಗಿಸಿಕೊಂಡು ರಾತ್ರಿ ಮನೆಗೆ ತೆರಳುತ್ತಿದ್ದರು. ಈ ವೇಳೆ ವೃದ್ಧೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ನಂತರ ಆಕೆಯ ಮೈ ಮೇಲೆ ಇದ್ದ ಚಿನ್ನದ ಸರ ಕದ್ದಿದ್ದಾರೆ. ಬಳಿಕ ಶವವನ್ನು ನಿರ್ಮಾಣ ಹಂತದ ಕಟ್ಟಡದ ಬಳಿ ಎಸೆದು ಪರಾರಿ ಆಗಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಿರಾ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Murder Case : ಬೆಂಗಳೂರಲ್ಲಿ ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ; ಬಾಳಸಂಗಾತಿ ಈಗ ಕೊಲೆಗಾರ್ತಿ

ಆನೇಕಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಶಿಲೀಂಧ್ರದೊಡ್ಡಿ ಬಳಿ ಘಟನೆ ನಡೆದಿದೆ. ಬೆಂಗಳೂರಿನ ಕೊಣನಕುಂಟೆ ನಿವಾಸಿ ಅಮರನಾಥ (43) ಮೃತ ದುರ್ದೈವಿ.

ಅಮರನಾಥ ಹೊಸ ಪಂಚೆ ಖರೀದಿಸಿ ಅದರಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version