Site icon Vistara News

Road Accident : ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು; ಆಘಾತದಿಂದ ಇಬ್ಬರು ಸಾವು, ಸಹಾಯಕ್ಕೆ ಬಂದವನೂ ಹೆಣವಾದ

Accident in Mysore

ಮೈಸೂರು: ಮೈಸೂರಿನಲ್ಲಿ (Mysore News) ಸಂಭವಿಸಿದ ವಿಚಿತ್ರ ಮತ್ತು ಭೀಕರ ಅಪಘಾತದಲ್ಲಿ (Road Accident) ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ವೇಗವಾಗಿ ರಸ್ತೆಯಾಚೆ ನುಗ್ಗಿ ವಿದ್ಯುತ್‌ ಕಂಬಕ್ಕೆ (Car Rams into wall and Electricity poll) ಡಿಕ್ಕಿ ಹೊಡೆದಿದೆ. ಬಳಿಕ ಅದು ಕಂಪೌಂಡ್‌ ಮತ್ತು ವಿದ್ಯುತ್‌ ಕಂಬದ ನಡುವೆ ಸಿಕ್ಕಿಹಾಕಿಕೊಂಡಿದೆ. ಹೀಗೆ ಸಿಕ್ಕಿಹಾಕಿಕೊಂಡ ಕಾರಿನಿಂದ ಎಲ್ಲರೂ ಸೇಫಾಗಿ ಹೊರಬಂದಿದ್ದಾರೆ. ಆದರೆ, ಕಂಬ ಮತ್ತು ಗೋಡೆಯ ನಡುವಿನಿಂದ ಕಾರನ್ನು ತೆಗೆಯಲು ಹೋದಾಗ ವಿದ್ಯುತ್‌ ಶಾಕ್‌ ಹೊಡೆದಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ ಒಬ್ಬಾತ ಇವರಿಗೆ ಸಹಾಯ ಮಾಡಲು ಬಂದ ರಿಕ್ಷಾ ಡ್ರೈವರ್‌!

ಈ ಘಟನೆ ನಡೆದಿರುವುದು ಮೈಸೂರಿನ ನಾಚನಹಳ್ಳಿ ಪಾಳ್ಯದ ಬಳಿ ನಡೆದಿದೆ. ಅಪಘಾತಗೊಂಡು ಕಾಂಪೌಂಡ್ ಹಾಗೂ ವಿದ್ಯುತ್ ಕಂಬ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಕಾರನ್ನು ಬಿಡಿಸಿಕೊಳ್ಳುವಾಗ ಇಬ್ಬರು ಮೃತಪಟ್ಟ ದಾರುಣ ಘಟನೆ ಇದು.

ಮೈಸೂರಿನ ನಾಚನಹಳ್ಳಿ ಪಾಳ್ಯದ ಮಾನಂದವಾಡಿ ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಅಶೋಕಪುರಂ ನಿವಾಸಿಗಳಾದ ಕಿರಣ್ ಹಾಗೂ ರವಿಕುಮಾರ್ ಮೃತಪಟ್ಟಿದ್ದಾರೆ. ರವಿ, ಸಂದೇಶ್, ಶಿವಕುಮಾರ್ ಎಂಬವರಿಗೂ ವಿದ್ಯುತ್ ಶಾಕ್ ಹೊಡೆದಿದ್ದು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ಯುತ್‌ ಕಂಬ ಮತ್ತು ಗೋಡೆಯ ನಡುವೆ ಸಿಲುಕಿದ ಕಾರು

ಏನಿದು ವಿಚಿತ್ರ ಘಟನೆ?

ಚಾಮರಾಜನಗರದ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಸಂಬಂಧಿಕರಿಗೆ ಸೇರಿದ ಇನೋವಾ ಕಾರನ್ನು ಟ್ರಯಲ್ ನೋಡುವುದಕ್ಕೆಂದು ರವಿಕುಮಾರ್‌ ಎಂಬವರು ಪಡೆದಿದ್ದರು. ಗುರುವಾರ ರಾತ್ರಿ ರವಿಕುಮಾರ್ ಅವರು ತಮ್ಮ ಗೆಳೆಯರಾದ ಭಾಸ್ಕರ್, ರವಿ, ಸಂದೇಶ್ ಹಾಗೂ ಶಿವಕುಮಾರ್ ಅವರನ್ನು ಕರೆದುಕೊಂಡು ಟ್ರಯಲ್‌ ರನ್‌ಗೆ ಹೋಗಿದ್ದಾರೆ. ಕಾರು ಆಶೋಕಪುರಂನತ್ತ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ರಸ್ತೆಯಿಂದಾಚೆ ಹೋಗಿದೆ. ಅದು ಮೊದಲು ಕಾಂಪೌಂಡ್ ಗೋಡೆಗೆ ಡಿಕ್ಕಿ. ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಅದು ವಿದ್ಯುತ್‌ ಕಂಬ ಮತ್ತು ಕಾಂಪೌಂಡ್‌ ಗೋಡೆ ನಡುವೆ ಸಿಲುಕಿಕೊಂಡಿದೆ.

ಘಟನೆ ಆದ ಕೂಡಲೇ ನಾಲ್ವರೂ ಕಾರಿನಿಂದ ಹೊರಬಂದಿದ್ದಾರೆ. ಯಾರಿಗೂ ಅಂತ ದೊಡ್ಡ ಗಾಯ ಆಗಿರಲಿಲ್ಲ. ಅಷ್ಟೇ ಮಾಡಿದ್ದರೆ ಏನೂ ಆಗುತ್ತಿರಲಿಲ್ಲವೇನೋ? ಹೊರಬಂದ ಅವರು ಕಾಂಪೌಂಡ್ ಹಾಗೂ ಕಂಬದ ನಡುವೆ ಸಿಲುಕಿದ ಕಾರನ್ನು ಹೊರತರಲು ಯತ್ನಿಸಿದ್ದಾರೆ. ಈ ವೇಳೆ ಆಟೋದಲ್ಲಿ ಬರುತ್ತಿದ್ದ ಡ್ರೈವರ್ ಕಿರಣ್ ಕುಮಾರ್ ಇವರ ನೆರವಿಗೆ ಬಂದಿದ್ದಾರೆ. ರವಿ ಕುಮಾರ್‌ ಮತ್ತು ಕಿರಣ್‌ ಇಬ್ಬರೂ ಅಶೋಕನಗರದವರೆ. ರವಿಯಣ್ಣನ ಕಾರಿಗೆ ಏನೋ ಆಗಿದೆ ಎಂದು ಸಹಾಯ ಮಾಡಲು ಕಿರಣ್‌ ಬಂದಿದ್ದರು.

ಈ ನಡುವೆ, ಕಾರನ್ನು ಹೊರತರುವ ಯತ್ನದಲ್ಲಿದ್ದಾಗ ವಿದ್ಯುತ್ ಶಾಕ್‌ ಹೊಡೆದಿದೆ. ಹೈವೋಲ್ಟೇಜ್ ತಂತಿ ಸಂಪರ್ಕದ ಪರಿಣಾಮ ರವಿಕುಮಾರ್ ಕುಸಿದುಬಿದ್ದಿದ್ದಾರೆ. ಆಗ ಆಟೋ ಡ್ರೈವರ್ ಕಿರಣ್ ಕೂಡಲೇ ನೆರವಿಗೆ ಧಾವಿಸಿದ್ದಾರೆ. ಅವರು ಕೂಡಾ ಅಲ್ಲೇ ಶಾಕ್‌ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ. ಇವರಿಬ್ಬರ ನೆರವಿಗೆ ಬಂದ ರವಿ, ಸಂದೇಶ್, ಶಿವಕುಮಾರ್‌ಗೂ ಶಾಕ್ ಹೊಡೆದಿದೆ. ಆದರೆ, ಪ್ರಾಣಾಪಾಯ ಆಗಿಲ್ಲ. ಕೆ.ಆರ್.ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಏನೇನೋ ಆಗಿ ಎರಡು ಜೀವಗಳ ಜೀವನಪಯಣ ಅಂತ್ಯಗೊಂಡಿದೆ.

ಇದನ್ನೂ ಓದಿ: Road accident : ಬೈಕ್‌ಗಳ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಮೃತ್ಯುವಶ

Exit mobile version