ಚಿಕ್ಕಮಗಳೂರು: ಮೆಸ್ಕಾಂ ಲಾರಿ- ಓಮ್ನಿ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ದುರ್ಮರಣ ಹೊಂದಿ, 9ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ (Road Accident) ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್-ಕೊಟ್ಟಿಗೆಗಾರ ಮಧ್ಯೆ ನಡೆದಿದೆ. ಮೆಸ್ಕಾಂ ಲಾರಿ- ಓಮ್ನಿ ಡಿಕ್ಕಿಯಾದ ಬಳಿಕ ಹಿಂದಿನಿಂದ ವೇಗವಾಗಿ ಬಂದ ಓಮ್ನಿಗೆ ಆಲ್ಟೋ ಕಾರು ಕೂಡ ಡಿಕ್ಕಿಯಾಗಿದೆ. ಇದರಿಂದ ಓಮ್ನಿಯಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಆಲ್ಟೋ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚನ್ನಪಟ್ಟಣ ಗ್ರಾಮದ ಹಂಪಯ್ಯ (65), ಪ್ರೇಮ (58), ಮಂಜಯ್ಯ (60), ಪ್ರಭಾಕರ್ (45) ಮೃತರು. ಆಲ್ಟೊ ಕಾರಿನಲ್ಲಿದ್ದ ನಾಗರಾಜಯ್ಯ, ಪೂಜಾ, ಸೃಜನ್, ಚಂದನ್, ವೀರೇಶ್, ಮಂಜುನಾಥ್, ಅಕ್ಕಮ್ಮ ಗಾಯಾಳುಗಳು.
ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಓಮ್ನಿ ಹಾಗೂ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಹೋಗುತ್ತಿದ್ದ ಮೆಸ್ಕಾಂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಮೂರು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಲಾರಿ ಡಿಕ್ಕಿಯ ರಭಸಕ್ಕೆ ಓಮ್ನಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಆಲ್ಟೋ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.
ಓವರ್‌ಟೇಕ್ ಮಾಡಲು ಹೋಗಿ ಅಪಘಾತ ನಡೆದಿದ್ದು, ಗಾಯಾಳುಗಳಿಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Murder Case : ಪ್ರಬುದ್ಧಳ ಕೊಲೆ ಮಾಡಿದ್ದು ತಮ್ಮನ ಸ್ನೇಹಿತನೇ; ಕನ್ನಡಕದ ಹಿಂದಿನ ರಹಸ್ಯ ರಿವೀಲ್
ಬೈಕ್‌ಗಳ ಅಪಘಾತ; ಮಗನ ಕಣ್ಣೆದುರೇ ರಕ್ತಕಾರಿ ತಾಯಿ ಮೃತ್ಯು; ಮೂವರು ಗಂಭೀರ
ತುಮಕೂರು: ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಓರ್ವ ಮಹಿಳೆ (Road Accident) ಮೃತಪಟ್ಟಿದ್ದಾರೆ. ತುಮಕೂರಿನ ಮಧುಗಿರಿ ತಾಲೂಕಿನ ಪುರವರ ಗ್ರಾಮದ ಹೊರವಲಯದ ಜಯಮಂಗಲಿ ನದಿ ಸೇತುವೆ ಬಳಿ ಘಟನೆ ನಡೆದಿದೆ. ಜೋಗೆನಹಳ್ಳಿ ಗ್ರಾಮದ ಹನುಮಕ್ಕ (45) ಮೃತ ದುರ್ದೈವಿ.
ಪುರವರದಿಂದ ಜೋಗೆನಹಳ್ಳಿಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಹನುಮಕ್ಕಳ ಮಗನಿಗೂ (25) ಗಂಭೀರ ಗಾಯವಾಗಿದೆ. ಮತ್ತೊಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಉಪ್ಪಾರಹಳ್ಳಿ ಗ್ರಾಮದ ಹನುಮಂತ ರೆಡ್ಡಿ (65), ಗಂಗಾಧರಪ್ಪ (67) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕೊಡಿಗೇನಹಳ್ಳಿ ಪೊಲೀಸರು ಮೃತದೇಹವನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಾಟರ್ ಟ್ಯಾಂಕರ್ ಚಾಲಕನ ಅಜಾಗರೂಕತೆಗೆ ಪಾದಚಾರಿ ಬಲಿ
ಬೆಂಗಳೂರಲ್ಲಿ ವಾಟರ್ ಟ್ಯಾಂಕರ್ ಚಾಲಕನ ಅಜಾಗರೂಕತೆಗೆ ಪಾದಚಾರಿಯೊಬ್ಬರು ಬಲಿಯಾಗಿದ್ದಾರೆ. ರವಿ (41) ಮೃತ ದುರ್ದೈವಿ. ಹೆಬ್ಬಾಳ ಸಂಚಾರ ಠಾಣಾ ವ್ಯಾಪ್ತಿಯ ಅಮೃತಹಳ್ಳಿ 6ನೇ ರಸ್ತೆಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಅಮೃತಹಳ್ಳಿ ಸೊಣ್ಣಪ್ಪ ಲೇಔಟ್ ರಸ್ತೆಯಿಂದ ನಡೆದುಕೊಂಡು ಬರುತ್ತಿದ್ದಾಗ, ರಿವರ್ಸ್ ಚಾಲನೆ ಮಾಡಿಕೊಂಡು ಬಂದ ಚಾಲಕ ಭಾಷ, ರವಿ ಮೇಲೆ ಟ್ಯಾಂಕರ್ ಹತ್ತಿಸಿದ್ದಾನೆ.
ಪರಿಣಾಮ ತೊಡೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ರವಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಚಾಲಕ ಭಾಷನನ್ನು ಹೆಬ್ಬಾಳ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.