ಹಾಸನ/ಮಂಡ್ಯ/ಕೋಲಾರ: ರಾಜ್ಯದ ಹಾಸನ, ಮಂಡ್ಯ, ಕೋಲಾರದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಿಂದ (Road Accident) ನಾಲ್ವರು ಮೃತಪಟ್ಟಿದ್ದು, ಸುಮಾರು 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ವೊಂದು ಶಾಲೆಯ ಕಾಂಪೌಂಡ್ ಹಾಗೂ ಪಕ್ಕದಲ್ಲೇ ಇದ್ದ ಮನೆಗೆ ಡಿಕ್ಕಿ ಹೊಡೆದಿದ್ದು, ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಹತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ಅವರಲ್ಲಿ ಮೂವರು ಪ್ರಯಾಣಿಕರ ಪರಿಸ್ಥಿತಿ ಗಂಭೀರವಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದ ಅಮೃತ್‌ರಾಜ್ (34) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಸ್‌ನ ಆ್ಯಕ್ಸಲ್ ತುಂಡಾಗಿ ರಸ್ತೆ ಪಕ್ಕದ ಜಮೀನಿಗೆ ನುಗ್ಗಿದ್ದು, ಮೊದಲು ಮನೆಗೆ ಡಿಕ್ಕಿ ಹೊಡೆದಿದೆ. ಆದರೂ ನಿಯಂತ್ರಣಕ್ಕೆ ಸಿಗದೇ ಇದ್ದಿದ್ದರಿಂದ ಪಕ್ಕದಲ್ಲೇ ಇದ್ದ ಜೆಎಸ್ಎಸ್ ಶಾಲೆಯ ಕಾಂಪೌಂಡ್ ಡಿಕ್ಕಿ ಹೊಡೆದು ನಿಂತಿದೆ. ಈ ವೇಳೆ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಂಗಳೂರಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಇದಾಗಿದೆ.
ಜಮೀನಿನಲ್ಲಿದ್ದ ವಾಸದ ಮನೆಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಮನೆ ಜಖಂ ಆಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರು ಯುವಕರ ಸಾವು
ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಯುವಕರು ಮೃತಪಟ್ಟಿದ್ದಾರೆ. ಅನಿಕೇತನ್ 30, ಪವನ್ 32 ಹಾಗೂ ಚಿರಂಜೀವಿ 32 ಮೃತಪಟ್ಟವರು. ತಡರಾತ್ರಿ ಕಾರಿನಲ್ಲಿ ವೇಗವಾಗಿ ಚಲಿಸುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಕ್ಕಿ ಹೆಬ್ಬಾಳು ಗ್ರಾಮದ ಹೇಮಾವತಿ ಬ್ರಿಡ್ಜ್ ಬಳಿ ವಿದ್ಯುತ್ ಕಂಬಕ್ಕೆ ಕಾರು ಗುದ್ದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟರೆ, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ. ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಿವಾಸಪುರ ಬಳಿ ಟೆಂಪೋ ಪಲ್ಟಿ; 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಾಯ
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪನಸ ಮಾಕಲಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಟೆಂಪೋ ವಾಹನ ಬಿದ್ದಿದ್ದು, ಟೆಂಪೋದಲ್ಲಿದ್ದ ಕಾಂಕ್ರಿಟ್ ಕೆಲಸ ಮಾಡುವ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಾಯಗಳಾಗಿವೆ.
ಶ್ರೀನಿವಾಸಪುರದಿಂದ ಕೋಲಾರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಟ್ರಾಫಿಕ್ ಸಮಸ್ಯೆಯಾಗಿ ಕೆಲ ಕಾಲ ವಾಹನ ಸವಾರರು ಪರದಾಡುವಂತಾಗಿದೆ. ಗಾಯಾಳುಗಳಿಗೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: Paytm Payments Bank : ಒಂದು ಪ್ಯಾನ್ ಸಂಖ್ಯೆಗೆ ಸಾವಿರಾರರು ಖಾತೆಗಳು, ಪೇಟಿಎಂ ಪತನಕ್ಕೆ ಇಂಥ ಅಧ್ವಾನಗಳೇ ಕಾರಣ
ಸುಗುಟೂರಿನಿಂದ ಶ್ರೀನಿವಾಸಪುರ ಪಟ್ಟಣಕ್ಕೆ ಈ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದರು ಎಂದು ಹೇಳಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.