ಮೈಸೂರು: ಜೀಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ (Bike-Jeep accident) ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು (Two riders dead) ಕಂಡ ಭೀಕರ ಘಟನೆ (Road Accident) ಹುಣಸೂರು ತಾಲೂಕಿನ ಕೊತ್ತೇಗಾಲ ಗೇಟ್ ಬಳಿ ನಡೆದಿದೆ. ಅತ್ತಿಗುಪ್ಪೆ ಗ್ರಾಮದ ನಿವಾಸಿಗಳಾದ ನಾಗರಾಜು (48) ಹಾಗೂ ಶಿವರಾಜು (45) ಮೃತ ಸವಾರರು.
ನಾಗರಾಜು ಮತ್ತು ಶಿವರಾಜು ಕೂಲಿ ಕಾರ್ಮಿಕರಾಗಿದ್ದು, ಅವರು ಹುಣಸೂರು ಕಡೆಯಿಂದ ಸ್ವಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬಂದ ಜೀಪ್ ಡಿಕ್ಕಿಯಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಷ್ಟದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ ಇವರ ಸಾವು ಕುಟುಂಬಕ್ಕೆ ಭಾರಿ ಸಂಕಷ್ಟವನ್ನು ಉಂಟು ಮಾಡಿದೆ.
ಈ ದಾರಿಯಲ್ಲಿ ವಾಹನಗಳ ಅಪರಿಮಿತ ವೇಗ ಭಾರಿ ಅಪಾಯವನ್ನು ತಂದೊಡ್ಡಿದೆ ಎಂದು ಹೇಳಲಾಗುತ್ತಿದೆ. ವಾಹನಗಳ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿ
ಬಾಗಲಕೋಟೆ: ಕಬ್ಬು ತುಂಬಿದ ಟ್ರ್ಯಾಕ್ಟರ್ ಒಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾಗಿದೆ. ಇದರಿಂದಾಗಿ ರಸ್ತೆ ಬದಿ ನಿಲ್ಲಿಸಿದ್ದ ಹಲವು ಬೈಕ್‌ಗಳು ಜಖಂ ಆಗಿವೆ. ಮುಧೋಳ ನಗರದ ರನ್ನ ಸರ್ಕಲ್ ಬಳಿ ಘಟನೆ ನಡೆದಿದೆ.
ಸಾಮಾನ್ಯವಾಗಿ ಹೆಚ್ಚು ಜನ ಸಂಚಾರ ಇರುವ ಪ್ರದೇಶವಾಗಿರುವ ರನ್ನ ಸರ್ಕಲ್‌ನಲ್ಲಿ ಅಪಘಾತದ ಸಂದರ್ಭದಲ್ಲಿ ಹೆಚ್ಚು ಜನ ಸಂದಣಿ, ವಾಹನ ಸಂಚಾರ ಇರಲಿಲ್ಲ. ಹೀಗಾಗಿ ಅದೃಷ್ಟವಶಾತ್ ತಪ್ಪಿದ ಬಾರಿ ಅನಾಹುತ ತಪ್ಪಿದಂತಾಗಿದೆ. ಟ್ರ್ಯಾಕ್ಟರ್ ಪಲ್ಟಿಯಿಂದಾಗಿ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
ನಗರದಲ್ಲಿ ಬೈಪಾಸ್ ರಸ್ತೆ ಇದ್ದರೂ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ನಗರದೊಳಗಿನಿಂದಲೇ ಹಾದು ಹೋಗುತ್ತಿರುವುದು ಭಾರಿ ಸಮಸ್ಯೆಗೆ ಕಾರಣವಾಗಿದೆ. ಮುಧೋಳ ನಗರದಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಪರ್ಯಾಯವಾಗಿ ನಿರ್ಮಿಸಿರುವ ಬೈಪಾಸ್ ರೋಡ್ ಉಪಯೋಗವೇ ಇಲ್ಲದಂತಾಗಿವೆ.
ಇದನ್ನೂ ಓದಿ: Road Accident : ಯಮನಂತೆ ಬಂದ ಟ್ಯಾಂಕರ್; ಒಂದೇ ಕುಟುಂಬದ 6 ಮಂದಿ ದುರ್ಮರಣ!
ಟಯರ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಲಾರಿ
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಟಯರ್ ಬ್ಲಾಸ್ಟ್ ಅಗಿ ಲಾರಿಯೊಂದು ಹೊತ್ತಿ ಉರಿದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಯ ಟಯರ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಬೆಂಕಿಯಿಂದ ಧಗಧಗಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲೆಗೆ ಹೊತ್ತಿ ಉರಿದ ಲಾರಿಯ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.
ಗುಜರಾತ್ ಮೂಲದ ವಿಂಡ್ ಫ್ಯಾನ್ ರೆಕ್ಕೆಗಳನ್ನು ಒಯ್ಯುವ ಲಿಫ್ಟೆಡ್ ವೆಹಿಕಲ್ ಇದೆಂದು ತಿಳಿದುಬಂದಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.