Site icon Vistara News

Road accident : ಹೆದ್ದಾರಿ ಬದಿಯಲ್ಲಿ ಹೆಣವಾಗಿ ಬಿದ್ದ ಆ ಯುವಕನ ಸಾವಿನ ಹಿಂದಿದೆಯಾ ಕೊಲೆಯ ಕರಿನೆರಳು?

gadaga accident

#image_title

ಗದಗ: ಆ ಯುವಕ ಬಡ ಕುಟುಂಬಕ್ಕೆ ಆಸರೆಯಾಗಿದ್ದ. ತನ್ನ ತಂಗಿ ಹಾಗೂ ಅಣ್ಣನ ಮದುವೆ ಮಾಡಿ, ಕಿರಿಯ ಮಗನಾದ್ರೂ ಹಿರಿತನದ ಜವಾಬ್ದಾರಿ ಹೊತ್ತಿದ್ದ. ಆದ್ರೆ ಇದಕ್ಕಿದ್ದಂತೆ ಅದೇನಾಯಿತೋ ಗೊತ್ತಿಲ್ಲ! ರಾತ್ರಿಯಾಗುವಷ್ಟರಲ್ಲಿ ಯುವಕ ಸಾವನ್ನಪ್ಪಿರುವ ಸುದ್ದಿ ಕುಟುಂಬಕ್ಕೆ ಸಿಡಿಲಿನಂದತೆ ಅಪ್ಪಳಿಸಿತ್ತು. ಏರಿಯಾದ‌ ಜನ್ರೆಲ್ಲಾ ಯುವಕನ‌ ಸಾವಿನ ಸುದ್ದಿ ಕೇಳಿ ದಂಗು ಬಡಿದು ಹೋಗಿದ್ದರು. ಮೇಲ್ನೋಟಕ್ಕೆ ಅಪಘಾತದಿಂದ ಯುವಕ ಸಾವನ್ನಪ್ಪಿರಬಹುದು ಅಂತ ಸುಮ್ಮನಿದ್ದ ಸ್ನೇಹಿತರಿಗೆ, ಮೆಲ್ಲನೆ ಕೊಲೆಯ ವಾಸನೆ ಬಂದಿತ್ತು.

ಹೀಗೆ ಹೆದ್ದಾರಿ ಪಕ್ಕದಲ್ಲಿ ಶವವಾಗಿ ಬಿದ್ದಿದ್ದ ಯುವಕನ ಹೆಸರು ಸುನೀಲ್ ಸಹದೇವಪ್ಪ ಚಲವಾದಿ‌ ಅಂತ. ಪಕ್ಕದ ಕಳಸಾಪೂರ ಗ್ರಾಮದ ಅಂಬೇಡ್ಕರ ನಗರದ‌ ನಿವಾಸಿ. ಈಗಿನ್ನೂ‌ 30ರ ಹರೆಯದ ಯುವಕ. ಆದ್ರೆ ಎಪ್ರಿಲ್‌ 1ರಂದು ಸಂಜೆ ತನ್ನ ಮನೆಯಿಂದ ಹೊರಹೋದವನು ಮರಳಿ‌ ಬಂದಿದ್ದು ಹೆಣವಾಗಿ‌.

ಸಂಜೆ ಆರು ಗಂಟೆಗೆ ಸ್ನೇಹಿತನೋರ್ವನ ಬೈಕ್ ಪಡೆದ ಸುನೀಲ್, ಅರ್ಜೆಂಟಾ ಗದಗದ ಜಿಲ್ಲಾಸ್ಪತ್ರೆಗೆ ಹೋಗಬೇಕು ಅಂತ ಹೇಳಿದ್ದಾನೆ. ತಕ್ಷಣ ಅಲ್ಲಿಂದ ಹೊರಟ‌ ಸುನೀಲ್ ರಾತ್ರಿ ಎಂಟು‌ ಗಂಟೆಯಾದರೂ ಮರಳಿ ಬರಲಿಲ್ಲ. ಬೈಕ್ ಕೊಟ್ಟ ಸ್ನೇಹಿತ, ಯಾಕಿಷ್ಟು ಲೇಟ್ ಅಂತ ಫೋನ ಮಾಡಿದರೆ, ಅದೂ ಕೂಡ ನಾಟ್‌ ರೀಚಬಲ್.

ಅದಾದ ಸ್ವಲ್ಪ ಹೊತ್ತಿನಲ್ಲೇ ಸ್ನೇಹಿತನಿಗೆ ಬಂದಿದ್ದು ತನ್ನ ಗೆಳೆಯ ಸುನೀಲ್ ನ ಸಾವಿನ ಸುದ್ದಿ. ಹೆದ್ದಾರಿ ಪಕ್ಕದಲ್ಲಿ ಬೈಕ್ ಸಮೇತ ಶವವಾಗಿ ಬಿದ್ದಿದ್ದ, ಸುನೀಲ್‌ನನ್ನು ಅದ್ಯಾರೋ‌ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು.

ಮೊದ ಮೊದಲು ಸುನೀಲ್ ಸಾವು ಆಕ್ಸಿಡೆಂಟ್ ‌ನಿಂದ ಆಗಿರಬಹುದು ಅಂತ ಪೊಲೀಸರು ಸಹ ನಿರ್ಧರಿಸಿದ್ದರು. ಆದರೆ ಶವಾಗಾರದಲ್ಲಿದ್ದ, ಸುನೀಲ್ ಶವವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ಸ್ನೇಹಿತರಿಗೆ, ಆತನ‌ ದೇಹದ ಮೇಲಾದ ಕೆಲವು ಗಾಯಗಳು ಹಲವು ಅನುಮಾನಗಳ ಜೊತೆಗೆ ಕೊಲೆ ಸಂಶಯಕ್ಕೆ ಪುಷ್ಟಿ ‌ನೀಡಿದ್ದವು. ಹೀಗಾಗಿ ಇದು ಆಕ್ಸಿಡೆಂಟ್ ಅಲ್ಲ‌. ಸುನೀಲ್‌ನನ್ನು ಯಾರೋ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿ, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತ ಮನೆಯ ಆಧಾರ‌ ಸ್ತಂಭವಾಗಿದ್ದ, ಮಗನನ್ನ ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ. ಕುಟುಂಬಸ್ಥರು ಹೇಳೋ ಪ್ರಕಾರ, ಸುನೀಲನಿಗೆ ಯಾವ ಹಣದ ವ್ಯವಹಾರವಾಗಲಿ, ಹುಡುಗಿಯರ ಫ್ರೆಂಡ್ ಶಿಪ್ ಆಗಲಿ ಇದ್ದಿಲ್ಲವಂತೆ. ಗದಗದ ಜಿಲ್ಲಾಸ್ಪತ್ರೆ ಸೇರಿದಂತೆ, ಹಲವು ಕಡೆ, ಹೆಚ್ಚಾಗಿ ಸ್ನೇಹಿತರ ಬಳಗವನ್ನೇ ಹೊಂದಿದ್ದನಂತೆ. ಅದೆಷ್ಟೇ ಬಡತನವಿದ್ರೂ, ಮನೆಗೆ ಕಿರಿಮಗನಾದ್ರೂ, ಟೈಲ್ಸ್ ಹಾಕುವ ಕೆಲಸ ಮಾಡಿಕೊಂಡು ಕುಟುಂಬವನ್ನು ಚೆನ್ನಾಗಿಯೇ ಮುನ್ನಡೆಸಿಕೊಂಡು ಹೋಗುತ್ತಿದ್ದ.

ಆದರೆ ಅದ್ಯಾವ ಕೆಟ್ಟ ಕಣ್ಣು ಬಿತ್ತೋ, ಸು‌ನೀಲ್‌ನನ್ನು ಯಾರೋ ಪಾಪಿಗಳು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ತಲೆಗೆ ಜೋರಾಗಿ ಹೊಡೆದು, ಹಲ್ಲೆ ಮಾಡಿ ಅತ್ಯಂತ‌ ಹೀನಾಯ ಸ್ಥಿತಿಯಲ್ಲಿ ಕೊಂದು ಹಾಕಿದ್ದು, ಬಳಿಕ ಹೆದ್ದಾರಿ ಪಕ್ಕದಲ್ಲಿ ಬೈಕ್ ಸಮೇತ ಸುನೀಲ್ ಶವವನ್ನ ತಂದು ಹಾಕಿದ್ದಾರೆ ಎಂದು ಆರೋಪ‌ ಸ್ಥಳಿಯರು ಮಾಡ್ತಿದ್ದಾರೆ.

ಇನ್ನು ಸುನೀಲ್ ಗೆ ಹೈವೇಯಲ್ಲಿ ಆಕ್ಸಿಡೆಂಟ್ ಆಗಿದ್ರೆ, ದೇಹದ ಮೇಲೆ ತರಚಿದ ಗಾಯಗಳಾಗಬೇಕಿತ್ತು. ಬೈಕ್ ನುಜ್ಜುಗುಜ್ಜಾಗಬೇಕಿತ್ತು. ಆದರೆ ಶವ ಪತ್ತೆಯಾದ ಜಾಗದಲ್ಲಿ ಇದಾವುದೂ ಕಂಡುಬಂದಿಲ್ಲ. ಬದಲಾಗಿ ಸುನೀಲ್ ತಲೆಗೆ ಹಾಗೂ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದ ಗಾಯಗಳೇ ಸಾವಿನ ಸಂಶಯಕ್ಕೆ ಕಾರಣವಾಗಿವೆ‌. ಸದ್ಯ ಎಸ್ಪಿ ಮಾರ್ಗದರ್ಶನದಲ್ಲಿ, ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ಪೂರ್ಣ ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ.

ಇದನ್ನೂ ಓದಿ : Attempt To Murder: ರೀಲ್ಸ್‌ ಮಾಡುವ ನೆಪದಲ್ಲಿ ಭಾವಿ ಪತಿಗೆ ಚಾಕು ಹಾಕಿದ ಬಾಲಕಿ!

Exit mobile version