ತುಮಕೂರು/ಧಾರವಾಡ: ತುಮಕೂರು ಮತ್ತು ಧಾರವಾಡದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ (Road accident) ಮೂವರು ಮೃತಪಟ್ಟಿದ್ದಾರೆ. ಕುಣಿಗಲ್ ಬಳಿ ನಿಂತಿದ್ದ ಬಸ್‌ಗೆ ಟಿಟಿ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟರೆ, ಧಾರವಾಡದ ನವಲಗುಂದದಲ್ಲಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಪಿಡಿಒ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ನಿಂತಿದ್ದ ಬಸ್ ಗೆ ಟಿಟಿ ಡಿಕ್ಕಿ, ಇಬ್ಬರ ದುರ್ಮರಣ
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಡಿ.ಹೊಸಹಳ್ಳಿ ಬಳಿ ನಿಂತಿದ್ದ ಬಸ್‌ಗೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನವರಾದ ವೀರೇಶ್ (30) ಮತ್ತು ಶಶಿಕಲಾ(79) ಮೃತಪಟ್ಟಿದ್ದಾರೆ. ಅವರ ಜತೆಗೆ ದಿಲೀಪ್ ಕುಮಾರ್, ಆನಂದ್ ಕುಮಾರ್, ಪ್ರಿಯಾ, ಪ್ರತೀಕ್ಷಾ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರೆಲ್ಲರೂ ರಾಯಚೂರಿನ ಸಿಂಧನೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟಿದ್ದರು. ಶಶಿಕಲಾ ಅವರು ಕುಟುಂಬದ ಹಿರಿಯರಾಗಿದ್ದು, ಅವರ ಮನೆಯವರೆಲ್ಲರೂ ಟೆಂಪೊ ಟ್ರಾವೆಲರ್ ಮೂಲಕ ಮೈಸೂರಿಗೆ ಪ್ರವಾಸಕ್ಕೆಂದು ಹೋಗುತ್ತಿದ್ದರು. ಟಿಟಿ ವಾಹನದಲ್ಲಿ ಒಟ್ಟು 11 ಮಂದಿ ಪ್ರಯಾಣಿಸುತಿದ್ದರು.
ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಡಿ.ಹೊಸಹಳ್ಳಿ ಬಳಿ ಟೆಂಪೊ ಟ್ರಾವೆಲರ್ ನಿಂತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ. ಶಶಿಕಲಾ ಮತ್ತು ವೀರೇಶ್ ಮೃತಪಟ್ಟಿದ್ದಾರೆ. ಹುಲಿಯೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ: ರಸ್ತೆ ಅಪಘಾತದಲ್ಲಿ ಪಿಡಿಓ ಸಾವು
ಧಾರವಾಡದ ಯರಿಕೊಪ್ಪ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಪಿಡಿಒ ಒಬ್ಬರು ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಣ್ಣೂರು ಗ್ರಾಮದ ನಿವಾಸಿ ಶಿವಾನಂದ ಹಡಪದ ಮೃತಪಟ್ಟವರು. ಅವರು ಸದ್ಯ ಹಾವೇರಿ ಜಿಲ್ಲೆಯ ಸವಣೂರಿನ ಶಿರಬಡಗಿ ಗ್ರಾಮ ಪಂಚಾಯತಿ ಪಿಡಿಓ ಆಗಿ ಸೇವೆ ಸಲ್ಲಿಸುತ್ತಿದ್ದರು.
ಟ್ರಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಅವರು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ತುಂಗಾ ನದಿಯಲ್ಲಿ ಮುಳುಗಿ ಬಾಲಕ ಸಾವು
ಶಿವಮೊಗ್ಗ: ಶಿವಮೊಗ್ಗದಲ್ಲಿ ತುಂಗಾ ನದಿಯ ನೀರಲ್ಲಿ ಮುಳುಗಿ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಛತ್ರಕೇರಿಯಲ್ಲಿ ಈ ದುರ್ಘಟನೆ ನಡೆದಿದೆ. ಜಯಲಕ್ಷ್ಮೀ ಸಾಮಿಲ್ ಬಳಿ ನಿನ್ನೆ ಸಂಜೆ ತುಂಗಾ ನದಿಯ ನೀರಿನಲ್ಲಿ ಈಜಲು ಹೋಗಿದ್ದ ಅಶ್ವಥ್ (16) ಮುಳುಗಿ ಮೃತಪಟ್ಟಿದ್ದಾನೆ. ತನ್ನ ಸ್ನೇಹಿತನ ಜೊತೆಗೆ ನೀರಿಗೆ ಇಳಿದಿದ್ದ ಅಶ್ವಥ್ ಹೊರಬಂದಿಲ್ಲ. ಸ್ಥಳೀಯರ ನೆರವಿನಿಂದ ಶವ ಹೊರಕ್ಕೆ ತೆಗೆಯಲಾಗಿದೆ.
ಸಿಡಿಲು ಬಡಿದು ಸಾವು
ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು/ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಒಬ್ಬ ಯುವಕ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ. ಆರು ಜನರಿಗೆ ಗಂಭೀರ ಗಾಯಗಳಾಗಿವೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಬಳಿ ಘಟನೆ ನಡೆದಿದೆ. ದಿಗ್ಗಾಂವ್ ಗ್ರಾಮದ ಭೀಮು ಪೂಜಾರಿ (18) ಸಿಡಿಲಿಗೆ ಬಲಿಯಾದ ಯುವಕ. ಕೋಡ್ಲಾ ಮತ್ತು ದಿಗ್ಗಾಂವ್ ಗ್ರಾಮದ ಮಧ್ಯೆ ಸಿಡಿಲು ಬಡಿದು ಆರು ಜನ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಳಕಲ್‌ನಲ್ಲಿ ಸಿಡಿಲಿಗೆ ಮಹಿಳೆ ಸಾವು
ಬಾಗಲಕೋಟೆ: ಇಳಕಲ್ ಭಾಗದಲ್ಲಿ ಭಾರೀ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಮಹಿಳೆ ಸಾವಿಗೀಡಾದ ಘಟನೆ ಬಣಕನಡೋಣಿ ಗ್ರಾಮದಲ್ಲಿ ನಡೆದಿದೆ. ವಿಜಯಲಕ್ಷ್ಮಿ ಹೆರಕಲ್ (36) ಮೃತ ದುರ್ದೈವಿ. ಮೃತರು ಬೂದಿಹಾಳ ಗ್ರಾಮ ಪಂಚಾಯತ್‌ನಲ್ಲಿ ವಾಟರ್ ವುಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಜೆ ಹೊಲಕ್ಕೆ ಹೋಗಿ ಮನೆಗೆ ವಾಪಸ್ ಬರುವ ಸಮಯದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Murder Case: ಕಾಂಗ್ರೆಸ್ ಕಾರ್ಯಕರ್ತನ ಅಟ್ಟಾಡಿಸಿ, ಕಲ್ಲು ಎತ್ತಿಹಾಕಿ ಕೊಂದ ಹಂತಕರು