ಧಾರವಾಡ: ತಾಲೂಕಿನ ತೇಗೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೇನೆಯಲ್ಲಿ ಅಗ್ನಿವೀರ್ ಆಗಿ ನೇಮಕಗೊಂಡು ಉದ್ಯೋಗಕ್ಕೆ ಹೊರಟಿದ್ದ ಒಬ್ಬ ಯುವಕನನ್ನು ರೈಲು ಹತ್ತಿಸಲೆಂದು ಬಂದಿದ್ದ ಸ್ನೇಹಿತರು ಮತ್ತು ಐದು ವರ್ಷದ ಬಾಲಕ ಸೇರಿದಂತೆ ಕುಟುಂಬಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಗ್ನಿವೀರ್ ಸೇವೆಗೆ ಹೊರಟಿದ್ದ ಯುವಕ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ತಾಲೂಕಿನ ತೇಗೂರ ಗ್ರಾಮದ ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ಮುಂದೆ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕಾರು ಪಕ್ಕದಲ್ಲಿ ಸಾಗುತ್ತಿದ್ದ ಒಬ್ಬ ಪಾದಚಾರಿಗೂ ಡಿಕ್ಕಿ ಹೊಡೆದಿದ್ದು ಆತನೂ ಮೃತಪಟ್ಟಿದ್ದಾನೆ.
ಮೃತರನ್ನು ನಾಗಪ್ಪ ಈರಪ್ಪ ಮುದ್ದೊಜಿ (29), ಮಹಂತೇಶ್ ಬಸಪ್ಪ ಮುದ್ದೊಜಿ (೪೦), ಬಸವರಾಜ್ ಶಿವಪುತ್ರಪ್ಪ ನರಗುಂದ (35), ಶ್ರೀಕುಮಾರ್ ನರಗುಂದ (5) ಮತ್ತು ಧಾರವಾಡ ಹೆಬ್ಬಳಿ ನಿವಾಸಿಯಾದ ಪಾದಚಾರಿ ಈರಣ್ಣ ಗುರುಸಿದ್ದಪ್ಪ ರಾಮನಗೌಡರ್ ಎಂದು ಗುರುತಿಸಲಾಗಿದೆ.
ಅಗ್ನಿವೀರ್ ಸೇವೆಗೆ ಹೊರಟಿದ್ದ ಮಂಜುನಾಥ್ (೨೨), ಮಡಿವಾಳಪ್ಪ ರಾಜು (೨೨), ಪ್ರಕಾಶ್ ಗೌಡ (೨೨) ಮತ್ತು ಶ್ರವಣಕುಮಾರ್ (೦೭) ಗಾಯಾಳುಗಳು.
ಕಿತ್ತೂರು ಎಕ್ಸ್ಪ್ರೆಸ್ ರೈಲಿಗೆ ಬಿಡಲು ಹೊರಟಿದ್ದರು
ಮೃತರು ಮತ್ತು ಗಾಯಾಳುಗಳೆಲ್ಲರೂ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಔರಾದಿ ಗ್ರಾಮದವರು. ಈ ಗ್ರಾಮದ ಮಂಜುನಾಥ ಮುದ್ದೋಜಿ ಅಗ್ನಿಪಥದಲ್ಲಿ ಅಗ್ನಿವೀರ್ ಆಗಿ ನೇಮಕಗೊಂಡು ಕೆಲಸಕ್ಕೆ ಹೊರಟಿದ್ದ. ಅವನು ಹೈದರಾಬಾದ್ಗೆ ಹೋಗಬೇಕಾಗಿದ್ದು, ರಾತ್ರಿ ಒಂಬತ್ತು ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ಕಿತ್ತೂರು ಚೆನ್ನಮ್ಮ ಎಕ್ಸ್ಪ್ರೆಸ್ ರೈಲಿಗೆ ಮಂಜುನಾಥ ಹೋಗಬೇಕಾಗಿತ್ತು.
ಆತನ ಗೆಳೆಯರು ಮತ್ತು ಕೆಲವು ಸಂಬಂಧಿಕರು ಆತನನ್ನು ರೈಲು ನಿಲ್ದಾಣದ ವರೆಗೆ ಬಿಡಲೆಂದು ಭಾರಿ ಸಂಭ್ರಮದಿಂದ ಹೊರಟಿದ್ದರು. ಸಮಯ ರಾತ್ರಿ ೭.೩೦ ಆಗಿತ್ತು. ಇನ್ನರ್ಧ ಗಂಟೆ ಆಗಿದ್ದರೆ ಕಾರು ಹುಬ್ಬಳ್ಳಿ ತಲುಪುತ್ತಿತ್ತು. ಅದರೆ, ಅಷ್ಟು ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದುಬಿಟ್ಟಿತು. ಒಟ್ಟು ಐವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.
ಗಂಭೀರ ಗಾಯಗೊಂಡಿರೋ ಮಂಜುನಾಥ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ್ನ ಅಕ್ಕನ ಮಗ ಶ್ರೀಕುಮಾರ ಮೃತಪಟ್ಟಿದ್ದಾನೆ. ಘಟನೆ ತಿಳಿದ ಔರಾದದ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : Road Accident: ಬೈಕ್ಗೆ ಟ್ಯಾಂಕರ್ ಡಿಕ್ಕಿಯಾಗಿ ಜೀವಬಿಟ್ಟ ಪಶುವೈದ್ಯ; ಪರಾರಿಯಾದ ಚಾಲಕ