ರಾಮನಗರ: ಬೈಕ್‌ಗೆ ಕಾರೊಂದು ಹಿಂಬದಿಯಿಂದ ಡಿಕ್ಕಿಯಾಗಿ ತಂದೆ ಮತ್ತು ಮಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಕರುಳು ಹಿಂಡುವ ಘಟನೆಯೊಂದು ನಡೆದಿದೆ.
ರಾಮ ನಗರ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯ ಬಳಿ ನಡೆದ ಅಪಘಾತದಲ್ಲಿ ಯೋಗೇಶ್ (47) ಹಾಗೂ ಮಗಳು ಹರ್ಷಿತಾ(14) ಮೃತಪಟ್ಟಿದ್ದಾರೆ. ಇವರು ಮಾಗಡಿಯ ಕಲ್ಯಾ ಗ್ರಾಮದ ನಿವಾಸಿಗಳಾಗಿದ್ದು, ತಂದೆ ಮಗಳನ್ನು ಶಾಲೆಗೆ ಬಿಟ್ಟು ಬರಲೆಂದು ಹೋಗುತ್ತಿದ್ದಾಗ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಅತಿ ವೇಗದ ಚಾಲನೆ ಮತ್ತು ಅಜಾಗರೂಕತೆಯೇ ದುರಂತಕ್ಕೆ ಕಾರಣವಾಗಿದ್ದು, ಅನ್ಯಾಯವಾಗಿ ತಂದೆ ಮತ್ತು ಮಗಳು ಪ್ರಾಣ ಕಳೆದುಕೊಂಡಿದ್ದಾರೆ.
ಗದಗ: ಬಸ್ಸಿನ ಚಕ್ರದಡಿ ಸಿಲುಕಿದರೂ ಬದುಕಿ ಬಂದ ಸವಾರರು!
ಗದಗ: ದೇವರು ಆಯುಷ್ಯ ಒಂದು ಬರೆದಿದ್ದರೆ ಎಂಥ ಅಪಾಯದಲ್ಲಾದರೂ ಜೀವ ಉಳಿಸಿಕೊಂಡು ಬರಬಹುದು ಎನ್ನುವುದಕ್ಕೆ ಗದಗದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಬೈಕ್ ಮತ್ತು ಬಸ್ ನಡುವೆ ಸಿಕ್ಕಿ ಸಂಭವಿಸಿ ಬೈಕ್ ಬಸ್ಸಿನ ಅಡಿಗೆ ಬಿದ್ದಿದ್ದರೂ ಬೈಕ್ ಸವಾರರು ಮಾತ್ರ ಪವಾಡ ಸದೃಶ ರೀತಿಯಲ್ಲಿ ಬದುಕಿ ಮರುಜನ್ಮ ಪಡೆದಿದ್ದಾರೆ. ಕ್ಷಣ ಮಾತ್ರದಲ್ಲಿ ನಡೆದ ದುರಂತದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ.
ಗದಗ ನಗರದ ಭೀಷ್ಮ ಕೆರೆ ಪಕ್ಕದ ಬನ್ನಿಕಟ್ಟಿ ವೃತ್ತದಲ್ಲಿ ಭಾನುವಾರ ನಡೆದ ಘಟನೆ ಇದಾಗಿತ್ತು. ಶಿರಹಟ್ಟಿ ತಾಲೂಕಿನವರಾದ ಹಜರತ್ ಗೌಸಲಾಜುಮ್ ಮಜ್ಜೂರ (25) ಹಾಗೂ ಅಕ್ಬರ ಸಾಬ ಅಬ್ದುಲ್ ಸಾಬ ತಹಶೀಲ್ದಾರ (22) ಅವರೇ ಪವಾಡಸದೃಶ ರೀತಿಯಲ್ಲಿ ಬದುಕಿಬಂದವರು.
ಇಬ್ಬರೂ ವೃತ್ತಿಯಲ್ಲಿ ಮೆಕ್ಯಾನಿಕ್‌ಗಳಾಗಿದ್ದು, ಶಿರಹಟ್ಟಿಯಿಂದ ಬೈಕ್ ಸಾಮಗ್ರಿಗಳ ಖರೀದಿಗೆ ಗದಗ ನಗರಕ್ಕೆ ಬಂದಿದ್ದರು. ಈ ವೇಳೆ ನರಗುಂದ ಪಟ್ಟಣದಿಂದ ಗದಗ ಬಸ್ ನಿಲ್ದಾಣದತ್ತ ತೆರಳುತ್ತಿತ್ತು.
ಯುವಕರು ದತ್ತಾತ್ರೆಯ ರಸ್ತೆಯಿಂದ ಬನ್ನಿಕಟ್ಟಿ ವೃತ್ತದತ್ತ ಬೈಕ್‌ನಲ್ಲಿ ಏಕಾಏಕಿಯಾಗಿ ನುಗ್ಗಿದ್ದರು. ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಯುವಕರಿಬ್ಬರೂ ಬೈಕ್ ಸಮೇತ ಬಸ್‌ನ ಹಿಂಬದಿ ಚಕ್ರದಡಿಯಲ್ಲಿ ಸಿಲುಕಿದರು.
ಎಲ್ಲರೂ ಈ ಯುವಕರಿಬ್ಬರು ಚಕ್ರದಡಿ ಸಿಲುಕಿ ಪ್ರಾಣ ಕಳೆದುಕೊಂಡರು ಎಂದೇ ಭಾವಿಸಿದರು. ಆದರೆ, ಬಸ್ ಚಾಲಕ ಪ್ರದರ್ಶಿಸಿದ ಪ್ರಸಂಗಾವಧಾನತೆ ಮತ್ತು ಸಮಯಪ್ರಜ್ಞೆಯಿಂದ ದೊಡ್ಡದೊಂದು ಅನಾಹುತ ತಪ್ಪಿತು.
ಬಸ್ಸಿನಡಿಗೆ ಬಿದ್ದರೂ ಈ ಯುವಕರು ಚಕ್ರದಡಿಗೆ ಬೀಳುವ ಮುನ್ನ ಬಸ್ ಸಂಪೂರ್ಣವಾಗಿ ನಿಂತಿತ್ತು. ಸ್ಥಳೀಯರು ಕೂಡಲೇ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸೇರಿಸಿದರು.
ಗಾಯಾಳುಗಳಲ್ಲಿ ಒಬ್ಬನಾದ ಅಕ್ಬರಸಾಬ್ ತಹಶೀಲ್ದಾರ ತಲೆಗೆ ಗಂಭೀರ ಗಾಯವಾಗಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅಪಘಾತದ ಕುರಿತು ದೂರು ದಾಖಲಾಗಿಲ್ಲ. ಗದಗನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : Road Accident: ವೇಗವಾಗಿ ಚಲಿಸುತ್ತಿದ್ದಾಗಲೇ ಸಿಡಿದ ಸ್ಕೂಟರ್ ಟಯರ್: ಟೆಕ್ಕಿ ಮಹಿಳೆ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ