ಮಂಡ್ಯ/ಮೈಸೂರು: ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಸಂಭವಿಸಿದ ಎರಡು ಅಪಘಾತಗಳಲ್ಲಿ (Road accident) ಇಬ್ಬರು ಎಳನೀರು ವ್ಯಾಪಾರಿಗಳು ಸೇರಿದಂತೆ ಮೂವರು ಬೈಕ್ ಸವಾರರು (Three bike riders) ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಡ್ಯದ ಹಿರೀಕಳಲೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರ ಮೃತಪಟ್ಟರೆ, ಮೈಸೂರಿನ ಇಂಡವಾಳು ಬಳಿ ಇನ್ನೊಬ್ಬ ಯುವಕ ಸಾವನ್ನಪ್ಪಿದ್ದಾರೆ.
ಮಂಡ್ಯದ ಹಿರೀಕಳಲೆ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಹಿರೀಕಳಲೆ ಗ್ರಾಮದ ಸಂದೇಶ್ (28) ಮತ್ತು ಮರಡಹಳ್ಳಿಯ ಭರತ್ (29) ದಾರುಣವಾಗಿ ಮೃತಪಟ್ಟಿದ್ದಾರೆ.
ಎಳನೀರು ವ್ಯಾಪಾರ ಮಾಡಿ ಬದುಕು ಸಾಗಿಸುತ್ತಿದ್ದ ಯುವಕರು ಕೆ.ಆರ್.ಪೇಟೆ ಕಡೆಯಿಂದ ಊರಿಗೆ ಹೋಗುವಾಗ ಅವರ ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ನಿಲ್ಲಿಸದೆ ಪರಾರಿಯಾಗಿದೆ.
ಕಾರು- ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸಾವು
ಮೈಸೂರು – ತಿ.ನರಸೀಪುರ ಮುಖ್ಯರಸ್ತೆಯ ಇಂಡವಾಳು ಗ್ರಾಮದ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊಳ್ಳೇಗಾಲದ ನಿವಾಸಿ ಲಲಿತ್ ಗುಜರ್ (22) ಮೃತಪಟ್ಟಿದ್ದಾರೆ. ಇವರು ಬೈಕ್‌ನಲ್ಲಿ ಸಾಗುತ್ತಿದ್ದಾಗ ದುರಂತ ಸಂಭವಿಸಿದ್ದು, ಹಿಂಬದಿ ಬೈಕ್ ಸವಾರ ಪಂಕಜ್ ಗುಜರ್ ಗೆ ಗಂಭೀರ ಗಾಯಗಳಾಗಿವೆ.
ಇವರಿಬ್ಬರೂ ಕೊಳ್ಳೇಗಾಲದಿಂದ ಮೈಸೂರಿಗೆ ಸಂಬಂಧಿಕರ ಮನೆಗೆ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಲಲಿತ್ ಗುಜರ್ ಅವರನ್ನು ತಿ. ನರಸೀಪುರ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಬದುಕುಳಿಯಲಿಲ್ಲ. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಹಳೆ ವೈಷಮ್ಯ ಹಿನ್ನೆಲೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಮೈಸೂರು ಜಿಲ್ಲೆ ತಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ತಾಲೂಕಿನ ಬನ್ನಳ್ಳಿಹುಂಡಿ ಗ್ರಾಮದ ನಿವಾಸಿಯಾಗಿರುವ ಚೇತನ್ (28) ಹಲ್ಲೆಗೊಳಗಾದ ಯುವಕ. ಪ್ರಭು, ಅರುಣ್, ಮನು, ಮಧು, ಬಾಲು ಎಂಬವರಿಂದ ಹಲ್ಲೆ ನಡೆದಿದೆ ಎಂದು ದೂರಲಾಗಿದೆ.
ಈ ಹಿಂದೆ ಪ್ರಭು ಹಾಗೂ ಚೇತನ್ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಮನಸ್ಸಿನಲ್ಲಿಟ್ಟುಕೊಂಡಿದ್ದ ಪ್ರಭು ತನ್ನ ಸ್ನೇಹಿತರ ಜತೆ ಸೇರಿ ಚೇತನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಯುವಕ ಚೇತನ್ ಅವರನ್ನು ತಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹಲ್ಲೆಗೊಳಗಾದ ಯುವಕ ಚೇತನ್ ನೀಡಿರುವ ಹೇಳಿಕೆಯ ಮೇಲೆ ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Hit And Run: ಕುಡಿದ ಮತ್ತಲ್ಲಿ ಹಿಟ್ ಆ್ಯಂಡ್ ರನ್; ಬೈಕ್ ಸವಾರ ಬಿದ್ದು ಸತ್ತರೂ ನೋಡದೆ ಹೋದ ಕಾರು ಚಾಲಕ