Site icon Vistara News

Road accident : ಸ್ಟೇರಿಂಗ್‌ ರಾಡ್‌ ತುಂಡಾಗಿ ಗದ್ದೆಗೆ ನುಗ್ಗಿದ ಕೆಎಸ್ಸಾರ್ಟಿಸಿ ಬಸ್‌; ಬಸ್‌ನಲ್ಲಿದವರಿಗೆ ಏನಾಯಿತು?

Bus accident mandya

#image_title

ಮಂಡ್ಯ: ರಸ್ತೆಯಲ್ಲಿ ಓಡುತ್ತಿದ್ದ ಬಸ್‌ ಒಮ್ಮಿಂದೊಮ್ಮೆಗೇ ಸ್ಟೇರಿಂಗ್‌ ರಾಡ್‌ ತುಂಡಾಗಿ ನೇರವಾಗಿ ಗದ್ದೆಗೆ ನುಗ್ಗಿದ ಘಟನೆ ಸೋಮವಾರ ಬೆಳಗ್ಗೆ (Road accident) ಮಂಡ್ಯ ಜಿಲ್ಲೆಯ ಕನಗನಮರಡಿ ಬಳಿ ನಡೆದಿದೆ.

ಪಾಂಡವಪುರದಿಂದ ಹಳ್ಳಿ ಕಡೆಗೆ ತೆರಳುತ್ತಿದ್ದ ಬಸ್‌ ಇದಾಗಿದ್ದು ಮಹಿಳೆಯರು, ಮಕ್ಕಳು ಸೇರಿದಂತೆ ಬಹುತೇಕ ತುಂಬಿತ್ತು. ಬಸ್‌ ಕನಗನಮರಡಿ ಬಳಿ ಬರುತ್ತಿದ್ದಂತೆಯೇ ಒಮ್ಮಿಂದೊಮ್ಮೆಗೇ ಸ್ಟೇರಿಂಗ್ ರಾಡ್ ತುಂಡಾಯಿತು.

ನಿಯಂತ್ರಣ ತಪ್ಪಿದ ಬಸ್‌ ಮೊದಲು ರಸ್ತೆ ಬದಿ ತೆರಳುತ್ತಿದ್ದ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಬಳಿಕ ಅದು ರಸ್ತೆ ಪಕ್ಕದ ಜಮೀನಿಗೆ ಏಕಾಏಕಿ ನುಗ್ಗಿದೆ. ಗದ್ದೆಗೆ ಇಳಿದ ಕಾರಣ ಅದು ಮುಂದೆ ಸಾಗದೆ ಅಲ್ಲೇ ನಿಂತುಬಿಟ್ಟಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರು ಏನಾಗುತ್ತಿದೆ ಎಂದು ತಿಳಿಯುವ ಹೊತ್ತಿಗೆ ಬಸ್‌ ಗದ್ದೆಗೆ ಇಳಿದಾಗಿತ್ತು. ಅವರೆಲ್ಲರೂ ಪವಾಡ ಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ.

ಗದಗ: ಬಸ್ಸಿನ ಚಕ್ರದಡಿ‌ ಸಿಲುಕಿದರೂ ಬದುಕಿ ಬಂದ ಸವಾರರು!

ಗದಗ: ದೇವರು ಆಯುಷ್ಯ ಒಂದು ಬರೆದಿದ್ದರೆ ಎಂಥ ಅಪಾಯದಲ್ಲಾದರೂ ಜೀವ ಉಳಿಸಿಕೊಂಡು ಬರಬಹುದು ಎನ್ನುವುದಕ್ಕೆ ಗದಗದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಬೈಕ್‌ ಮತ್ತು ಬಸ್‌ ನಡುವೆ ಸಿಕ್ಕಿ ಸಂಭವಿಸಿ ಬೈಕ್‌ ಬಸ್ಸಿನ ಅಡಿಗೆ ಬಿದ್ದಿದ್ದರೂ ಬೈಕ್‌ ಸವಾರರು ಮಾತ್ರ ಪವಾಡ ಸದೃಶ ರೀತಿಯಲ್ಲಿ ಬದುಕಿ ಮರುಜನ್ಮ ಪಡೆದಿದ್ದಾರೆ. ಕ್ಷಣ ಮಾತ್ರದಲ್ಲಿ ನಡೆದ ದುರಂತದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ.

ಗದಗ ನಗರದ ಭೀಷ್ಮ ಕೆರೆ‌ ಪಕ್ಕದ ಬನ್ನಿಕಟ್ಟಿ ವೃತ್ತದಲ್ಲಿ ಭಾನುವಾರ ನಡೆದ ಘಟನೆ‌ ಇದಾಗಿತ್ತು. ಶಿರಹಟ್ಟಿ ತಾಲೂಕಿನವರಾದ ಹಜರತ್ ಗೌಸಲಾಜುಮ್ ಮಜ್ಜೂರ (25) ಹಾಗೂ ಅಕ್ಬರ ಸಾಬ ಅಬ್ದುಲ್ ಸಾಬ ತಹಶೀಲ್ದಾರ (22) ಅವರೇ ಪವಾಡಸದೃಶ ರೀತಿಯಲ್ಲಿ ಬದುಕಿಬಂದವರು.

ಇಬ್ಬರೂ ವೃತ್ತಿಯಲ್ಲಿ ಮೆಕ್ಯಾನಿಕ್‌ಗಳಾಗಿದ್ದು, ಶಿರಹಟ್ಟಿಯಿಂದ ಬೈಕ್ ಸಾಮಗ್ರಿಗಳ ಖರೀದಿಗೆ ಗದಗ ನಗರಕ್ಕೆ ಬಂದಿದ್ದರು. ಈ ವೇಳೆ ನರಗುಂದ ಪಟ್ಟಣದಿಂದ ಗದಗ ಬಸ್ ನಿಲ್ದಾಣದತ್ತ ತೆರಳುತ್ತಿತ್ತು.

ಯುವಕರು ದತ್ತಾತ್ರೆಯ ರಸ್ತೆಯಿಂದ ಬನ್ನಿಕಟ್ಟಿ ವೃತ್ತದತ್ತ ಬೈಕ್‌ನಲ್ಲಿ ಏಕಾಏಕಿಯಾಗಿ ನುಗ್ಗಿದ್ದರು. ಬಸ್‌ ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಯುವಕರಿಬ್ಬರೂ ಬೈಕ್ ಸಮೇತ ಬಸ್‌ನ ಹಿಂಬದಿ‌ ಚಕ್ರದಡಿಯಲ್ಲಿ‌ ಸಿಲುಕಿದರು.

ಎಲ್ಲರೂ ಈ ಯುವಕರಿಬ್ಬರು ಚಕ್ರದಡಿ ಸಿಲುಕಿ ಪ್ರಾಣ ಕಳೆದುಕೊಂಡರು ಎಂದೇ ಭಾವಿಸಿದರು. ಆದರೆ, ಬಸ್‌ ಚಾಲಕ ಪ್ರದರ್ಶಿಸಿದ ಪ್ರಸಂಗಾವಧಾನತೆ ಮತ್ತು ಸಮಯಪ್ರಜ್ಞೆಯಿಂದ ದೊಡ್ಡದೊಂದು ಅನಾಹುತ ತಪ್ಪಿತು.

ಬಸ್ಸಿನಡಿಗೆ ಬಿದ್ದರೂ ಈ ಯುವಕರು ಚಕ್ರದಡಿಗೆ ಬೀಳುವ ಮುನ್ನ ಬಸ್‌ ಸಂಪೂರ್ಣವಾಗಿ ನಿಂತಿತ್ತು. ಸ್ಥಳೀಯರು ಕೂಡಲೇ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸೇರಿಸಿದರು.

ಗಾಯಾಳುಗಳಲ್ಲಿ ಒಬ್ಬನಾದ ಅಕ್ಬರಸಾಬ್ ತಹಶೀಲ್ದಾರ ತಲೆಗೆ ಗಂಭೀರ ಗಾಯವಾಗಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ‌ ಅಪಘಾತದ ಕುರಿತು ದೂರು ದಾಖಲಾಗಿಲ್ಲ. ಗದಗನ ಸಂಚಾರಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : Road Accident: ನಾಯಂಡಹಳ್ಳಿ ಬಳಿ ಭೀಕರ ಅಪಘಾತಕ್ಕೆ ಮಹಿಳೆ ತಲೆ ಛಿದ್ರ; ರೊಚ್ಚಿಗೆದ್ದ ಸಾರ್ವಜನಿಕರಿಂದ ಕಲ್ಲು ತೂರಾಟ

Exit mobile version