ಬೆಳಗಾವಿ: ಟಿಪ್ಪರ್ ಹಾಗೂ ಕಾಲೇಜು ಬಸ್ ಡಿಕ್ಕಿಯಾಗಿ (Road Accident) ಪ್ರವಾಸಕ್ಕೆ ಬಂದಿದ್ದ ಸುಮಾರು 40ಕ್ಕೂ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಭೂತರಾಮನಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ. ಕೊಲ್ಹಾಪುರದಿಂದ ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದಾಗ ಅಪಘಾತ ನಡೆದಿದೆ.
ರಾಣಿ ಚೆನ್ನಮ್ಮ ಮಿನಿ ಜೂಗೆ ಪ್ರವಾಸಕ್ಕೆಂದು ವಿದ್ಯಾರ್ಥಿಗಳು ಬಂದಿದ್ದರು. ಜೂ ನೋಡಿ ವಾಪಸಾಗುವ ವೇಳೆ ಹೆದ್ದಾರಿಯಲ್ಲಿ ಕಾಲೇಜು ಬಸ್ ಯು ಟರ್ನ್ ಮಾಡುವಾಗ ಟಿಪ್ಪರ್ ಡಿಕ್ಕಿಯಾಗಿದೆ. ಇದರಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
ರಾಯಚೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. 2021 ರಲ್ಲಿ ರಾಯಚೂರಿನ ಲಿಂಗಸುಗೂರು ತಾಲೂಕಿನಲ್ಲಿ ಘಟನೆ ನಡೆದಿತ್ತು.
ಲಿಂಗಸುಗೂರು ತಾಲೂಕಿನ ನೀರಲಕೆರೆಯ ಹುಲ್ಲಪ್ಪ ಶಿಕ್ಷೆಗೊಳಗಾದ ಆರೋಪಿ. ಆರೋಪಿ ಮೇಲಿನ ಆಪಾದನೆ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟವಾಗಿದೆ. 20 ವರ್ಷ ಕಠಿಣ ಜೈಲು ಶಿಕ್ಷೆ, 15 ಸಾವಿರ ರೂಪಾಯಿ ದಂಡ ವಿಧಿಸಿ ಲಿಂಗಸುಗೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ಪೋಕ್ಸೊ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಇದನ್ನೂ ಓದಿ | Bagalkot News: ಬುರ್ಕಾ ಧರಿಸಿ ಓಡಾಡ್ತಿದ್ದ ವ್ಯಕ್ತಿಗೆ ಮಹಿಳೆಯರಿಂದ ಚಪ್ಪಲಿ ಏಟು!
ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ 9 ಲಕ್ಷ ರೂ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಡೊ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ಪ್ರಕಟವಾಗಿದೆ.
ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆಸುತ್ತು; ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಬಸ್
ಗದಗ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆ ಸುತ್ತು ಬಂದಿದ್ದು, ನಿಯಂತ್ರಣ ತಪ್ಪಿ ರಸ್ತೆಯಿಂದ ಜಮೀನಿಗೆ ಬಸ್‌ಗೆ ನುಗ್ಗಿದ (Bus Accident) ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಟೋಲ್ ಗೇಟ್ ಬಳಿ ಘಟನೆ ನಡೆದಿದೆ.
ಸಾರಿಗೆ ಸಂಸ್ಥೆಯ ಬಸ್‌ವೊಂದು ಮುಂಡರಗಿ ಪಟ್ಟಣದಿಂದ ಹಮ್ಮಿಗಿ ಗ್ರಾಮಕ್ಕೆ ತೆರಳುತ್ತಿತ್ತು. ಸುಮಾರು 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನಿಗೆ ತಲೆ ಸುತ್ತು ಬಂದಿದೆ. ನೋಡ ನೋಡುತ್ತಿದ್ದಂತೆ ರಸ್ತೆ ಬದಿ ಜಮೀನಿಗೆ ಬಸ್ ನುಗ್ಗಿದೆ.
ಇದನ್ನೂ ಓದಿ: Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು
ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ. ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಮೀನಿಗೆ ಬಿದ್ದಿದ್ದ ಬಸ್ ಅನ್ನು ತೆರವು ಮಾಡಲಾಗಿದೆ.