ಮೈಸೂರು/ಮಂಡ್ಯ/ಚಿಕ್ಕಬಳ್ಳಾಪುರ: ಮೈಸೂರಿನ ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ನಡೆದಿದ್ದು, ಸಾವು-ನೋವಿಗೆ ಕಾರಣವಾಗಿದೆ. ಮೈಸೂರು ಪೊಲೀಸ್ ಬಡಾವಣೆ ರಿಂಗ್ ರೋಡ್ ಬಳಿ ಬೈಕ್ ಹಾಗೂ ಬುಲೆರೋ ವಾಹನ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಅಪಘಾತದ ನಂತರ ಬುಲೆರೋ ವಾಹನದ ಚಾಲಕ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿದ್ದಾರ್ಥ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಸಿದ್ದಾರ್ಥ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Murder Case : ಪತ್ನಿಯನ್ನೇ ಕೊಂದು ಶವವನ್ನು ಹೂತಿಟ್ಟ; ನಾಯಿಗಳಿಂದ ಸಿಕ್ಕಿಬಿದ್ದ ಕಿರಾತಕ ಪತಿ!
ಬಸ್ಸಿನ ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾದ ಬೈಕ್
ಮೈಸೂರು- ತಿ.ನರಸೀಪುರ ರಸ್ತೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬೈಕ್‌ಗೆ ಕೆಎಸ್ಆರ್‌ಟಿಸಿ ಬಸ್‌ವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಸ್ಸಿನ ಚಕ್ರಕ್ಕೆ ಬೈಕ್ ಸಿಲುಕಿ ನಜ್ಜುಗುಜ್ಜಾಗಿದೆ. ಪ್ರಾಣಾಪಾಯದಿಂದ ಬೈಕ್ ಸವಾರ ಪಾರಾಗಿದ್ದಾರೆ. ಮೈಸೂರು ತಾಲೂಕಿನ ಚಿಕ್ಕಹಳ್ಳಿ ಬಳಿ ಘಟನೆ ನಡೆದಿದೆ. ತಿ.ನರಸೀಪುರ ರಸ್ತೆ ರಿಪೇರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ದಿನೇದಿನೆ ಅಪಘಾತಗಳು ಹೆಚ್ಚಾಗುತ್ತಿವೆ.
ನಿಂತಿದ್ದ ಬಸ್‌ಗೆ ಬುಲೆರೋ ಡಿಕ್ಕಿ; ಮೂವರು ಗಂಭೀರ
ನಿಂತಿದ್ದ ಬಸ್‌ಗೆ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿದೆ. ರಾಮನಗರದ ಚನ್ನಪಟ್ಟಣ ಷೇರು ಹೋಟೆಲ್ ವೃತ್ತದ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಬುಲೆರೋ ಹೋಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಬುಲೆರೋ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮಂಡ್ಯ ಮೂಲದ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಕೆಎಸ್ಆರ್‌ಟಿಸಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಹೊಲಕ್ಕೆ ನುಗ್ಗಿದ ಘಟನೆ ನಡೆದಿದೆ. ಮೂವರಿಗೆ ಗಂಭೀರವಾಗಿದ್ದು, 12ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಗೇಪಲ್ಲಿಯಿಂದ ಗುಡಿಬಂಡೆಗೆ ಬರುತ್ತಿದ್ದಾಗ ಓವರ್ ಟೆಕ್ ಮಾಡಲು ಹೋಗಿ ಬಸ್ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲದೊಳಗೆ ನುಗ್ಗಿದೆ. ಬಸ್ ಚಾಲಕ, ನಿರ್ವಾಹಕ ಸೇರಿದಂತೆ ಹಲವು ಪ್ರಯಾಣಿಕರಿಗೆ ಗಾಯವಾಗಿದೆ. ಗಾಯಾಳುಗಳನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ