ಕೊಪ್ಪಳ: ಹದಗೆಟ್ಟ ರಸ್ತೆಯ (Road Problem) ಪರಿಚಯ ಮಾಡಿಸುವ ಸಂಬಂಧ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಈ ಹಳ್ಳಿಗರು ಕ್ಷೇತ್ರದ ಶಾಸಕರನ್ನು ಸುಮಾರು ಅರ್ಧ ಕಿ.ಮೀ. ದೂರ ನಡೆಸಿಕೊಂಡೇ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಮ್ಮ ಗ್ರಾಮಕ್ಕೆ ಏನು ಕೊಟ್ಟಿದ್ದೀರಿ ಎಂದೂ ಪ್ರಶ್ನೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಚಳ್ಳೂರು ಹಾಗೂ ಚಳ್ಳೂರು ಕ್ಯಾಂಪ್‌ನ ಗ್ರಾಮಸ್ಥರು ಶುಕ್ರವಾರ ಅಕ್ಷರಶಃ ರೋಷಗೊಂಡಿದ್ದರು. ಹದಗೆಟ್ಟ ರಸ್ತೆ ಕಂಡು ಬೇಸತ್ತು ಹೋಗಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಬಹುದಿನಗಳ ನಂತರ ಗ್ರಾಮಕ್ಕೆ ಶಾಸಕ ಬಸವರಾಜ್ ದಡೇಸೂಗೂರ್ ಭೇಟಿ ನೀಡಿದ್ದಾರೆ. ಆಗ ರಸ್ತೆ ಸಮಸ್ಯೆ ಸೇರಿದಂತೆ ಇನ್ನಿತರ ತೊಂದರೆಗಳ ಬಗ್ಗೆ ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಶಾಸಕರು ಮೊದಲು ನಿರ್ಲಕ್ಷ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ. ರಸ್ತೆ ಬೇಕೇ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಶಾಸಕರಿಗೆ ರಸ್ತೆ ಮಧ್ಯೆಯೇ ತರಾಟೆ
ನಮ್ಮ ಗ್ರಾಮದ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿವೆ. ನೀವು ನಮ್ಮ ಗ್ರಾಮಕ್ಕಾಗಿ ಏನು ಮಾಡಿದ್ದೀರಿ? ಎಂದು ಶಾಸಕರನ್ನು ಗ್ರಾಮಸ್ಥರು ರಸ್ತೆ ಮಧ್ಯೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ನೀವು ರಸ್ತೆ ಮಾಡಿಸಿಕೊಡಲೇಬೇಕು. ಎಷ್ಟು ಹಾಳಾಗಿದೆ ಎಂಬುದು ನಿಮಗೇನು ಗೊತ್ತು ಎಂದು ಕೇಳಿದ್ದಾರೆ. ಇದಕ್ಕೆ ಶಾಸಕರು, ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಟೆಂಡರ್ ಕರೆಯಬೇಕು ಎಂದು ಹೇಳಿದರೂ ಪಟ್ಟುಬಿಡದ ಗ್ರಾಮಸ್ಥರು. ನೀವು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ನಮಗೆ ಸೌಕರ್ಯ ಸಿಕ್ಕಿಲ್ಲ. ನೀವೇ ಈಗ ಹದಗೆಟ್ಟ ರಸ್ತೆಯಲ್ಲಿ ನಡೆಯಿರಿ. ಆಗ ನಿಮಗೇ ತಿಳಿಯುತ್ತದೆ ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಗ್ರಾಮದ ಜನರು ಆಕ್ರೋಶಗೊಂಡಿದ್ದರಿಂದ ಶಾಸಕ ಬಸವರಾಜ್ ಅನಿವಾರ್ಯವಾಗಿ ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ.ನಷ್ಟು ದೂರ ಗ್ರಾಮಸ್ಥರೊಂದಿಗೆ ಕ್ರಮಿಸಿದ್ದಾರೆ. ಇದೇ ವೇಳೆ ಶಾಲಾ ಮಕ್ಕಳೂ ಶಾಸಕರ ಜತೆ ಹೆಜ್ಜೆ ಹಾಕಿದ್ದಾರೆ. ಈ ಎಲ್ಲ ಪ್ರಹಸನಗಳ ವಿಡಿಯೊವನ್ನು ಸ್ಥಳೀಯರು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ | ಕೊಪ್ಪಳದಲ್ಲಿ ಮೊದಲ ತ್ರಿವಳಿ ತಲಾಕ್ ಪ್ರಕರಣ ದಾಖಲು; ಪತಿಯಿಂದ ಜೀವ ಬೆದರಿಕೆ