ಮಳವಳ್ಳಿ: ಅವೈಜ್ಞಾನಿಕ ಕಾಮಗಾರಿಗಳು ತೊಂದರೆ ಕೊಡುವುದರ ಜತೆಗೆ ದುರಸ್ತಿ ಕಾಮಗಾರಿಗಳು ಸಹ ಭಾರಿ ಸಮಸ್ಯೆಯನ್ನುಂಟು ಮಾಡುತ್ತಿದೆ. ಇಂಥದ್ದೊಂದು ಸಮಸ್ಯೆಗೆ ನಗರದ ಜನತೆ ತುತ್ತಾಗಿದ್ದು, ರಾಜ ಕಾಲುವೆಯನ್ನು ದುರಸ್ತಿಗಾಗಿ ಓಪನ್ ಮಾಡಿ 15 ದಿನ ಕಳೆದರೂ ಮುಚ್ಚುವ ಕೆಲಸ ಆಗಿಲ್ಲ. ಸಾರ್ವಜನಿಕ ಸಂಚಾರಕ್ಕೆ (Road Problem) ರಸ್ತೆ ಸಿಗುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಹೃದಯ ಭಾಗದ ಅನಂತರಾಮ್ ವೃತ್ತದಲ್ಲಿ ರಾಜ ಕಾಲುವೆ ಹಾದುಹೋಗಿದ್ದು, ಮಳೆಗಾಲದಲ್ಲಿ ತ್ಯಾಜ್ಯ ನೀರೆಲ್ಲವೂ ತುಂಬಿ ಅಕ್ಕಪಕ್ಕದ ಅಂಗಡಿಗಳಿಗೆ, ಮನಗಳಿಗೆ ನುಗ್ಗುತ್ತಿದೆ. ಈ ಸಂಬಂಧ ದೂರಿದ್ದಕ್ಕೆ ಬಂದ ಅಧಿಕಾರಿಗಳು ಚರಂಡಿಯ ಸ್ಲ್ಯಾಬ್ ಅನ್ನು ಕಿತ್ತು ಹೋಗಿದ್ದರು. ಬಳಿಕ ಕಣ್ಣೊರೆಸುವ ತಂತ್ರದಂತೆ ಅಲ್ಪ ಕೆಲಸ ಮಾಡಿ ಹಾಗೆಯೇ ಬಿಟ್ಟು ಹೋಗಲಾಗಿದ್ದು, ೧೫ ದಿನವಾದರೂ ಇತ್ತ ಸುಳಿವಿಲ್ಲದಂತಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರು, ಮಾಜಿ ಶಾಸಕರು ಹಾಗೂ ಪುರಸಭೆ ಅಧ್ಯಕ್ಷರು ಸೇರಿದಂತೆ ನಾಗರಿಕರು ದಿನನಿತ್ಯ ಈ ರಸ್ತೆ ಮಾರ್ಗದಲ್ಲಿಯೇ ಸಂಚಾರ ಮಾಡುತ್ತಾರೆ. ಅವರಿಗೆ ಇದು ದಿನವೂ ಕಂಡು ರಸ್ತೆ ಬದಲಿಸಿ ಹೋಗುತ್ತಿದ್ದಾರೆಯೇ ವಿನಃ ಇತ್ತ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ.
ಇದನ್ನೂ ಓದಿ | Chess Prodigy | ಎದುರಾಳಿಯೇ ಇಲ್ಲ ಎಂದು ಎದೆ ತಟ್ಟಿಕೊಂಡವನ ಹಣೆಯ ಮೇಲೆ ಸೋಲಿನ ಷರಾ ಬರೆದ ಬಾಲಕ!
ವ್ಯಾಪಾರಕ್ಕೆ ಅನನುಕೂಲ
ಇತ್ತೀಚೆಗೆ ಸುರಿದ ಬಾರಿ ಮಳೆಯಲ್ಲಿ ರಸ್ತೆ ತುಂಬಾ ಮಳೆ ನೀರು ತುಂಬಿಕೊಂಡು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ವರ್ತಕರಿಗೆ ವ್ಯಾಪಾರಕ್ಕೆ ಕಷ್ಟವಾಗಿತ್ತು. ಈ ಬಗ್ಗೆ ದೂರು ನೀಡಿದ್ದರಿಂದ ಬಂದ ಪುರಸಭೆ ಸಿಬ್ಬಂದಿ ರಸ್ತೆ ಮಧ್ಯೆದಲ್ಲಿ ಮಧ್ಯದಲ್ಲಿ ಇದ್ದಂತ ಕಾಂಕ್ರಿಟ್ ಸ್ಲ್ಯಾಬ್ ಅನ್ನು ಅರ್ಧ ಭಾಗ ತೆರವುಗೊಳಿಸಿದ್ದರು.
ಸುಮಾರು 15 ದಿನವಾದರೂ ಇದರ ಬಗ್ಗೆ ಪುರಸಭೆ ಆಡಳಿತವಾಗಲಿ ಹಾಗೂ ಕೆಎಸ್‌ಎಚ್‌ಡಿಎ ಆಗಲೀ ಇದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನ ಕೊಡುತ್ತಿಲ್ಲ. ಇದರಿಂದಾಗಿ ದಿನನಿತ್ಯ ವಾಹನಗಳ ಸಂಚಾರ, ಶಾಲೆ-ಕಾಲೇಜು ಮಕ್ಕಳಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ವಾಹನ ದಟ್ಟಣೆಯುಂಟಾಗುತ್ತಿದೆ. ಆದರೂ, ಕ್ರಮವಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು, ಪುರಸಭೆ ಮತ್ತು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಅಥಾರಿಟಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
(ಚಿತ್ರ-ವರದಿ: ಸಂಜಯ್ ಬಾಬು)
________
ಪ್ರಿಯ ಓದುಗರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ, ನಾಗರಿಕ ಸಮಸ್ಯೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಳ್ಳಲು ‘ವಿಸ್ತಾರʼದಲ್ಲಿ ನಿಮಗೆ ಮುಕ್ತ ಅವಕಾಶ ಇದೆ. ಸಾಂದರ್ಭಿಕ ಲೇಖನಗಳನ್ನೂ ನೀವು ಬರೆದು ಕಳುಹಿಸಬಹುದು. ಬರಹದ ಜತೆ ನಿಮ್ಮದೊಂದು ಫೋಟೊ ಕೂಡ ಇರಲಿ.
ನಮ್ಮ ಇಮೇಲ್ ವಿಳಾಸ: janasamparka@vistaranews.com