ಮೈಸೂರು: ಮೇಡಂ ಪಾರ್ಸೆಲ್ ಬಂದಿದೆ ಎಂದು ಮನೆ ಬಾಗಿಲಿನ ಮುಂದೆ ನಿಲ್ಲುವ ಹಗಲು ದರೋಡೆಕೋರರು, ಕ್ಷಣಾರ್ಧದಲ್ಲಿಯೇ ದಾಳಿ ಮಾಡಿ ಬೆಲೆಬಾಳುವ ಎಲ್ಲ ವಸ್ತುಗಳನ್ನು ಕದ್ದು ಪರಾರಿಯಾಗುತ್ತಾರೆ. ಇಂಥದ್ದೊಂದು ದರೋಡೆ ಪ್ರಕರಣ (Robbery Case) ನಂಜನಗೂಡಿನ ರಾಮಸ್ವಾಮಿ ಲೇಔಟ್‌ನ ಒಂದನೇ ಬ್ಲಾಕ್‌ನಲ್ಲಿ ನಡೆದಿದ್ದು, ಮನೆಯೊಡತಿಯನ್ನು ಥಳಿಸಿ ದೋಚಿದ್ದಾರೆ.
ಪಾರ್ಸೆಲ್ ಬಾಕ್ಸ್‌ವೊಂದನ್ನು ಹಿಡಿದು ಮನೆಗೆ ಬಂದ ಆಸಾಮಿಗಳು, “ಮೇಡಮ್ ಪಾರ್ಸೆಲ್ ಬಂದಿದೆ..” ಎಂದು ಕೂಗಿದ್ದಾರೆ. ಯಾವುದೋ ಪಾರ್ಸೆಲ್ ಬಂದಿರಬೇಕು ಎಂದು ನಂಬಿದ ಮನೆಯೊಡತಿ ಬಾಗಿಲು ತೆರೆದಿದ್ದಾರೆ. ಆಗ ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ಗಾಬರಿಗೊಂಡ ಮಹಿಳೆ, “ನೀವೆಲ್ಲ ಯಾರು..?” ಎಂದು ಕಿರುಚಲು ನೋಡಿದ್ದಾರೆ. ಆದರೆ, ಅದಾವುದಕ್ಕೂ ಸಮಯಾವಕಾಶವನ್ನು ಕೊಡದ ದರೋಡೆಕೋರರು, ಮಹಿಳೆಯನ್ನು ಬೆದರಿಸಿದ್ದಲ್ಲದೆ, ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿದ್ದಾರೆ.
ಮೈಮೇಲಿದ್ದ ಚಿನ್ನ ಕದ್ದರು
ಮಹಿಳೆಯನ್ನು ಕಟ್ಟಿಹಾಕಿದ ಬಳಿಕ ಅವರ ಮೈಮೇಲಿದ್ದ ಮಾಂಗಲ್ಯ ಸರ, ಬಳೆ, ಉಂಗುರವನ್ನು ಕಿತ್ತುಕೊಂಡಿದ್ದಾರೆ. ಬಳಿಕ ರೂಮಿನೊಳಗೆ ಹೋಗಿ ಬೀರುವಿನಲ್ಲಿದ್ದ ಮತ್ತೊಂದು ಜತೆ ಕೈ ಬಳೆ, ನೆಕ್ಲೆಸ್, ಬೈತಲೆಸರ ಸೇರಿ ಒಟ್ಟು 175 ಗ್ರಾಂಗಳಿಗೂ ಹೆಚ್ಚು ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಎಂಬುವವರೇ ಚಿನ್ನ ಕಳೆದುಕೊಂಡವರು. ಪತಿ ಶಿಕ್ಷಕರಾಗಿದ್ದು, ಅವರು ಕೆಲಸಕ್ಕೆ ಹೋಗಿದ್ದರು. ಇದೇ ಸಮಯವನ್ನು ಬಳಸಿಕೊಂಡ ದರೋಡೆಕೋರರು ಬೆಳಗ್ಗೆ 8.30ರ ಸಮಯದಲ್ಲಿ ಮಹಿಳೆ ಒಬ್ಬರೇ ಮನೆಯಲ್ಲಿದ್ದಾರೆಂಬುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದಾರೆ.
ಮೂರು ಮಂದಿ ಇದ್ದ ಗುಂಪಿನಲ್ಲಿ ಕನ್ನಡ, ತಮಿಳು, ಹಿಂದಿ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ಗಲಾಟೆ ಮಾಡಿದರೆ ಅತ್ಯಾಚಾರ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.
ವಿಷಯ ತಿಳಿದು ನಂಜನಗೂಡು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಶಿವಾನಂಜ ಶೆಟ್ಟಿ ಎಎಸ್ಐ ಚೇತನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Mandya Robbery | ಗನ್ ತೋರಿಸಿದ ದರೋಡೆಕೋರರು; ಸಿನಿಮಾ ಸ್ಟೈಲ್‌ನಲ್ಲಿ ಬಗ್ಗುಬಡಿದ ಗ್ರಾಮಸ್ಥರು