Site icon Vistara News

Robbery Case | ರಾಷ್ಟ್ರಪತಿ ಪದಕ ಕಳ್ಳತನ; ಅರ್ಧ ವರ್ಷ ಕಳೆದರೂ ಸಿಗದ ಕಳ್ಳ

Robbery Case

ಬೆಂಗಳೂರು: ವರ್ಷಗಳ ಕಾಲ ಸಾಧನೆ ಮಾಡಿ ಸಿಕ್ಕ ರಾಷ್ಟ್ರಪತಿ ಪದಕ ಕಳ್ಳತನಕ್ಕೀಡಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ಕೊಟ್ಟು, ಅಲೆದು ಅಲೆದು ಸುಸ್ತಾಗಿದ್ದರೂ ಕಳ್ಳ (Robbery Case) ಮಾತ್ರ ಇನ್ನೂ ಸಿಕ್ಕಿಲ್ಲ. ಈ ಪ್ರಕರಣವಾಗಿ ಆರು ತಿಂಗಳಾದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ.

ಇಲ್ಲಿನ ಕೋಣನಕುಂಟೆಯ ಸುಪ್ರಜಾನಗರ ನಿವಾಸಿಯಾಗಿರುವ ರಾಷ್ಟ್ರಪತಿ ಪದಕ ವಿಜೇತೆ ಹೇಮಾ ಶೇಖರ್ ಮನೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಹೇಮಾ ಶೇಖರ್‌ 2002 ಹಾಗೂ 2014ರಲ್ಲಿ ಕರಕುಶಲ ವಿಭಾಗದ ಬ್ಲಾಟಿಕ್, ಟೈ ಆ್ಯಂಡ್ ಡೈ ಕಲೆಯಲ್ಲಿ “ಶಿಲ್ಪ ಗುರು ಅವಾರ್ಡ್‌” ರೂಪದಲ್ಲಿ ಚಿನ್ನದ ಪದಕ‌ವನ್ನು ಪಡೆದಿದ್ದರು. ಇದು ಅವರ ಜೀವಮಾನದ ಸಾಧನೆಯಾಗಿತ್ತು. ಹೀಗಾಗಿ ಬಹಳ ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿದ್ದರು.

ಶಿಲ್ಪ ಗುರು ಪ್ರಶಸ್ತಿ

ಕಳೆದ ಮಾರ್ಚ್ 6ರಂದು ಕೆಲಸದ ನಿಮಿತ್ತ ಮೈಸೂರಿಗೆ ಹೋಗಿದ್ದ ಹೇಮಾ, ಹತ್ತು ದಿನಗಳ ಬಳಿಕ ವಾಪಸಾಗಿದ್ದಾರೆ. ಮನೆಗೆ ಬಂದು ನೋಡಿದರೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಮನೆಯ ಬೀಗ ಒಡೆದು ಕಳ್ಳರು ಮನೆಯಲ್ಲಿದ್ದ 200 ಗ್ರಾಂ ಚಿನ್ನದ ಒಡವೆಗಳ ಜತೆಗೆ 22 ಗ್ರಾಂ ಚಿನ್ನದ ಪದಕವನ್ನು ಕದ್ದೊಯ್ದಿದ್ದಾರೆ.

ಬಳಿಕ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ ಹೇಮಾಗೆ, ಆ ಹತ್ತು ದಿನಗಳಲ್ಲಿ ಯಾವಾಗ ಕಳ್ಳತನವಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಇವೆಲ್ಲದರ ಮಧ್ಯೆ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರೂ ಯಾವುದೇ ಕುರುಹುಗಳನ್ನು ಕಳ್ಳರು ಬಿಟ್ಟು ಹೋಗಿರಲಿಲ್ಲ. ದುರದೃಷ್ಟ ಎಂಬಂತೆ ಅಕ್ಕ ಪಕ್ಕದ ಮನೆ, ಏರಿಯಾದಲ್ಲಿ ಯಾವುದೇ ಸಿಸಿ ಟಿವಿಗಳಿರಲಿಲ್ಲ. ಇದರಿಂದ ಪ್ರಕರಣದ ತನಿಖೆಗೆ ಹಿನ್ನಡೆಯಾಗಿತ್ತು.

ಸಿಎಂ- ಪಿಎಂಗೂ ಪತ್ರ ಬರೆದ ಹೇಮಾ

ಚಿನ್ನಾಭರಣ ಸಿಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪದಕ ತನಗೆ ಹುಡುಕಿಕೊಡಿ, ಅದು ನನಗೆ ಅಮೂಲ್ಯ ಎಂದು ಪೊಲೀಸರಿಗೆ ಮನವಿ ಮಾಡಿದ್ದರು. ಇದಕ್ಕಾಗಿ ಸಾಕಷ್ಟು ದಿನಗಳ ತನಕ ಕಾದು ಸೋತರು. ನಂತರ ಹೇಮಾ ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ‌, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಪ್ರಕರಣ ಆದಷ್ಟು ಬಯಲಿಗೆಳೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಒತ್ತಡ ಹೆಚ್ಚದಂತೆ ಪೊಲೀಸರಿಂದ ಇಲ್ಲಿಯವರೆಗೆ 250ಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ 10 ದಿನ ಯಾವ್ಯಾವ ಮೊಬೈಲ್ ಆ್ಯಕ್ಟಿವೇಟ್ ಆಗಿದೆ ಎಂದು ಟವರ್ ಡಂಪ್ ಅನ್ನೂ ತೆಗೆಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಕರಪತ್ರ ಹಂಚಿಕೆ

ಬೆಂಗಳೂರು ಸೇರಿದಂತೆ ಹಲವೆಡೆ ಪೊಲೀಸರು ಕರಪತ್ರ ಹಂಚಿದ್ದು, ಯಾವುದಾದರು ಚಿನ್ನದಂಗಡಿಗೆ ಪದಕ ಅಡ ಇಡಲು ಬಂದರೆ ತಿಳಿಸುವಂತೆ ಮನವಿಯನ್ನೂ ಮಾಡಿದ್ದಾರೆ. ಪದಕ ಕಳ್ಳರು ಪ್ರೊಫೆಷನಲ್ ಆಗಿದ್ದಾರೆಂಬುದು ಈ ಕೃತ್ಯದಿಂದ ಗೊತ್ತಾಗಿದ್ದು, ಈ ಸಂಬಂಧ ಜೈಲಿನಲ್ಲಿರುವ ಅಪರಾಧಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪದಕ ಪ್ರಕರಣ ಸಾಕಷ್ಟು ಕಗ್ಗಂಟಾಗಿದೆ.

ಇದನ್ನೂ ಓದಿ | ಸಚಿವ ಸುಧಾಕರ್‌ ನನ್ನ ಮಾತನ್ನೆಲ್ಲಿ ಕೇಳ್ತಾನೆ? ಅವನೊಬ್ಬ ಸುಳ್ಳ, ಮಹಾಕಳ್ಳ ಎಂದ ಸಿದ್ದರಾಮಯ್ಯ

Exit mobile version