Site icon Vistara News

ರೋಹಿಣಿ ಸಿಂಧೂರಿಗೆ ಸಂಕಷ್ಟ: ಆ.19ರಂದು ನಡೆಯಲಿದೆ ಈಜುಕೊಳ ಪ್ರಕರಣದ ತನಿಖೆ, ಸ್ಥಳ ಪರಿಶೀಲನೆ

rohini sinduri warns legal action against lucky ali

ಮೈಸೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನಡೆಸಿದ್ದಾರೆಂದು ಆರೋಪಿಸಲಾದ ಹಲವು ಅಕ್ರಮಗಳ ಬಗ್ಗೆ ತನಿಖೆ ಆರಂಭಗೊಂಡಿದೆ. ಆಗಸ್ಟ್‌ ೧೯ರಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ವಸತಿ ಇಲಾಖೆ ಕಾರ್ಯದರ್ಶಿ ಡಾ. ಜೆ. ರವಿಶಂಕರ್‌ ಅವರು ಆಗಮಿಸಿ ತನಿಖೆ ನಡೆಸಲಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಅವರು ಹಲವು ಅಕ್ರಮಗಳನ್ನು ನಡೆಸಿದ್ದಾರೆಂದು ಶಾಸಕ ಸಾ.ರಾ. ಮಹೇಶ್‌ ಅವರು ದೂರು ನೀಡಿದ್ದರು. ಇದನ್ನು ಪರಿಗಣಿಸಿ ಸರಕಾರ ವಸತಿ ಇಲಾಖೆಯ ಕಾರ್ಯದರ್ಶಿ ಡಾ. ಜೆ. ರವಿಶಂಕರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅವರು ಜುಲೈ ಅಂತ್ಯದಲ್ಲೇ ವಿಚಾರಣೆ ಆರಂಭ ಮಾಡಿದ್ದರು. ಆರಂಭಿಕ ಹಂತದಲ್ಲಿ ವಿಧಾನಸೌಧದ ೧೦೬ನೇ ಕೊಠಡಿಯಲ್ಲಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿತ್ತು. ಇದೀಗ ರವಿಶಂಕರ್‌ ಅವರೇ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಲಿದ್ದಾರೆ.

ಪ್ರಸಕ್ತ ಮುಜರಾಯಿ ಇಲಾಖೆಯ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಅವುಗಳಲ್ಲಿ ಪ್ರಮುಖವಾಗಿರುವುದು ಮೈಸೂರು ಡಿಸಿಯಾಗಿದ್ದಾಗ ಜಿಲ್ಲಾಧಿಕಾರಿ ನಿವಾಸದಲ್ಲಿ ನಿಯಮ ಬಾಹಿರವಾಗಿ ಈಜುಕೊಳ ನಿರ್ಮಾಣ ಮಾಡಿದ್ದಾರೆ, ವೆಟ್ರಿಫೈಡ್‌ ಟೈಲ್ಸ್‌ ಅಳವಡಿಸಿದ್ದಾರೆ ಎನ್ನುವುದು. ಅದರ ಜತೆಗೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೂರ್ವಾನುಮತಿ ಇಲ್ಲದೆ ೧೪.೭೧ ಲಕ್ಷ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ೧೪ ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು. ಮಾರುಕಟ್ಟೆಯಲ್ಲಿ ೧೦ರಿಂದ ೧೩ ರೂ.ಗೆ ಸಿಗುವ ಈ ಚೀಲಗಳನ್ನು ೫೨ ರೂ. ಕೊಟ್ಟು ಖರೀದಿ ಮಾಡಲಾಗಿತ್ತು ಎನ್ನುವುದು ಗಂಭೀರ ಆರೋಪ. ರೋಹಿಣಿ ಸಿಂಧೂರಿ ಅವರು ತೆರಿಗೆ ಹಣವನ್ನು ದುಂದುವೆಚ್ಚ್‌ ಮಾಡಿದ್ದಾರೆ ಎಂದು ಸಾ.ರಾ. ಮಹೇಶ್‌ ಆರೋಪಿಸಿದ್ದರು.

ಜಿಲ್ಲಾಧಿಕಾರಿ ನಿವಾಸ ವಸತಿ ಇಲಾಖೆಯ ಅಡಿಗೆ ಬರುವ ಹಿನ್ನೆಲೆಯಲ್ಲಿ ತನಿಖೆಯನ್ನು ಅವರಿಗೆ ವಹಿಸಲಾಗಿದೆ. ಇದೀಗ ಆಗಸ್ಟ್‌ ೧೯ರಂದು ರವಿಶಂಕರ್‌ ಅವರು ತನಿಖೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ | ಸಾ.ರಾ.ಮಹೇಶ್‌ ವಿರುದ್ಧ ಭೂ ಅಕ್ರಮ ದಾಖಲೆ ಬಿಡುಗಡೆ ಮಾಡಿದ ಆರ್‌ಟಿಐ ಕಾರ್ಯಕರ್ತ ಗಂಗರಾಜು

Exit mobile version