Site icon Vistara News

Rowdy politics | ಬೆತ್ತನಗೆರೆ ಶಂಕರ ರಾಜಕೀಯ ಪ್ರವೇಶಕ್ಕೆ ಪ್ರಯತ್ನ: ಬಿಜೆಪಿ ಬಾಗಿಲಲ್ಲಿ ಮತ್ತೊಬ್ಬ ರೌಡಿಶೀಟರ್‌

ಬೆತ್ತನಗೆರೆ ಶಂಕರ

ನೆಲಮಂಗಲ: ನೆಲಮಂಗಲದಲ್ಲಿ ಫೈಟರ್‌ ರವಿ ಬಿಜೆಪಿ ಸೇರ್ಪಡೆ, ಬೆಂಗಳೂರಿನಲ್ಲಿ ರೌಡಿ ಸೈಲೆಂಟ್‌ ಸುನಿಲ್‌ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದ ಬೆನ್ನಿಗೇ ರೌಡಿ ಪಾಲಿಟಿಕ್ಸ್‌ (Rowdy politics) ಚರ್ಚೆ ಜೋರಾಗಿದೆ. ಈ ಸರಣಿಯ ಮುಂದುವರಿದ ಭಾಗವಾಗಿ ನೆಲಮಂಗಲದ ಮತ್ತೊಬ್ಬ ರೌಡಿ ಶೀಟರ್‌ ಬೆತ್ತನಗೆರೆ ಶಂಕರ ರಾಜಕೀಯದ ಬಾಗಿಲಿಗೆ ಬಂದು ನಿಂತಿದ್ದಾನೆ. ಅಚ್ಚರಿ ಎಂದರೆ ಈತನೂ ಬಾಗಿಲು ತಟ್ಟುತ್ತಿರುವುದು ಬಿಜೆಪಿಯದ್ದೇ!

ನೆಲಮಂಗಲಕ್ಕೆ ರಕ್ತಮಂಗಲ ಎಂಬ ಹೆಸರು ತಂದ ಕುಖ್ಯಾತಿಯನ್ನು ಈತ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಬಿಜೆಪಿ ನಾಯಕರ ಜತೆಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಪಕ್ಷ ಸೇರ್ಪಡೆಯ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ.

ಬಿಎಸ್‌ ಯಡಿಯೂರಪ್ಪ ಅವರ ಜತೆ ಕಾಣಿಸಿಕೊಂಡ ಬೆತ್ತನಗೆರೆ ಶಂಕರ
ಬಿವೈ ವಿಜಯೇಂದ್ರ ಜತೆ

ಇತ್ತೀಚೆಗೆ ಮೈಸೂರಿನ ಹೆಗ್ಗಡದೇವನ ಕೋಟೆಯಲ್ಲಿ (ಎಚ್‌.ಡಿ. ಕೋಟೆ) ಸಮಾಜಸೇವೆ ಮಾಡುತ್ತಿರುವ ನಲ್ಲೂರು ಶಂಕರೇ ಗೌಡರು ಅಲಿಯಾಸ್‌ ಬೆತ್ತನಗೆರೆ ಶಂಕರ ರಾಜಕೀಯ ಪ್ರವೇಶಕ್ಕೆ ಅವಕಾಶಕ್ಕಾಗಿ ಕಾಯುತ್ತಿರುವುದು ಸುಳ್ಳಲ್ಲ. ಬಿಜೆಪಿ ನಾಯಕನೆಂದೇ ಗುರುತಿಸಿಕೊಂಡು ಕಾರ್ಯಕ್ರಮಗಳನ್ನೂ ಮಾಡಿರುವ, ಜಾಹೀರಾತುಗಳನ್ನೂ ನೀಡಿರುವ ಶಂಕರ, ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ಸಂಸದ ಶ್ರೀನಿವಾಸ ಪ್ರಸಾದ್‌, ಬಿ.ವೈ.ವಿಜಯೇಂದ್ರ, ಬಿ.ಸಿ. ಪಾಟೀಲ್‌, ಎಸ್‌ಟಿ ಸೋಮಶೇಖರ್‌ ಮೊದಲಾದವರ ಜತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜ ಸೇವೆಯ ಹೆಸರಿನಲ್ಲಿ ನಾನಾ ಮಠಾಧೀಶರ ಆಶೀರ್ವಾದವನ್ನೂ ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಚಾಮರಾಜ ನಗರದ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಜತೆ
ಸಚಿವ ಬಿ.ಸಿ. ಪಾಟೀಲ್‌ ಅವರ ಜತೆ

ಹಾಲಿನ ಡೇರಿಯಿಂದ ರಕ್ತಚರಿತೆ ಶುರು: ಬೆಚ್ಚಿ ಬೀಳಿಸಿದ ನಾಲ್ಕು ಕೊಲೆ
ನೆಲಮಂಗಲದ ರಕ್ತ ಸಿಕ್ತ ಇತಿಹಾಸದಲ್ಲಿ ಬೆತ್ತನಗೆರೆ ಶಂಕರ ಹೆಸರು ಪ್ರಮುಖವಾಗಿ ಹೇಳಿಬರುತ್ತದೆ. ಗ್ರಾಮದ ಹಾಲಿನ ಡೇರಿ ಅಧ್ಯಕ್ಷೀಯ ಚುನಾವಣೆ ವಿಚಾರಕ್ಕೆ ಆರಂಭವಾದ ರೌಡಿಸಂ ಬಳಿಕ ದೊಡ್ಡ ಮಟ್ಟಕ್ಕೇರಿತು. ಚುನಾವಣೆಯಲ್ಲಿ ಬಾಳೆಕಾಯಿ ಬಸವಯ್ಯ ಎಂಬವರ ವಿರುದ್ಧ ಪರಾಭವಗೊಂಡಿದ್ದ ಶಂಕರ ೨೦೦೫ರ ಜೂನ್‌ ೧೬ರಂದು ಬಸವಯ್ಯ ಅವರನ್ನೇ ಕೊಲೆ ಮಾಡಿದ್ದ.

ಬಾಳೆಕಾಯಿ ಬಸವಯ್ಯನ ಕೊಲೆ ಪ್ರಕರಣದಲ್ಲಿ ತನ್ನ ವಿರುದ್ಧ ಸಾಕ್ಷಿ ಹೇಳುತ್ತಾರೆ ಎಂಬ ಸಿಟ್ಟಿನಲ್ಲಿ ಮುಖ್ಯ ಸಾಕ್ಷಿಗಳಾಗಿದ್ದ ಲಾಯರ್ ದೇವರಾಜು ಮತ್ತು ಕೃಷ್ಣಮೂರ್ತಿ ಅವರನ್ನು ೨೦೦೬ರ ಮೇ ೫ರಂದು ಕೊಲೆ ಮಾಡಿದ್ದು ಭಯಾನಕ ಕೃತ್ಯವಾಗಿ ದಾಖಲಾಗಿತ್ತು. ಇದಕ್ಕಿಂತಲೂ ಭಯಾನಕವಾದ ಮತ್ತೊಂದು ಘಟನೆಯೆಂದರೆ ಲಾಯರ್‌ ದೇವರಾಜು ಕೊಲೆ ವಿಚಾರದಲ್ಲಿ ಸಾಕ್ಷಿ ಹೇಳಬಾರದು ಎಂದು ಅವರ ತಂದೆ ಬೈಲಪ್ಪ ಅವರನ್ನೇ ಕೊಂದು ಹಾಕಿದ್ದ ಶಂಕರ. ಅಂದರೆ ಬಾಳೆಕಾಯಿ ಬಸವಯ್ಯ ಅವರ ಒಂದು ಕೊಲೆಯ ಬೆನ್ನಲ್ಲಿ ಸಾಕ್ಷ್ಯ ಹೇಳುತ್ತಾರೆಂಬ ಕಾರಣಕ್ಕೆ ಇಬ್ಬರು ವಕೀಲರು ಮತ್ತು ವಕೀಲರೊಬ್ಬರ ತಂದೆಯನ್ನೇ ಶಂಕರ ಮುಗಿಸಿಬಿಟ್ಟಿದ್ದ!

ಉದ್ಯಮಿಯ ಅಪಹರಣ, ಕೊಲೆಯತ್ನ
೨೦೦೮ರ ಡಿಸೆಂಬರ್‌ ೧೫ರಂದು ಲ್ಯಾಂಡ್‌ ಡೆವಲಪರ್‌ ರಂಗಧಾಮಯ್ಯ ಅವರನ್ನು ಅಪಹರಿಸಿದ್ದಲ್ಲದೆ ಹಣಕ್ಕಾಗಿ ಬೇಡಿಕೆ ಇಟ್ಟು ಕೊಲೆ ಯತ್ನ ಮಾಡಿದ್ದ. ಅದಕ್ಕಿಂತ ಮೊದಲು ಅಕ್ಟೋಬರ್‌ ೨ರಂದು ಉದ್ಯಮಿ ಪುಟ್ಟಚನ್ನಪ್ಪನವರ ಮನೆ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದ ಶಂಕರ.

ಮತ್ತೊಬ್ಬ ರೌಡಿಯ ಅಕ್ಕನ ಗಂಡನ ಕೊಲೆ
ಈ ನಡುವೆ ೨೦೦೯ರ ಮಾರ್ಚ್‌ ೧೭ರಂದು ಬೆತ್ತನಗೆರೆ ಸೀನ ಎಂಬ ಮತ್ತೊಬ್ಬ ರೌಡಿಯ ಅಕ್ಕನ ಗಂಡ ದೇವೇಂದ್ರಪ್ಪ ಅಲಿಯಾಸ್‌ ಹ್ಯಾಡಾಳ್‌ ದೇವಿಯನ್ನು ಕೊಲೆ ಮಾಡಿದ್ದ. ದೇವಾಲಯವೊಂದರ ಮುಂಭಾಗದಲ್ಲೇ ಅತ್ಯಂತ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಕೊಲೆ ಮಾಡಲಾಗಿತ್ತು.

ಹಲವರ ಮೇಲೆ ಅಟ್ಯಾಕ್‌, ಹಣೆಗೆ ಗನ್‌ ಪಾಯಿಂಟ್‌
೨೦೦೯ರ ಸೆಪ್ಟೆಂಬರ್‌ ೧೯ರಂದು ಶಂಕರ ಮತ್ತು ಸಹಚರರು ಬಂಡೆ ಮಂಜನ ಮೇಲೆ ಅಟ್ಯಾಕ್‌ ಮಾಡಿದ್ದರು. ಅದಾದ ಬಳಿಕ ಡಿಸೆಂಬರ್‌ ೨೪ರಂದು ವಡೇರಹಳ್ಳಿ ಜಯರಾಮಯ್ಯನ ಮೇಲೆ ದಾಳಿ ನಡೆಸಿತ್ತು ಶಂಕರನ ಟೀಮ್‌. ತನ್ನ ವಿರೋಧಿಯಾಗಿರುವ ಬೆತ್ತನೆಗೆರೆ ಸೀನನಿಗೆ ವಡೇರಹಳ್ಳಿ ಜಯರಾಮಯ್ಯ ಆರ್ಥಿಕ‌ ನೆರವು ನೀಡಿತ್ತಿದ್ದರು ಎಂಬುದೇ ದಾಳಿಗೆ ಕಾರಣ. ಜಯರಾಮಯ್ಯನ ತಲೆಗೆ ಗನ್ ಪಾಯಿಂಟ್ ಇಟ್ಟಿದ್ದರು ಶಂಕರನ ಹುಡುಗರು. ಆದರೆ, ಇದು ಮಿಸ್‌ ಪೈರ್‌ ಆಗಿ ಜಯರಾಮಯ್ಯನ ಕೆನ್ನೆ ಸೀಳಿ ಜೀವ ಬಚಾವಾಗಿತ್ತು.

ಲವ್‌ ಕೇಸಿನಲ್ಲೂ ಮಧ್ಯ ಪ್ರವೇಶ
೨೦೧೦ರ ಜನವರಿ ೯ರಂದು ಪ್ರೇಮ ಪ್ರಕರಣದವೊಂದರಲ್ಲಿ ಮಧ್ಯ ಪ್ರವೇಶ ಮಾಡಿದ್ದ ಆರೋಪದಲ್ಲಿ ಗನ್‌ಮ್ಯಾನ್‌ ಗಂಗರಾಜು ಅವರ ಮೇಲೆ ಹಲ್ಲೆ ಮಾಡಲಾಗಿತ್ತು.

ಬಂಡೆ ಮಂಜ ಎಂದುಕೊಂಡು ಲಾಯರ್‌ ರವಿ ಕೊಲೆ
ಇನ್ನೊಬ್ಬ ರೌಡಿಯಾಗಿರುವ ಬಂಡೆ ಮಂಜನಿಗೂ ಬೆತ್ತನಗೆರೆ ಶಂಕರನಿಗೂ ಆಗಿ ಬರುತ್ತಿರಲಿಲ್ಲ. ಇಂಥ ಹೊತ್ತಲ್ಲಿ ಆತನ ಹತ್ಯೆಗೆ ಸ್ಕೆಚ್‌ ಹಾಕಿದ್ದ. ೨೦೧೦ರ ಜುಲೈ ೩ರಂದು ಕಾರು ಚಾಲನೆ ಮಾಡುತ್ತಿರುವುದು ಬಂಡೆ ಮಂಜ ಎಂದು ತಿಳಿದುಕೊಂಡು ಲಾಯರ್‌ ರವಿಯನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು.

ಬೆತ್ತನಗೆರೆ ಸೀನನ ಮೇಲೆ ದ್ವೇಷ
ಬೆತ್ತನಗೆರೆ ಶಂಕರ ಮತ್ತು ಸೀನನ ನಡುವೆ ತುಂಬಾ ಹಿಂದಿನಿಂದಲೇ ದ್ವೇಷವಿತ್ತು. ಇದು ಮುಂದುವರಿದು ೨೦೧೧ರ ಮಾರ್ಚ್‌ ೧೦ರಂದು ಮೈಸೂರಿನ ಕಾರಾಗೃಹದಲ್ಲೇ ಬೆತ್ತನಗೆರೆ ಸೀನನ ಮೇಲೆ ದಾಳಿ ನಡೆಸಿತ್ತು ಶಂಕರನ ಟೀಮ್‌. ಈ ನಡುವೆ ಬೆತ್ತನಗೆರೆ ಸೀನಾ ಹಾಗೂ ಶಂಕರ ಇಬ್ಬರ ಹಗೆತನದಲ್ಲಿ ಬೆಮೆಲ್ ಕೃಷ್ಣಪ್ಪ ಎಂಬಾತ ಜೀವ ತೆತ್ತಿದ್ದ.

ಶಂಕರನಿಗೆ ಬೆಮೆಲ್ ಕೃಷ್ಣಪ್ಪ ಸಾಥ್ ನೀಡುತ್ತಾನೆ ಎಂದು ಬಗೆದ ಸೀನ ಮತ್ತು ಗ್ಯಾಂಗ್‌ ೨೦೧೨ರ ಜುಲೈ ೨೫ರಂದು ಕೊಲೆ ಮಾಡಿತ್ತು.

ಜೈಲಿನಲ್ಲೂ ಐಷಾರಾಮಿ ಬದುಕು
ಆಗಾಗ ಜೈಲು ಸೇರುತ್ತಾ, ಜಾಮೀನು ಪಡೆಯುತ್ತಾ ಬಿಡುಗಡೆ ಆಗುತ್ತಿದ್ದ ಶಂಕರ ಜೈಲಿನಲ್ಲೂ ಐಷಾರಾಮಿ ಜೀವನ ನಡೆಸುತ್ತಿದ್ದ. ಆತ ಮಾಧ್ಯಮದವರಿಗೆ ಕರೆ ಮಾಡಿದ್ದು, ಐಷಾರಾಮಿಯಾಗಿ ಬದುಕುವುದನ್ನು ಅರಿತ ಪೊಲೀಸ್‌ ಇಲಾಖೆ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದ ಇಬ್ಬರು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಇಷ್ಟೇ ಅಲ್ಲ ಜೈಲಿನಲ್ಲೇ ಕುಳಿತುಕೊಂಡು ಹಫ್ತಾ ವಸೂಲಿ ಕೆಲಸವನ್ನು ಮಾಡುತ್ತಿದ್ದ. 2009ರಲ್ಲಿ ಹಫ್ತಾ ವಸೂಲಿ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಷ್ಟೆಲ್ಲ ಕ್ರಿಮಿನಲ್‌ ಇತಿಹಾಸ ಹೊಂದಿರುವ ಬೆತ್ತನಗೆರೆ ಶಂಕರ ಈಗ ಬಿಜೆಪಿ ಸೇರುವ ಧಾವಂತದಲ್ಲಿದ್ದಾನೆ ಎಂದು ತಿಳಿದುಬಂದಿದೆ. ಸೈಲೆಂಟ್‌ ಸುನಿಲ್‌ನನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಬೆತ್ತನಗೆರೆ ಶಂಕರನ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ | ರೌಡಿ ಸುನಿಲ್‌ BJP ಸೇರ್ಪಡೆ ಇಲ್ಲ ಎಂದ ನಳಿನ್‌ ಕುಮಾರ್‌ ಕಟೀಲ್‌; ಈಗಾಗಲೆ ಸೇರಿರುವ ಫೈಟರ್‌ ರವಿ ಬಗ್ಗೆ ʼಸೈಲೆಂಟ್‌ʼ

Exit mobile version