Site icon Vistara News

Karnataka Election 2023: ರಾಜ್ಯದ ಹಲವೆಡೆ ದಾಖಲೆ ಇಲ್ಲದ 1.10 ಕೋಟಿ ರೂಪಾಯಿ ಜಪ್ತಿ; 40 ಲಕ್ಷ ರೂ. ಗಿಫ್ಟ್‌ ವಶ

Rs 1.10 crore unaccounted cash seized in various parts of the state Rs 40 lakh Gift seized Karnataka Election 2023

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ನೀತಿ ಸಂಹಿತೆಯನ್ನು ಜಾರಿ ಮಾಡಲಾಗಿದೆ. ಈ ವೇಳೆ ರಾಜ್ಯದ ಹಲವು ಕಡೆ ಚೆಕ್‌ಪೋಸ್ಟ್‌ಗಳಲ್ಲಿ ಅಪಾರ ಪ್ರಮಾಣದ ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಲಬುರಗಿಯೊಂದರಲ್ಲೇ ಬರೋಬ್ಬರಿ 1 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ 1 ಕೋಟಿ 10 ಲಕ್ಷದ 89 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದ್ದರೆ, 40 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್‌ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಕಲಬುರಗಿಯಲ್ಲಿ 1 ಕೋಟಿ ರೂಪಾಯಿ ಜಪ್ತಿ

ಕಲಬುರಗಿ: ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪರತಾಬಾದ್ ಚೆಕ್‌ಪೋಸ್ಟ್‌‌ ಬಳಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಮುಡಬೂಳ ಎಂಬುವವರು ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದರು. ಸದ್ಯ ಒಂದು ಕೋಟಿ ರೂಪಾಯಿ ಜತೆಗೆ ರವಿ ಅವರನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಎಲ್ಲಿಂದ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಲಿಂಗಪರಿವರ್ತಿತ ಮಹಿಳೆಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅನ್ವಯ; ಪರಿಹಾರಕ್ಕೆ ಅರ್ಹಳು ಎಂದ ಕೋರ್ಟ್

ವೈದ್ಯರ ಬಳಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಹುಂಡಿ ಸೇರಿದ ದೇವರ ಹುಂಡಿಗೆ ಹಾಕಲು ತಂದಿದ್ದ 2.5 ಲಕ್ಷ ರೂಪಾಯಿ!

ಚಿಕ್ಕಮಗಳೂರು: ಇದೇ ಮೇ 10ರಂದು ವಿಧಾನಸಭಾ ಚುನಾವಣೆ (Karnataka Election 2023) ನಡೆಯಲಿರುವುದರಿಂದ ರಾಜ್ಯಾದ್ಯಂತ ನೀತಿಸಂಹಿತೆ ಜಾರಿಯಾಗಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ ಬಳಿ ವಾಹನ ತಪಾಸಣೆ ಮಾಡುವಾಗ ದಾಖಲೆ ಇಲ್ಲದ ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಹೀಗೆ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಇಷ್ಟಾದರೂ ಅಕ್ರಮಗಳು ನಡೆಯುತ್ತಲೇ ಇವೆ. ಈ ಮಧ್ಯೆ ದೇವಸ್ಥಾನದ ಹುಂಡಿಗೆ ಹಾಕಲು ಎಂದು ತೆಗೆದುಕೊಂಡು ಹೊರಟಿದ್ದ ವೈದ್ಯರೊಬ್ಬರ ಹಣವು ಪೊಲೀಸರ ಹುಂಡಿ ಸೇರುವಂತಾಗಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಹಣ ಪತ್ತೆಯಾಗಿದೆ. ಧರ್ಮಸ್ಥಳ-ಕಟೀಲ್ ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದ 2.50 ಲಕ್ಷ ರೂಪಾಯಿಯು ಈಗ ಪೊಲೀಸರ ವಶದಲ್ಲಿದೆ. ಪಾವಗಡ ಮೂಲದ ವೈದ್ಯಾಧಿಕಾರಿಯೊಬ್ಬರು ದೇವರ ಹುಂಡಿಗಾಗಿ ಪ್ರತಿದಿನ ಸಂಗ್ರಹಿಸಿ ಇಡುತ್ತಿದ್ದ ಹಣವನ್ನು ತಮ್ಮ ಫಾರ್ಚುನರ್‌ ಕಾರಿನಲ್ಲಿ ಕೊಂಡೊಯ್ಯುತ್ತಿದ್ದರು.

ಈ ಹಣವನ್ನು ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನಕ್ಕೆ ತೆರಳಿ ದೇವರ ಹುಂಡಿಗೆ ಸಮರ್ಪಣೆ ಮಾಡುವವರಿದ್ದರು. ಆದರೆ, ಈ ವೇಳೆ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಾರನ್ನು ತಡೆದಿದ್ದಾರೆ. ತಪಾಸಣೆ ನಡೆಸಿದಾಗ 2.50 ಲಕ್ಷ ರೂಪಾಯಿ ಇರುವುದು ಪತ್ತೆಯಾಗಿದೆ. ಇದಕ್ಕೆ ದಾಖಲೆಯನ್ನು ಪೊಲೀಸರು ಕೇಳಿದಾಗ, ಇದು ದೇವರಿಗೆ ಹಾಕಲೆಂದು ಎತ್ತಿಟ್ಟಿರುವ ಹಣವಾಗಿದ್ದು, ಇದಕ್ಕೆ ದಾಖಲೆ ಇಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಸಂಪೂರ್ಣ ಹಣವನ್ನು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ದಾಖಲೆ ಇಲ್ಲದೆ 50 ಸಾವಿರ ರೂಪಾಯಿವರೆಗೆ ಮಾತ್ರ ಹಣ ಸಾಗಾಟಕ್ಕೆ ಅವಕಾಶ ಇದೆ. ಆದರೆ, ಇವರ ಬಳಿ 2.50 ಲಕ್ಷ ರೂಪಾಯಿ ಇರುವುದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಗದಗಿನ ದುಂದೂರಿನಲ್ಲಿ ಎರಡು ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿರುವುದು

ಗದಗಿನ ದುಂದೂರಲ್ಲಿ 2 ಲಕ್ಷ ರೂ. ವಶ

ಗದಗ: ದುಂದೂರು ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಗದಗ-ಹುಬ್ಬಳ್ಳಿ ಹೈವೇನಲ್ಲಿ ದುಂದೂರು ಬಳಿ ನಿರ್ಮಿಸಿದ್ದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುವಾಗ ಹಣ ಪತ್ತೆಯಾಗಿದೆ. ಮುಂಬೈನಿಂದ ತೋರಣಗಲ್‌ಗೆ ತೆರಳುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುವ ಚುನಾವಣೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಮುಂಡರಗಿ ರಸ್ತೆಯಲ್ಲಿ ಹಾಕಲಾಗಿದ್ದ ಜೆಟಿ ಕಾಲೇಜ್ ಚೆಕ್‌ಪೋಸ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಶಾಲುಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 300ಕ್ಕೂ ಹೆಚ್ಚು ಶಾಲುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಜೀವ್ ಗಾಂಧಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯಪುರದ ಮುದ್ದೇಬಿಹಾಳದಲ್ಲಿ ವಶಪಡಿಸಿಕೊಂಡಿರುವ ಗಿಫ್ಟ್‌ ಬಾಕ್ಸ್‌ಗಳು

ವಿಜಯಪುರದಲ್ಲಿ 40 ಲಕ್ಷ ರೂ. ಮೌಲ್ಯದ ಗಿಫ್ಟ್‌ ಪತ್ತೆ

ವಿಜಯಪುರ: ಗುಮ್ಮಟನಗರಿ ವಿಜಯಪುರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಹೆಚ್ಚಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿರುವ ಬಾಲಾಜಿ ಶುಗರ್ಸ್ ಮೇಲೆ ಎರಡನೇ ಬಾರಿ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, 40 ಲಕ್ಷ ರೂಪಾಯಿ ಮೌಲ್ಯದ ಉಡುಗೊರೆಗಳುಳ್ಳ ಬಾಕ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾ. 27ರಂದು 2 ಕೋಟಿ 10 ಲಕ್ಷ ಮೌಲ್ಯದ ಗಿಫ್ಟ್‌ಗಳು ಪತ್ತೆಯಾಗಿದ್ದವು. ಆಗ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಭಾವಚಿತ್ರ ಇರುವ ಗೋಡೆ ಗಡಿಯಾರ, ಟೀ ಶರ್ಟ್‌ಗಳು ಪತ್ತೆಯಾಗಿದ್ದವು. ಈಗ ಮತ್ತೆ ಅಂದಾಜು 40 ಲಕ್ಷ ರೂ. ಮೌಲ್ಯದ ಗಿಫ್ಟ್‌ಗಳು ಪತ್ತೆಯಾಗಿವೆ. ಇನ್ನಷ್ಟು ಗಿಫ್ಟ್‌ಗಾಗಿ ಹುಡುಕಾಟ ನಡೆಸಲಾಗಿದೆ. ಬಾಲಾಜಿ ಶುಗರ್ಸ್ ಆವರಣದ ಕಬ್ಬಿನ ಹೊಟ್ಟು ಹಾಕಿರುವ ಸ್ಥಳದಲ್ಲಿ ಜೆಸಿಬಿ ಮೂಲಕ ಹುಡುಕಾಟ ನಡೆಸಲಾಗುತ್ತಿದೆ.

ಪಿಡಿ ಕೋಟೆ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ ರೂ. ವಶ

ಚಿತ್ರದುರ್ಗ (ಹಿರಿಯೂರು): ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 3 ಲಕ್ಷ ರೂ. ವನ್ನು ಚುನಾವಣಾ ಅಧಿಕಾರಿಗಳು (Election officials) ವಶಪಡಿಸಿಕೊಂಡ ಘಟನೆ ತಾಲೂಕಿನ ಪಿಡಿ ಕೋಟೆ ಚೆಕ್‌ ಪೋಸ್ಟ್ ಬಳಿ ನಡೆದಿದೆ. ಚೆಕ್‌ ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿದ್ದ ಮೂರು ಲಕ್ಷ ಹಣ ಇರುವುದು ಕಂಡುಬಂದಿದೆ. ಆಂಧ್ರಪ್ರದೇಶ ಮೂಲದ ಮಾರುತಿ ಎಂಬಾತ ಈ ಹಣವನ್ನು ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಬ್ಬಿನ ಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.‌

ಇದನ್ನೂ ಓದಿ: Karnataka Elections : ಮೊಳಕಾಲ್ಮುರು ಕಾಂಗ್ರೆಸ್‌ನಲ್ಲಿ ಬಂಡಾಯ; ಎನ್‌.ವೈ ಗೋಪಾಲಕೃಷ್ಣ ಸೇರ್ಪಡೆಗೆ ತೀವ್ರ ವಿರೋಧ

ದಾಖಲೆ ಇಲ್ಲದೆ 3.39 ಲಕ್ಷ ರೂ. ಸಾಗಿಸುತ್ತಿದ್ದ‌ ವೇಳೆ ವಶಕ್ಕೆ ಪಡೆದ ಅಧಿಕಾರಿಗಳ ತಂಡ

ಮುಂಡಗೋಡ: ದಾಖಲೆ ಇಲ್ಲದೆ 3.39 ಲಕ್ಷ ರೂಪಾಯಿಯನ್ನು ಸಾಗಿಸುತ್ತಿದ್ದ‌ ವೇಳೆ ಅಧಿಕಾರಿಗಳ ತಂಡ ತಾಲೂಕಿನ‌ ಅಗಡಿ ಚೆಕ್‌ಪೋಸ್ಟ್‌ನಲ್ಲಿ (Agadi Check Post) ಶುಕ್ರವಾರ (ಮಾ.31) ವಶಕ್ಕೆ ಪಡೆದಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಪಟ್ಟಣದ ನಿವಾಸಿ ಹಸನಸಾಬ ಎಂಬುವವರು ತಮ್ಮ ಸ್ಕೂಟಿಯಲ್ಲಿ ದಾಖಲೆ ಇಲ್ಲದೆ 3.39 ಲಕ್ಷ ರೂ. ವನ್ನು ತೆಗೆದುಕೊಂಡು ಹುಬ್ಬಳ್ಳಿಯಿಂದ ಮುಂಡಗೋಡಕ್ಕೆ ಬರುತ್ತಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ತಂಡ ಅಗಡಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದ ಕಾರಣ 3.39 ಲಕ್ಷ ರೂ.ವನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿನ ಸಿಪಿಐ ಎಸ್.ಎಸ್. ಸಿಮಾನಿ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚುನಾವಣೆ ಆಯೋಗದ ನಿರ್ದೇಶನದಂತೆ ಅಧಿಕಾರಿಗಳ ತಂಡ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆಸುತ್ತಿದೆ.

Exit mobile version