Site icon Vistara News

Karnataka Election: ಡಿಕೆಶಿ ಆಪ್ತನ ಬ್ಯಾಗ್‌ನಲ್ಲಿ 50 ಸಾವಿರ ರೂ. ಪತ್ತೆ; ಹೆಲಿಕಾಪ್ಟರ್‌ ತಪಾಸಣೆಗೆ ಶಿವಕುಮಾರ್‌ ಆಕ್ಷೇಪ

50 thousand rupees found in the bag of UB Shetty in Baindur.

#image_title

ಉಡುಪಿ: ಬೈಂದೂರು ಹರೇ ಶಿರೂರು ಹೆಲಿಪ್ಯಾಡ್ ಬಳಿ ತಪಾಸಣೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಆಪ್ತರೊಬ್ಬರ ಬ್ಯಾಗ್‌ನಲ್ಲಿ 50 ಸಾವಿರ ರೂಪಾಯಿ ಪತ್ತೆಯಾಗಿದ್ದು, ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಬೈಂದೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರನ್ನು ಸ್ವಾಗತಿಸಲು ಬಂದಿದ್ದ ಉದ್ಯಮಿ ಯು.ಬಿ. ಶೆಟ್ಟಿ ಅವರ ಕಾರಿನಲ್ಲಿ ನಗದು ಪತ್ತೆಯಾಗಿದೆ. ಮತ್ತೊಂದೆಡೆ ಪದೇಪದೆ ತಾವು ಪ್ರಯಾಣಿಸುವ ಹೆಲಿಕಾಪ್ಟರ್‌ನಲ್ಲಿ ಚುನಾವಣಾ ಅಧಿಕಾರಿಗಳು (Karnataka Election) ಪರಿಶೀಲನೆ ನಡೆಸುತ್ತಿರುವುದಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ಆಗಮಿಸಿದ್ದ ಯು.ಬಿ. ಶೆಟ್ಟಿ, ಬೈಂದೂರು ಹರೇ ಶಿರೂರು ಹೆಲಿಪ್ಯಾಡ್‌ಗೆ ಭಾನುವಾರ ಮಧ್ಯಾಹ್ನ ಆಗಮಿಸಿದ್ದಾರೆ. ಅವರ ಕಾರನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ 50,000 ರೂಪಾಯಿ ಪತ್ತೆಯಾಗಿದೆ. ನಂತರ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿ, ಯು.ಬಿ. ಶೆಟ್ಟಿಗೆ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ | Karnataka Election: ʼಹಾವಿನ ಹೆಡೆಯ ಮೇಲಿನ ಕಪ್ಪೆʼಯಂತೆ ಬಿಜೆಪಿ ಲಿಂಗಾಯತ ನಾಯಕರ ಸ್ಥಿತಿ: ಸಿದ್ದರಾಮಯ್ಯ

ಹೆಲಿಕಾಪ್ಟರ್‌ ತಪಾಸಣೆಗೆ ಡಿ.ಕೆ.ಶಿವಕುಮಾರ್‌ ಆಕ್ಷೇಪ

ತಾವು ಪ್ರಯಾಣಿಸಿದ ಹೆಲಿಕಾಪ್ಟರ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳ ತಪಾಸಣೆ ಮಾಡುತ್ತಿರುವುದಕ್ಕೆ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡೂ ದಿನ ನನ್ನ ಹೆಲಿಕ್ಯಾಪ್ಟರ್ ಅನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿದ್ದಾರೆ. ತಪಾಸಣೆಗೆ ನನ್ನ ಅಭ್ಯಂತರವಿಲ್ಲ. ಆದರೆ ಕಾಲಮಿತಿಯೊಳಗೆ ತಪಾಸಣೆ ಮಾಡಿ, ಚುನಾವಣಾ ಪ್ರಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹೇಳಿದ್ದು, ಜತೆಗೆ ಹೆಲಿಕಾಪ್ಟರ್‌ ತಪಾಸಣಾ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆ ಪ್ರಚಾರದ ನಡುವೆ ವಿವಿಧ ದೇವಾಲಯಗಳಿಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ. ಶನಿವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಭಾನುವಾರ ಶೃಂಗೇರಿಯಲ್ಲಿ ಕುಟುಂಬ ಸಮೇತ ಚಂಡಿಕಾ ಯಾಗ ನೆರವೇರಿಸಿದರು. ನಂತರ ಪ್ರಚಾರ ಕಾರ್ಯದಲ್ಲಿ ಅವರು ಪಾಲ್ಗೊಳ್ಳಲು ಬೈಂದೂರಿಗೆ ಆಗಮಿಸಿದಾಗ ಹೆಲಿಕಾಪ್ಟರ್‌ ತಪಾಸಣೆ ನಡೆಸಲಾಗಿದೆ.

ಇದನ್ನೂ ಓದಿ | Rahul Gandhi: ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ 5 ಸಾವಿರ ರೂಪಾಯಿ ದೇಣಿಗೆ ನೀಡಿದ ರಾಹುಲ್‌ ಗಾಂಧಿ

ಬೆಂಗಳೂರಿನಲ್ಲಿ 75 ಕೋಟಿ ರೂ. ದಾಟಿದ ಜಪ್ತಿ ವಸ್ತುಗಳ ಮೌಲ್ಯ

ಬೆಂಗಳೂರಿನಲ್ಲಿ ನೀತಿ ಸಂಹಿತೆ ಜಾರಿಯದಾಗಿನಿಂದ (ಮಾ.29) ಈವರೆಗೆ ಹಣ ಸೇರಿ 76.30 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರಲ್ಲಿ 11.35 ಕೋಟಿ ರೂಪಾಯಿ ನಗದು, 25.91 ಕೋಟಿ ರೂಪಾಯಿ ಮೌಲ್ಯದ 5.95 ಲಕ್ಷ ಲೀಟರ್‌ ಮದ್ಯ. 10.26 ಕೋಟಿ ರೂಪಾಯಿ ಮೌಲ್ಯದ 377 ಕೆ.ಜಿ ಡ್ರಗ್ಸ್, 17 ಕೋಟಿ ಮೌಲ್ಯದ ಚಿನ್ನ, ಗಿಫ್ಟ್‌ಗಳು ಹಾಗೂ 5.74 ಕೋಟಿ ರೂಪಾಯಿ ಮೌಲ್ಯದ 49,937 ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಇನ್ನು ಚುನಾವಣೆ ಅಕ್ರಮಗಳ ಸಂಬಂಧ ಈವರೆಗೆ 2,894 ಎಫ್ಐಆರ್ ದಾಖಲಾಗಿವೆ.

Exit mobile version