ಬೆಳಗಾವಿ: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಈ ನಡುವೆ ಜಿಲ್ಲೆಯ ಗೋಕಾಕ್ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ದಾಖಲೆ ಇಲ್ಲದೆ ಬಸ್‌ನಲ್ಲಿ ಸಾಗಿಸುತ್ತಿದ್ದ 65 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಳಗಾವಿಯಿಂದ ಗೋಕಾಕ್ ಮಾರ್ಗವಾಗಿ ಔರಾದ್‌ಗೆ ಹೊರಟಿದ್ದ ಬಸ್‌ನಲ್ಲಿ ಸೋಮವಾರ ರಾತ್ರಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಬಸ್‌ನಲ್ಲಿ ತಪಾಸಣೆ ನಡೆಸಿದಾಗ ವ್ಯಕ್ತಿಯ ಬ್ಯಾಗ್‌ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಹೀಗಾಗಿ ನಗದನ್ನು ವಶಕ್ಕೆ ಪಡೆದ ಪೊಲೀಸರು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಅಂಕಿತಾ ಬಿಲ್ಡರ್ಸ್ ಮಾಲೀಕನ ಮನೆ, ಕಚೇರಿ ಮೇಲೆ ಐಟಿ ದಾಳಿ
ಹುಬ್ಬಳ್ಳಿ: ನಗರದ ಮಂಜುನಾಥ್ ನಗರದ ನಿಲೀಜನ ರಸ್ತೆಯಲ್ಲಿರುವ ಅಂಕಿತಾ ಬಿಲ್ಡರ್ಸ್ ಮಾಲೀಕ ನಾರಾಯಣ ಬಿ. ಆಚಾರ್ಯ ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಏಕಕಾಲಕ್ಕೆ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಮಹಿಳೆಯ ಬರ್ಬರ ಹತ್ಯೆ; ಪತಿಯೇ ಕೃತ್ಯ ಎಸಗಿರುವ ಶಂಕೆ
ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೇ ಚಂದಾಪುರದಲ್ಲಿ ಮಹಿಳೆಯನ್ನು ಬರ್ಬರ ಹತ್ಯೆ ಮಾಡಲಾಗಿದ್ದು, ಪತಿಯೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹಳೇ ಚಂದಾಪುರದ ಟಿ.ಎಸ್.ಗ್ರ್ಯಾಂಡ್ ಬೇಕರಿ ಹಿಂಭಾಗದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೇಪಾಳ ಮೂಲದ ನಿಸು ಅಮರ್ ಕೊಲೆಯಾದ ಮಹಿಳೆ(28). ಈಕೆಯ ಗಂಡನ ಹೆಸರು ಅಮರ್ ಆಗಿದ್ದು, ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಇದೆ. ಭಾನುವಾರ ರಾತ್ರಿ ಪತಿ, ಪತ್ನಿ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಉಸಿರುಗಟ್ಟಿಸಿ ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆ ಮಕ್ಕಳನ್ನು ಅಜ್ಜಿ ಮನೆಗೆ ಅಮರ್ ಬಿಟ್ಟು ಬಂದಿದ್ದ. ಮಧ್ಯಾಹ್ನವಾದರೂ ಮಕ್ಕಳನ್ನು ಕರೆದೊಯ್ಯಲು ತಾಯಿ ಬಂದಿರಲಿಲ್ಲ. ಹೀಗಾಗಿ ಸಂಬಂಧಿಕರು ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಅಮರ್‌ಗಾಗಿ ಶೋಧ ನಡೆಸಲಾಗುತ್ತಿದೆ.