ಚಿತ್ರದುರ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಸರಸಂಘ ಚಾಲಕರಾದ ಡಾ. ಮೋಹನ್ ಭಾಗವತ್ ಅವರು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ದಲಿತ, ಹಿಂದುಳಿದ ವರ್ಗಗಳ ೨೧ ಮಠಾಧೀಶರೊಂದಿಗೆ ಮಂಗಳವಾರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂವಾದದಲ್ಲಿ ಅನೇಕ ಸ್ವಾಮೀಜಿಗಳು ಕೇಳಿದ ಪ್ರಶ್ನೆಗಳಿಗೆ ಮೋಹನ್ ಭಾಗವತ್ ಉತ್ತರ ಕೊಟ್ಟರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ; ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ. ಹಾಗಾಗಿ ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರವಾಗುತ್ತಾರೆ ಎಂದರು.
ನಮ್ಮ ಸಮಾಜದಲ್ಲಿ ಕೆಲವು ಭಾಗ ಹಿಂದುಳಿದಿದ್ದರಿಂದ ಸಂಪರ್ಕ ಮುರಿದು ಹೋಯಿತು. ಹಿಂದೂ ಸಮಾಜದ ಎಲ್ಲ ಅಂಗಗಳನ್ನೂ ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯ. ಮತ್ತೆ ಮತ್ತೆ ಸೇರುವುದರಿಂದ ಇದು ಸರಿಯಾಗುತ್ತದೆ, ಇದೇ ಸಮರಸತೆ. ಸಮಾಜದ ಎಲ್ಲ ಅಂಗಗಳ ಬಗ್ಗೆ ಸಂವೇದನೆ ಇರಬೇಕು. ಪರಸ್ಪರ ಆಗಾಗ ಸೇರುವುದರಿಂದ ನಮಗೆ ಪರಸ್ಪರರ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅರಿವು ಹೆಚ್ಚಾದಾಗ ಸಂಶಯಗಳು, ಅಪನಂಬಿಕೆಗಳು ದೂರವಾಗುತ್ತವೆ. ಆಗ ಮನಸ್ಸುಗಳು ಒಂದಾಗುತ್ತವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಮಠಗಳು ಹಾಗೂ ಸ್ವಾಮೀಜಿಗಳೂ ಪರಸ್ಪರ ಮತ್ತೆ ಮತ್ತೆ ಭೇಟಿ ಮಾಡುತ್ತಿರಬೇಕು ಎಂದು ತಿಳಿಸಿದರು.
ಇದನ್ನೂ ಓದಿ | ಸಂವಿಧಾನ ಧ್ವಂಸವೇ ಸಂಘದ ಉದ್ದೇಶ: ʼಆರ್‌ಎಸ್‌ಎಸ್ ಆಳ ಮತ್ತು ಅಗಲʼ ಕೃತಿಯಲ್ಲಿ ದೇವನೂರು ಮಹಾದೇವ
ಹಿಂದೂ ಸಮಾಜದ ಪ್ರಮುಖ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಷಮತೆ, ಅಸಮಾನತೆ ಇವುಗಳು ಮುಖ್ಯವಾಗಿ ಇರುವುದು ನಮ್ಮ ಮನಸ್ಸಿನಲ್ಲಿ. ಶಾಸ್ತ್ರಗಳಲ್ಲಿ ಸಮಸ್ಯೆ ಇಲ್ಲ. ಈ ಸಮಸ್ಯೆಗಳು ಹಲವಾರು ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿ ಉಳಿದಿವೆ. ಹಾಗಾಗಿ ಇದರ ಪರಿಹಾರಕ್ಕೂ ಸಮಯ ತಗುಲುತ್ತದೆ. ನಿಧಾನವಾಗಿ ಇದನ್ನು ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕಿದೆ. ಅಲ್ಲಿಯವರೆಗೂ ಸಹನೆ ಮತ್ತು ಧೈರ್ಯವನ್ನು ನಾವು ಹೊಂದಬೇಕು. ಭಾರತ ಭಾರತವಾಗಿ ಉಳಿಯಬೇಕಾದರೆ, ನಾವು ನಾವಾಗಿ ಉಳಿಯಬೇಕು. ಇಲ್ಲದಿದ್ದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಹಾಗಾಗಿ ಧರ್ಮವು ಎಲ್ಲ ಕಡೆ ಓತಪ್ರೋತವಾಗಿ ಇರುವಂತಾಗಬೇಕು ಎಂದು ಕರೆ ನೀಡಿದರು.
ಮತಾಂತರದಿಂದಾಗಿ ನಮ್ಮಲ್ಲಿ ಪ್ರತ್ಯೇಕತೆ ಭಾವನೆ ಮೂಡಿದೆ. ಹಾಗಾಗಿ ನಾವು ಮತಾಂತರವನ್ನು ತಡೆಯುವ ಪ್ರಯತ್ನ ಮಾಡಬೇಕು. ಆಧುನಿಕ ವಿದ್ಯಾಭ್ಯಾಸದೊಂದಿಗೆ ಶಿಕ್ಷಣ ಸಿಗುತ್ತಿದೆ. ಆದರೆ ಸಂಸ್ಕಾರ ಸ್ವಲ್ಪ ದೂರ ಆಗುತ್ತಿದೆ. ಸಂಸ್ಕಾರ, ನಿಷ್ಠೆ ದೃಢವಾಗಬೇಕು ಎಂದರೆ ಯಾವುದಾದರೂ ಒಂದು ಪೂಜಾ ಪದ್ಧತಿಯನ್ನು ಅನುಸರಿಸಬೇಕು. ಸ್ವಾಮೀಜಿಗಳು ಸಾಧನೆ, ನಿಯಮಿತ ತಪಸ್ಸನ್ನು ಮಾಡುವವರು. ಸಮಾಜವನ್ನು ಸಂಸ್ಕಾರವಂತ ಸಮಾಜವನ್ನಾಗಿ ಎಬ್ಬಿಸಿ ನಿಲ್ಲಿಸಬೇಕು. ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು. ಸೇವೆ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜವನ್ನು ಕಟ್ಟಿ ಬೆಳೆಸಬೇಕಿದೆ. ಸತ್ಯದ ಸಾಧನೆ ಮಾಡುತ್ತ ಸರ್ವರ ಸೇವೆ ಮಾಡಬೇಕಿದೆ. ಇಂದು ಮಠಾಧೀಶರು ಮಾಡುತ್ತಿರುವ ಪ್ರಯತ್ನ ಸಣ್ಣ ಪ್ರಮಾಣದಲ್ಲಿರಬಹುದು. ಆದರೆ ಇದು ಖಂಡಿತ ಹೆಮ್ಮರವಾಗಿ ಬೆಳೆಯುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಮ್ಮ ಜತೆ ಇದೆ. ನಮ್ಮದೂ ಒಂದು ಶೈಲಿ ಇದೆ. ನೀವು ಸಂಘವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ, ನಾವೆಲ್ಲರೂ ಹಿಂದೂ ಸಮಾಜದ ಅವಿಭಾಜ್ಯ ಅಂಗ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ಸೇರಿ ಹಿಂದುಳಿದ ಮತ್ತು ದಲಿತ ಒಕ್ಕೂಟದ 21ಕ್ಕೂ ಹೆಚ್ಚಿನ ಸಂತರು ಭಾಗವಹಿಸಿದ್ದರು.
ಇದನ್ನೂ ಓದಿ | ವಿಸ್ತಾರ Fact Check: ಮೋಹನ್ ಭಾಗವತ್ ಜತೆ ದ್ರೌಪದಿ ಮುರ್ಮು?; ಫೋಟೊ ಹಿಂದಿನ ಸತ್ಯವೇನು?